ADVERTISEMENT

ಕೇಂದ್ರ ಸರ್ಕಾರದ ಹಣ ದುರ್ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 31 ಜುಲೈ 2015, 11:13 IST
Last Updated 31 ಜುಲೈ 2015, 11:13 IST

ಹುಬ್ಬಳ್ಳಿ:  ‘ತಾಂತ್ರಿಕ ಶಿಕ್ಷಣ ವೃದ್ಧಿಗೆ ಕೇಂದ್ರ ಸರ್ಕಾರ ನೀಡುವ ಹಣವನ್ನು ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯರಾಗಿದ್ದ ಮೋಹನಕುಮಾರ ಮತ್ತು ಎಸ್‌ಡಿಎಂ ಸೊಸೈಟಿ ಕಾರ್ಯದರ್ಶಿ ಜಿನೇಂದ್ರ ಪ್ರಸಾದ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ ಪೀಪಲ್‌ ಆ್ಯಕ್ಷನ್‌ ಕಮಿಟಿ ಸದಸ್ಯ ಪ್ರೊ. ಪಾಂಡುರಂಗ ಜೋಶಿ, ‘ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ತಾಂತ್ರಿಕ ಶಿಕ್ಷಣದ ಗುಣಮಟ್ಟ ಅಭಿವೃದ್ಧಿ ಕಾರ್ಯಕ್ರಮ (TEQUIP – ಟೆಕ್ಯುಪ್‌)ದಡಿ ವಿಶ್ವಬ್ಯಾಂಕ್‌ ನೆರವಿನಿಂದ ನೀಡಿದ್ದ ₨ 2 ಕೋಟಿ ಹಣವನ್ನು ಮೋಹನಕುಮಾರ ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ತಪ್ಪು ಮಾಹಿತಿ ನೀಡಿ ರಾಜ್ಯ ಮತ್ತು ಕೇಂದ್ರಸರ್ಕಾರಕ್ಕೆ ವಂಚಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ’ ಎಂದು ತಿಳಿಸಿದರು.

‘ಟೆಕ್ಯುಪ್‌ ಅನುದಾನ ಪಡೆಯಲು ಕನಿಷ್ಠ ಶೇ 15ರಷ್ಟು ಕಾಯಂ ಪ್ರಾಧ್ಯಾಪಕರು ಎಂಜಿನಿಯರಿಂಗ್‌ ವಿಷಯದಲ್ಲಿ ಪಿಎಚ್‌.ಡಿ ಹೊಂದಿರಬೇಕು. ನಿಯಮದಂತೆ ಈ ಅರ್ಹತೆ ಹೊಂದಿರುವ 24 ಪ್ರಾಧ್ಯಾಪಕರು ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇರಬೇಕಿತ್ತು. ಆದರೆ, ಕೇವಲ 9 ಪ್ರಾಧ್ಯಾಪಕರು ಮಾತ್ರ ಈ ಅರ್ಹತೆ ಹೊಂದಿದ್ದಾರೆ’ ಎಂದು ಅವರು ಆರೋಪಿಸಿದರು.

‘ಲೋಕಾಯುಕ್ತರು ಈ ಪ್ರಕರಣವನ್ನು ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ವರ್ಗಾಯಿಸಿದ್ದಾರೆ. ಅವರು, ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಆಯುಕ್ತರಿಗೆ ಕಳಿಸಿದ್ದಾರೆ. ಆಯುಕ್ತರ ಮಾರ್ಗದರ್ಶನದಂತೆ ವಿದ್ಯಾಗಿರಿ ಪೊಲೀಸರು ಈ ಬಗ್ಗೆ ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ. ಆದರೂ ಈವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು. ಪೀಪಲ್‌ ಆ್ಯಕ್ಷನ್‌ ಕಮಿಟಿಯ ಸಂಚಾಲಕ ಅರವಿಂದ ಮೇಟಿ, ಎನ್‌.ಎಸ್‌. ನಾಡಿಗೇರ ಹಾಜರಿದ್ದರು.

ಕಾಲೇಜು ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ಕಾಲೇಜಿನಿಂದ ಹೊರಹಾಕಲಾದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ.
-ಎಸ್‌. ಮೋಹನಕುಮಾರ, ನಿಕಟಪೂರ್ವ ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.