ADVERTISEMENT

ಕೇಬಲ್‌ ದರ ಹೆಚ್ಚಳ: ವೀಕ್ಷಕರ ಜೇಬಿಗೆ ಕತ್ತರಿ

ಬಸವರಾಜ ಸಂಪಳ್ಳಿ
Published 11 ಸೆಪ್ಟೆಂಬರ್ 2017, 5:11 IST
Last Updated 11 ಸೆಪ್ಟೆಂಬರ್ 2017, 5:11 IST

ಹುಬ್ಬಳ್ಳಿ: ಜಿಎಸ್‌ಟಿ ನೆಪದಲ್ಲಿ ನಗರದ ಕೇಬಲ್‌ ಆಪರೇಟರ್‌ಗಳು ಸದ್ದಿಲ್ಲದೆ, ಕೇಬಲ್‌ ದರವನ್ನು ₹50 ಹೆಚ್ಚಳ ಮಾಡಿದ್ದಾರೆ. ಪ್ರತಿ ತಿಂಗಳು ₹ 200 ಶುಲ್ಕ ವಸೂಲಿ ಮಾಡುತ್ತಿದ್ದ ಆಪರೇಟರ್‌ಗಳು, ಆಗಸ್ಟ್‌ನಿಂದ ₹250 ಶುಲ್ಕ ವಸೂಲಿ ಮಾಡತೊಡಗಿದ್ದು, ಇದನ್ನು ಗ್ರಾಹಕರು ತೀವ್ರವಾಗಿ ವಿರೋಧಿಸಿದ್ದಾರೆ.

‘ಜೆಎಸ್‌ಟಿ ಜಾರಿಯಾದ ಬಳಿಕ ಕೇಬಲ್‌ ದರ ಹೆಚ್ಚಳವಾಗಿದೆ ಹಾಗೂ ಸನ್‌ ನೆಟ್‌ವರ್ಕ್‌ ತನ್ನ ಪ್ಯಾಕೇಜ್‌ ದರವನ್ನು ಹೆಚ್ಚಳ ಮಾಡಿದೆ. ಹೀಗಾಗಿ ಕೇಬಲ್‌ ದರವನ್ನು ಜಾಸ್ತಿ ಮಾಡಿದ್ದೇವೆ’ ಎಂದು ರಾಜನಗರ ವ್ಯಾಪ್ತಿಯಲ್ಲಿ ಕೇಬಲ್‌ ಸಂಪರ್ಕ ಕಲ್ಪಿಸಿರುವ ಮಾರುತಿ ಸ್ಟಾರ್‌ ನೆಟ್‌ವರ್ಕ್‌ನ ಆಪರೇಟರ್‌ ದೇವೇಂದ್ರಪ್ಪ ಹಡಗಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಕೊಳೆಗೇರಿಗಳಲ್ಲಿ ₹20 ರಿಂದ ₹30 ಹೆಚ್ಚಳ ಮಾಡಿದ್ದೇವೆ. ಇತರೆ ಪ್ರದೇಶಗಳಲ್ಲಿ ₹50 ಹೆಚ್ಚಳ ಮಾಡಿದ್ದೇವೆ’ ಎಂದು ಅವರು ಹೇಳಿದರು. ‘ರಾಜನಗರ, ಫಾರೆಸ್ಟ್‌ ಕಾಲೊನಿ, ವಿಶ್ವೇಶ್ವರ ನಗರ, ಆದರ್ಶನಗರ, ವಿಜಯನಗರ ಮತ್ತಿತರ ಕಡೆಗಳಲ್ಲಿ ಆಗಸ್ಟ್‌ನಿಂದ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದ್ದು, ಇನ್ನುಳಿದ ಪ್ರದೇಶಗಳಲ್ಲಿ ಶೀಘ್ರದಲ್ಲೇ ಹೆಚ್ಚಿನ ದರ ವಸೂಲಿ ಮಾಡಲಾಗುವುದು’ ಎಂದು ಅವರು ಹೇಳಿದರು.

ADVERTISEMENT

ಆದರೆ, ಜಿಎಸ್‌ಟಿ ದರ ಮತ್ತು ಸನ್‌ ನೆಟ್‌ವರ್ಕ್‌ ಪ್ಯಾಕೇಜ್‌ ದರ ಎಷ್ಟು ಹೆಚ್ಚಳ ಆಗಿದೆ ಎಂಬುದರ ಬಗ್ಗೆ ಆಪರೇಟರ್‌ಗಳು ಸ್ಪಷ್ಟ ಮಾಹಿತಿ ನೀಡದಿರುವುದು ಗ್ರಾಹಕರ ಅನುಮಾನಗಳಿಗೆ ಕಾರಣವಾಗಿದೆ.

ಕೇವಲ ಎರಡು ವರ್ಷಗಳ ಈಚೆಗೆ ಸೆಟ್‌ಅಪ್‌ ಬಾಕ್ಸ್‌ ಅಳವಡಿಕೆಯಾದ ಬಳಿಕ ಕೇಬಲ್‌ ದರ ಪರಿಷ್ಕರಣೆ ಮಾಡಿದ್ದ ಆಪರೇಟರ್‌ಗಳು, ಇದೀಗ ಮತ್ತೆ ದರ ಹೆಚ್ಚಳ ಮಾಡಿರುವುದು ಗ್ರಾಹಕರ ವಿರೋಧಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ ಏಷ್ಯನ್‌ ನೆಟ್‌, ಇ–ಡಿಜಿಟಲ್‌, ಬಿಆರ್‌ಡಿಸಿ, ಇನ್‌ ಕೇಬಲ್‌, ಸಂಪರ್ಕ ನೆಟ್‌ವರ್ಕ್‌, ಹಾಥ್‌ವೇ, ಡೆನ್‌ ಮತ್ತಿತರರ ಕಂಪೆನಿಗಳ ಆಪರೇಟರ್‌ಗಳು ಮನೆ, ಮನೆಗೆ ಕೇಬಲ್‌ ಸಂಪರ್ಕ ಕಲ್ಪಿಸಿವೆ.

ಗ್ರಾಹಕರಿಗೆ ಲಭಿಸದ ಆಯ್ಕೆ ಸ್ವಾತಂತ್ರ್ಯ: ‘ಸೆಟ್‌ ಟಾಪ್‌ ಬಾಕ್ಸ್‌ ಅಳವಡಿಕೆ ಕಡ್ಡಾ ಯವಾದ ಬಳಿಕ ಗ್ರಾಹಕರು ತಮಗೆ ಇಷ್ಟ ವಾದ ಟಿವಿ ಚಾನಲ್‌ ಪ್ಯಾಕೇಜ್‌ ಹಾಕಿಸಿ ಕೊಳ್ಳಲು (ಕಂಡೀಷನಲ್‌  ಆ್ಯಕ್ಸಸ್‌ ಸಿಸ್ಟಂ) ಅವಕಾಶವಿದ್ದರೂ ಸಹ ನಗರ ದಲ್ಲಿ ಈತನಕ ಕೇಬಲ್‌ ಆಪರೇಟರ್‌ಗಳು ಗ್ರಾಹಕರಿಗೆ ಈ ಸೌಲಭ್ಯ ಒದಗಿಸಿಲ್ಲ’ ಎಂದು ವಿಜಯನಗರ ನಿವಾಸಿ ಉಮೇಶ ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಚಿತ ಚಾನೆಲ್‌ ಸಂಪರ್ಕಕ್ಕೆ ಕನಿಷ್ಠ ₹100 ದರ ನಿಗದಿ ಪಡಿಸಲಾಗಿದೆ. ಉಳಿದಂತೆ ಪೇ ಚಾನೆಲ್‌ ಪ್ಯಾಕೇಜ್‌ ಆಧರಿಸಿ ದರದಲ್ಲಿ ಏರಿಕೆಯಾಗುತ್ತದೆ. ಆದರೆ, ಆಪರೇಟರ್‌ಗಳು ವೀಕ್ಷಕರಿಗೆ ಅಗತ್ಯವಿರುವ ಮತ್ತು ಇಲ್ಲದ ಎಲ್ಲ ಚಾನೆಲ್‌ಗಳ ಸಂಪರ್ಕವನ್ನು ಕಲ್ಪಿಸಿ ತಮ್ಮ ಲಾಭಕ್ಕಾಗಿ ಅಧಿಕ ದರ ವಸೂಲಿ ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ಸೆಟ್‌ಟಾಪ್‌ ಬಾಕ್ಸ್‌ಗಳಲ್ಲಿ ಚಾನೆಲ್‌ ಪ್ಯಾಕೇಜ್‌ ಆಯ್ಕೆ ಮಾಡಿಕೊಳ್ಳುವ ಸಾಫ್ಟ್‌ವೇರ್‌ ಇನ್ನೂ ಅಳವಡಿಕೆಯಾಗಿಲ್ಲ. ಹೀಗಾಗಿ 300ಕ್ಕೂ ಹೆಚ್ಚು ಚಾನೆಲ್‌ಗಳನ್ನು ಕೇಬಲ್‌ ಮೂಲಕ ಪ್ರಸಾರ ಮಾಡಲಾಗುತ್ತಿದ್ದು, ಇದಕ್ಕೆ ಒಟ್ಟಾರೆಯಾಗಿ ಶುಲ್ಕ ತೆಗೆದುಕೊಳ್ಳುತ್ತಿದ್ದೇವೆ’ ಎಂದು ಆಪರೇಟರ್‌ ದೇವೇಂದ್ರಪ್ಪ ಹಡಗಲಿ ಹೇಳಿದರು.

‘ನವೆಂಬರ್ ಅಥವಾ ಡಿಸೆಂಬರ್‌ಗೆ ಸೆಟ್‌ಟಾಪ್‌ ಬಾಕ್ಸ್‌ಗಳಿಗೆ ಕಂಡೀಷನಲ್‌ ಆ್ಯಕ್ಸಸ್‌ ಸಿಸ್ಟಂ ಸಾಫ್ಟ್‌ವೇರ್‌ ಅಳವಡಿಕೆಯಾಗುವ ಸಾಧ್ಯತೆ ಇದ್ದು, ಆ ಬಳಿಕ ವೀಕ್ಷಕರು ತಮಗೆ ಬೇಕಾದ ಚಾನೆಲ್‌ಗಳ ಪ್ಯಾಕೇಜ್‌ ಹಾಕಿಸಿಕೊಳ್ಳಬಹುದಾಗಿದೆ’ ಎಂದರು.

ಡಿಸಿ ಅಧ್ಯಕ್ಷತೆಯ ಸಮಿತಿ ನಿಷ್ಕ್ರಿಯ
2017ರ ಮಾರ್ಚ್‌ 3ರಂದು ಕೇಂದ್ರ ಸರ್ಕಾರ ಕೇಬಲ್‌ ದರ ಪರಿಷ್ಕರಿಸಿದ್ದು, 100 ಚಾನೆಲ್‌ಗಳಿಗೆ ಮಾಸಿಕ ₹130 ಬಾಡಿಗೆ ಮತ್ತು ತೆರಿಗೆ ವಿಧಿಸಿದೆ. ಹೆಚ್ಚುವರಿ 25 ಎಸ್‌.ಡಿ. ಚಾನೆಲ್‌ಗಳಿಗೆ ₹20 ಬಾಡಿಗೆ ಹಾಗೂ ತೆರಿಗೆ ನಿಗದಿಪಡಿಸಿದೆ.

ಇದರ ಅನ್ವಯವೇ ಶುಲ್ಕ ಸಂಗ್ರಹಿಸುವಂತೆ ಆಯಾ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.  ಆದರೆ, ಧಾರವಾಡದಲ್ಲಿ ಇದುವರೆಗೂ ಈ ಸಮಿತಿ ಸಭೆ ನಡೆಸದೇ ನಿಷ್ಕ್ರಿಯವಾಗಿದೆ ಎಂಬುದು ವೀಕ್ಷಕರ ಆರೋಪವಾಗಿದೆ. ಈ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿಯವರಿಗೆ ಹಲವು ಬಾರಿ ಕರೆ ಮಾಡಿದರೂ, ಅವರು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.