ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 6:10 IST
Last Updated 19 ನವೆಂಬರ್ 2017, 6:10 IST
ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳು ಹಾಗೂ ಸಂಬಂಧಿಕರು
ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳು ಹಾಗೂ ಸಂಬಂಧಿಕರು   

ಹುಬ್ಬಳ್ಳಿ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ ತಿದ್ದುಪಡಿ ಮಸೂದೆ ವಿರೋಧಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ವೈದ್ಯರು ನಡೆಸುತ್ತಿದ್ದ ಪ್ರತಿಭಟನೆ ಕೈಬಿಟ್ಟಿದ್ದರಿಂದ ಖಾಸಗಿ ಆಸ್ಪತ್ರೆಗಳು ಪುನರಾರಂಭಗೊಂಡವು. ಒಪಿಡಿ ಮತ್ತು ತುರ್ತು ಚಿಕಿತ್ಸೆ ಸೇರಿದಂತೆ ಇನ್ನಿತರೆ ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಶುಕ್ರವಾರ ಸಂಜೆಯಿಂದಲೇ ಕೆಲ ಆಸ್ಪತ್ರೆಗಳಲ್ಲಿ ಒಪಿಡಿ ತೆರೆಯಲಾಗಿತ್ತು. ಪ್ರಯೋಗಾಲಯಗಳೂ ತೆರೆದಿದ್ದವು.

ವೈದ್ಯರು, ಶುಶ್ರೂಷಕಿಯರು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದರು. ಚಿಕಿತ್ಸೆಗಾಗಿ ಜನರೂ ಆಗಮಿಸಿದ್ದರು. ಕಿಮ್ಸ್‌ ಮತ್ತು ಚಿಟಗುಪ್ಪಿ ಆಸ್ಪತ್ರೆಗಳಲ್ಲಿ  ಶನಿವಾರ ರೋಗಿಗಳ ಸಂಖ್ಯೆ ಅಷ್ಟಾಗಿ ಕಂಡುಬರಲಿಲ್ಲ.

‘ಅವಳಿ ನಗರದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಪುನರಾರಂಭಗೊಂಡಿವೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ವೈದ್ಯಕೀಯ ಸಂಘದ ಹುಬ್ಬಳ್ಳಿ–ಧಾರವಾಡ ಘಟಕದ 800 ಮಂದಿ ವೈದ್ಯರು ಕೆಲಸಕ್ಕೆ ಹಾಜರಾಗಿದ್ದಾರೆ. ಶುಕ್ರವಾರ ಸಂಜೆಯಿಂದಲೇ ಕೆಲ ಆಸ್ಪತ್ರೆಗಳಲ್ಲಿ ಜನರು ಒಪಿಡಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ’ ಎಂದು ಭಾರತೀಯ ವೈದ್ಯಕೀಯ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಬಿ. ನಿಟಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.