ADVERTISEMENT

ಗೋ.ಮಧುಸೂದನ್ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 8:42 IST
Last Updated 21 ನವೆಂಬರ್ 2017, 8:42 IST

ಧಾರವಾಡ: ‘ಡಾ.ಬಿ.ಆರ್‌.ಅಂಬೇಡ್ಕರ್‌ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಗೋ.ಮಧುಸೂದನ್  ವಿರುದ್ಧ ಕಾನೂನು ಕ್ರಮ ಜರುಗಿಸಬೇಕು‘ ಎಂದು ಉತ್ತರ ಕರ್ನಾಟಕ ಛಲವಾದಿ ಮಹಾಸಭಾ, ಕರ್ನಾಟಕ ರೈತ ಸಂಘ, ಮಾತೋಶ್ರೀ ರಮಾಭಾಯಿ ಅಂಬೇಡ್ಕರ್‌ ಮಹಿಳಾ ಮಂಡಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

‘ದಲಿತ ಬರೆದ ಸಂವಿಧಾನ ನಮ್ಮ ದೇಶ ಸಂವಿಧಾನವೇ ಅಲ್ಲ. ನಾನು ಈ ಸಂವಿಧಾನವನ್ನು ವಿರೋಧಿಸುತ್ತೇನೆ’ ಎಂದು ಮಧುಸೂದನ ಅವರು ಖಾಸಗಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆವೇಷಭರಿತರಾಗಿ ಹೇಳಿಕೆ ನೀಡುವ ಮೂಲಕ  ಅಂಬೇಡ್ಕರ್‌ ಹಾಗೂ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅಲ್ಲದೇ, ದೇಶದ ಸಮಸ್ತ ಶೋಷಿತ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ದಲಿತ ಪದ ಬಳಸಿ ವಿವಾದಾತ್ಮಕ ಹೇಳಿಕೆ ನೀಡಿ ಶಾಂತಿ ಹಾಗೂ ಸೌಹಾರ್ದತೆಗೆ ಭಂಗ ತಂದ ಅವರನ್ನು ದೇಶದ್ರೋಹ,  ಜಾತಿ ನಿಂದನೆ, ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ADVERTISEMENT

ಇಲ್ಲದಿದ್ದರೆ ಶೋಷಿತ ಸಮುದಾಯದ ಸಂಘಟನೆಗಳಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ದಲಿತ ಮುಖಂಡರಾದ ರಾಜು ನರೇಗಲ್‌, ಸುರೇಶ ನವಲೂರು, ಎಸ್‌.ಡಿ.ಹೊಸಮನಿ, ದೇವೇಂದ್ರ ಲಿಂಗದಾಳ, ಲಕ್ಷ್ಮಣ ಬಕ್ಕಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.