ADVERTISEMENT

ಚೀನಾ ಉತ್ಪನ್ನ ಮಾರಾಟಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 6:05 IST
Last Updated 26 ಜುಲೈ 2017, 6:05 IST

ಹುಬ್ಬಳ್ಳಿ: ‘ಚೀನಾ ನಮ್ಮ ದೇಶದ ಮೇಲೆ ಯುದ್ಧ ಮಾಡುವ ಎಚ್ಚರಿಕೆ ನೀಡುತ್ತಿದೆ. ಆದ್ದರಿಂದ ಆ ದೇಶದ ಯಾವ ಉತ್ಪನ್ನಗಳನ್ನೂ ಮಾರಾಟ ಮಾಡಬಾರದು’ ಎಂದು ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಜಾಗೃತಿ ಮೂಡಿಸಿದರು.

ದುರ್ಗದ ಬೈಲ್‌ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಚೀನಾದ ಉತ್ಪನ್ನಗಳ ಬಳಕೆ ನಿಷೇಧಿಸಿ, ಭಾರತವನ್ನು ಉಳಿಸಿ ಎಂದು ವ್ಯಾಪ್ಯಾರಸ್ಥರಲ್ಲಿ ಮನವಿ ಮಾಡಿದರು. ಚೀನಾದ ಮೊಬೈಲ್‌ಗಳ ಭಿತ್ತಿಚಿತ್ರವನ್ನು ಸುಟ್ಟು ಪ್ರತಿಭಟನೆ ನಡೆಸಿದರು. ನಂತರ ಬಟರ್‌ ಮಾರುಕಟ್ಟೆಯವರೆಗೆ ತೆರಳಿ  ಜಾಗೃತಿ ಮೂಡಿಸಿದರು.

ಬಜರಂಗದಳದ ಜಿಲ್ಲಾ ಸಂಚಾಲಕ ಶಿವಾನಂದ ಸತ್ತಿಗೇರಿ ಮಾತನಾಡಿ ‘ದೇಶದ ಗಡಿಯಲ್ಲಿ ಚೀನಾ ಅತಿಕ್ರಮಣ ಪ್ರವೇಶ ಮಾಡುತ್ತಿದೆ. ವಿನಾಕಾರಣ ಕಿರುಕುಳ ಕೊಡುತ್ತಿದೆ. ಆದ್ದರಿಂದ ಆ ದೇಶದ ಉತ್ಪನ್ನಗಳ ಮಾರಾಟ ನಿಲ್ಲಿಸಿ. ದೇಶದ ರಕ್ಷಣೆಗೆ ಎಲ್ಲರೂ ಒಂದಾಗಿ’ ಎಂದು ಹೇಳಿದರು.

ADVERTISEMENT

‘ಹಿಂದೆ ಚೀನಾ ಜೊತೆ ಯುದ್ಧ ನಡೆದಾಗ ನಮ್ಮ ದೇಶದ ಪರಿಸ್ಥಿತಿ ಬೇರೆಯೇ ಇತ್ತು. ಆದರೆ ಈಗಿರುವ ಪರಿಸ್ಥಿತಿಯೇ ಬೇರೆ. ಎದುರಾಳಿ ಎಷ್ಟೇ ಬಲಿಷ್ಠವಾದರೂ ತಿರುಗೇಟು ಕೊಡುವ ಶಕ್ತಿ ನಮ್ಮ ದೇಶದ ಸೈನಿಕರಲ್ಲಿದೆ. ಚೀನಾ ಉತ್ಪನ್ನಗಳ ಮಾರಾಟ ನಿಷೇಧಿಸುವ ಮೂಲಕ ವ್ಯಾಪಾರಿಗಳು ಸೈನಿಕರ ಬಲ ಹೆಚ್ಚಿಸಬೇಕು’ ಎಂದು ಅವರು ಮನವಿ ಮಾಡಿದರು.

ಬಜರಂಗದಳದ ಸಹ ಸಂಚಾಲಕ ಗಂಗಾಧರ ಸಂಗಮಶೆಟ್ಟರ, ವಿಶ್ವ ಹಿಂದೂ ಪರಿಷತ್‌ನ ಧರ್ಮ ಪ್ರಚಾರಕ ಮಲ್ಲಿಕಾರ್ಜುನ ಸತ್ತಿಗೇರಿ, ಕಾರ್ಯಕರ್ತರಾದ ಆನಂದ, ವಿನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.