ADVERTISEMENT

ಜಿಎಸ್‌ಟಿ ವಿರೋಧಕ್ಕೆ ಮಾಹಿತಿ ಕೊರತೆ ಕಾರಣ

‘ಜಿಎಸ್‌ಟಿ’ ಕುರಿತ ಉಪನ್ಯಾಸದಲ್ಲಿ ಲೆಕ್ಕ ಪರಿಶೋಧಕ ಎಸ್‌. ವಿಶ್ವನಾಥ್ ಭಟ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 5:05 IST
Last Updated 12 ಜುಲೈ 2017, 5:05 IST

ಹುಬ್ಬಳ್ಳಿ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ)ಯಿಂದ ತೆರಿಗೆ ನೀತಿಯಲ್ಲಿ ಪಾರದರ್ಶಕತೆ ಬರಲಿದೆ. ತೆರಿಗೆ ಕಳ್ಳತನಕ್ಕೆ ತಡೆ ಬೀಳಲಿದೆ’ ಎಂದು ಲೆಕ್ಕ ಪರಿಶೋಧಕ ಎಸ್. ವಿಶ್ವನಾಥ್ ಭಟ್‌ ಅಭಿಪ್ರಾಯಟ್ಟರು.

ನಗರದಲ್ಲಿ ಮಂಗಳವಾರ ‘ಜಿಎಸ್‌ಟಿ’ ಕುರಿತು ಉಪನ್ಯಾಸ ನೀಡಿದ ಅವರು, ‘ಜಿಎಸ್‌ಟಿ ಜಾರಿಗೆ ಮುಂಚೆ ದೇಶದ 2 ಕೋಟಿ ಜನ, 125 ಕೋಟಿ ಮಂದಿಯ ತೆರಿಗೆ ಭಾರ ಹೊತ್ತಿದ್ದರು. ಶೇ 20ರಷ್ಟು ಕಂಪೆನಿಗಳು ಶೇ 80ರಷ್ಟು ತೆರಿಗೆ ಪಾವತಿಸುತ್ತಿದ್ದವು. ಜಿಎಸ್‌ಟಿ ಜಾರಿ ಬಳಿಕ ಎಲ್ಲರೂ ಅವರವರ ಪಾಲಿನ ತೆರಿಗೆ ಪಾವತಿಸಬೇಕು’ ಎಂದರು.

‘ದೇಶದ ಶೇ 75ರಷ್ಟು ವರ್ತಕರು ₹ 75 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುತ್ತಿದ್ದಾರೆ. ಇದುವರೆಗೆ ಶೇ 44ರಷ್ಟು ವ್ಯಾಪಾರ ಮತ್ತು ಉದ್ಯಮಗಳು ಮಾತ್ರ ತೆರಿಗೆ ವ್ಯಾಪ್ತಿಯಲ್ಲಿದ್ದವು. ಇನ್ನುಳಿದ ಶೇ 56ರಷ್ಟು ವಾಣಿಜ್ಯ ಚಟುವಟಿಕೆಗಳು ತೆರಿಗೆಯಿಂದ ನುಣುಚಿಕೊಂಡಿದ್ದವು. ಇನ್ನು ಮುಂದೆ ಅವು ಸಹ ತೆರಿಗೆ ವ್ಯಾಪ್ತಿಗೆ ಬರಲಿವೆ. ಇದರಿಂದ ದೇಶದ ಬೊಕ್ಕಸ ತುಂಬಲಿದೆ. ಲೆಕ್ಕ ಸಿಗದ ವ್ಯವಹಾರ ಕೊನೆಗೊಳ್ಳಲಿವೆ’ ಎಂದರು.

ADVERTISEMENT

‘ಜಿಎಸ್‌ಟಿಯಿಂದಾಗಿ ದೇಶದಾದ್ಯಂತ ಚೆಕ್‌ಪೋಸ್ಟ್‌ಗಳು ಬಂದ್ ಆಗಿವೆ. ದಾರಿಯುದ್ದಕ್ಕೂ ತೆರಿಗೆ ಕಟ್ಟಿಕೊಂಡು ಬರುವ ಪ್ರಮೇಯ ಇನ್ನಿಲ್ಲ. ಸರಕು ತುಂಬಿದ ಲಾರಿಗಳು ನಿಗದಿತ ಸ್ಥಳ ಸೇರಲು ತೆಗೆದುಕೊಳ್ಳುತ್ತಿದ್ದ ದೀರ್ಘ ಅವಧಿ ಕಡಿಮೆಯಾಗಲಿದೆ. ಇದರಿಂದ ವ್ಯಾಪಾರಿಗಳು ಮತ್ತು ಉದ್ಯಮಗಳಿಗೆ ಅನುಕೂಲವಾಗಲಿದೆ’ ಎಂದರು.

‘ದೈನಂದಿನ ಬಳಸುವ ವಸ್ತುಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದೆ. ಕೆಲ ವಸ್ತುಗಳಿಗಷ್ಟೇ ಶೇ 5ರಷ್ಟು ತೆರಿಗೆ ವಿಧಿಸಲಾಗಿದೆ. ₹10 ಲಕ್ಷ ಇದ್ದ ತೆರಿಗೆ ಮಿತಿಯನ್ನು ಜಿಎಸ್‌ಟಿಯಲ್ಲಿ ₹40 ಲಕ್ಷಕ್ಕೆ ಏರಿಸಲಾಗಿದೆ.  ತೆರಿಗೆ ಕಟ್ಟಿ ರಸೀದಿ ಪಡೆಯುವ ಕೆಲಸ ಈಗ ಸರಳವಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿದೆ. ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ತೆರಿಗೆ ಕಟ್ಟುವ ಗೊಡವೆ ದೂರವಾಗಿದೆ’ ಎಂದು ವಿವರಿಸಿದರು.

‘ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‌ ಮೇಲಿನ ತೆರಿಗೆ ಕುರಿತು ಇತ್ತೀಚೆಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಜಿಎಸ್‌ಟಿಗೂ ಮುನ್ನ ಸ್ಯಾನಿಟರಿ ಪ್ಯಾಡ್‌ ಮೇಲೆ ಶೇ 28ರಷ್ಟು ತೆರಿಗೆ ಇತ್ತು. ಅದನ್ನು ಶೇ 12ಕ್ಕೆ ಇಳಿಸಲಾಗಿದೆ. ಈ ವ್ಯತ್ಯಾಸ ಗೊತ್ತಿಲ್ಲದೆ ಸುಖಾಸುಮ್ಮನೆ ಟೀಕಿಸಲಾಗುತ್ತಿದೆ’ ಎಂದು ಹೇಳಿದರು.

ಲೆಕ್ಕ ಪರಿಶೋಧಕ ಶೇಷಗಿರಿ ಕುಲಕರ್ಣಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಡಿ.ಎಂ. ನರಗುಂದ, ಪ್ರಧಾನ ಕಾರ್ಯದರ್ಶಿ ಅಶೋಕ್ ಅಣ್ವೇಕರ, ಖಜಾಂಚಿ ಬಾಪುಗೌಡ ಎನ್. ಶಬಲದ್, ಜಂಟಿ ಕಾರ್ಯದರ್ಶಿ ಉಮೇಶ್ ಎಸ್‌. ಹುಡೇದ್, ಪದಾಧಿಕಾರಿಗಳಾದ ಮಂಜುಳಾ ಎಸ್. ಪಡೇಸೂರ್, ಸಂತೋಷ್ ಎನ್‌. ರೆಡ್ಡಿ ಹಾಗೂ ಸವಿತಾ ಎಸ್‌. ಪಾಟೀಲ್  ಹಾಜರಿದ್ದರು.

***

ಮಾಹಿತಿ ಕೊರತೆಯಿಂದ ಗೊಂದಲ
‘ಹಿಂದೆ ಸರಕುಗಳ ಮೇಲಿದ್ದ ಕೇಂದ್ರ ಮತ್ತು ರಾಜ್ಯಗಳ ತೆರಿಗೆಯ ವರ್ಗೀಕರಣ ಕಾಣುತ್ತಿರಲಿಲ್ಲ. ಜಿಎಸ್‌ಟಿಯಲ್ಲಿ ಕಾಣುತ್ತಿದೆ. ಹಾಗಾಗಿ, ಅಗತ್ಯ ವಸ್ತುಗಳು ಸೇರಿದಂತೆ ಹಲವು ಸರಕಗಳ ಮೇಲೆ ತೆರಿಗೆ ಹೊರೆ ಕಮ್ಮಿ ಇದ್ದರೂ, ಜನ ಅದನ್ನು ಹೆಚ್ಚು ಎಂದೇ ಭಾವಿಸುತ್ತಿದ್ದಾರೆ. ಇದಕ್ಕೆ ಜಿಎಸ್‌ಟಿ ಕುರಿತ ಮಾಹಿತಿ ಕೊರತೆ ಕಾರಣ. ಅದನ್ನು ನೀಗಿಸುವ ಕೆಲಸ ಮೊದಲು ಆಗಬೇಕಿದೆ’ ಎಂದು ವಿಶ್ವನಾಥ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.