ADVERTISEMENT

ಜಿಲ್ಲೆಯಲ್ಲಿ ಕಡಿಮೆಯಾಗದ ಡೆಂಗಿ ಹಾವಳಿ

ಗುರು ಪಿ.ಎಸ್‌
Published 13 ಸೆಪ್ಟೆಂಬರ್ 2017, 5:39 IST
Last Updated 13 ಸೆಪ್ಟೆಂಬರ್ 2017, 5:39 IST
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ಜ್ವರಕ್ಕೆ ಚಿಕಿತ್ಸೆ ಪಡೆಯಲು ಸರದಿಯಲ್ಲಿ ಕುಳಿತಿದ್ದ ರೋಗಿಗಳು
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ಜ್ವರಕ್ಕೆ ಚಿಕಿತ್ಸೆ ಪಡೆಯಲು ಸರದಿಯಲ್ಲಿ ಕುಳಿತಿದ್ದ ರೋಗಿಗಳು   

ಹುಬ್ಬಳ್ಳಿ: ಜಿಲ್ಲೆಯಲ್ಲಿ ಡೆಂಗಿ ಪೀಡಿತರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಕಡಿಮೆಯಾಗಿಲ್ಲ.‘ಮನೆಯಲ್ಲಿನ ಎಲ್ಲರೂ ಜ್ವರದಿಂದ ಬಳಲುತ್ತಿದ್ದಾರೆ. ನಮ್ಮ ಪಕ್ಕದ ಮನೆಯ ವರೊಬ್ಬರು ಡೆಂಗಿಯಿಂದ ಬಳಲುತ್ತಿದ್ದರು. ಆತಂಕಗೊಂಡು ನಾವೂ ಆಸ್ಪತ್ರೆಗೆ ಬಂದಿದ್ದೇವೆ. ಇಲ್ಲಿ ನೋಡಿದರೆ, ನೂರಾರು ಜನ ಸರದಿಯಲ್ಲಿ ನಿಂತಿದ್ದಾರೆ’ ಎಂದು ಕಿಮ್ಸ್‌ಗೆ ಚಿಕಿತ್ಸೆಗೆಂದು ಬಂದಿದ್ದ ವೆಂಕಟೇಶ ಐರಣಿ ಅಳಲು ತೋಡಿಕೊಂಡರು.

‘ಯಾವುದೇ ಜ್ವರ ಬಂದರೂ ಡೆಂಗಿ ಎಂದು ಕೆಲವು ವೈದ್ಯರು ಹೇಳುತ್ತಿದ್ದಾರೆ. ಹಲವು ಪರೀಕ್ಷೆಗಳನ್ನು ಮಾಡಿಸಲು ಸೂಚಿಸುತ್ತಾರೆ. ₹10 ಸಾವಿರಕ್ಕಿಂತ ಹೆಚ್ಚು ಖರ್ಚಾಗುತ್ತಿದೆ’ ಎಂದು ಖಾಸಗಿ ಆಸ್ಪತ್ರೆಯ ಚಿಕಿತ್ಸೆಗೆ ಬಂದಿದ್ದ ರೋಗಿಯೊಬ್ಬರು ದೂರಿದರು.

ಪ್ರಮಾಣ ಕಡಿಮೆಯಾಗಿಲ್ಲ: ‘ಸಾಕಷ್ಟು ಮುಂಜಾಗ್ರತಾ ತೆಗೆದುಕೊಂಡಿದ್ದಾಗ್ಯೂ ಜಿಲ್ಲೆಯಲ್ಲಿ ಡೆಂಗಿ ಪೀಡಿತರ ಪ್ರಮಾಣ ಕಡಿಮೆಯಾಗುತ್ತಿಲ್ಲ. ಕಳೆದ ಜನವರಿಯಿಂದ ಈವರೆಗೆ 149 ಡೆಂಗಿ ಪ್ರಕರಣ ದೃಢಪಟ್ಟಿವೆ. ಅದರಲ್ಲಿಯೂ ಹುಬ್ಬಳ್ಳಿ ನಗರ ಪ್ರದೇಶದಲ್ಲಿಯೇ 86 ಪ್ರಕರಣಗಳು ದೃಢಪಟ್ಟಿವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಂದ್ರ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ನಗರದಲ್ಲಿ ಕಿಮ್ಸ್‌, ಚಿಟಗುಪ್ಪಿ, ಹಳೇ ಹುಬ್ಬಳ್ಳಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆಯಲು ರೋಗಿಗಳು ಸಾಲುಗಟ್ಟಿ ನಿಂತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಈ ಪ್ರಮಾಣ ಕಡಿಮೆ ಇಲ್ಲ.

‘ರಕ್ತದಲ್ಲಿನ ಪ್ಲೇಟ್‌ಲೇಟ್ಸ್‌ 20 ಸಾವಿರಕ್ಕಿಂತ ಕಡಿಮೆ ಪ್ರಮಾಣಕ್ಕೆ ಕುಸಿಯುತ್ತಿದ್ದಂತೆ, ಜನರು ಆತಂಕಗೊಳ್ಳುತ್ತಿದ್ದಾರೆ. ಆದರೆ, ಯಾವುದೇ ಔಷಧಗಳಿಂದ ಪ್ಲೇಟ್‌ಲೇಟ್ಸ್‌ ಪ್ರಮಾಣ ಹೆಚ್ಚಿಸಲು ಸಾಧ್ಯವಿಲ್ಲ. ನಿರ್ದಿಷ್ಟ ಮಾತ್ರೆಗಳಿಲ್ಲ. ಡೆಂಗಿಯನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ, ಸರಿಯಾದ ರೀತಿ ನಿರ್ವಹಣೆ ಮಾಡಿದರೆ ರೋಗವನ್ನು ನಿಯಂತ್ರಣಕ್ಕೆ ತರಬಹುದಾಗಿದೆ’ ಎಂದು ಅವರು ತಿಳಿಸಿದರು.

ಜಲಮಂಡಳಿ ಜೊತೆ ಮಾತುಕತೆ: ‘ಅವಳಿ ನಗರ ವ್ಯಾಪ್ತಿಯ ಕೆಲವೊಂದು ಭಾಗದಲ್ಲಿ 15 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಮೂರು ದಿನಗಳಿಗಿಂತ ಹೆಚ್ಚು ದಿನ ಒಂದೇ ಕಡೆ ನಿಂತ ನೀರಿನಲ್ಲಿ ಲಾರ್ವಾ ಉತ್ಪತ್ತಿಯಾಗುತ್ತದೆ. ಹೀಗಾಗಿ, ಸ್ವಲ್ಪ ಪ್ರಮಾಣದಲ್ಲಿ ನೀರು ಬಿಟ್ಟರೂ ಪರವಾಗಿಲ್ಲ, ಎರಡು ದಿನಗಳಿಗೊಮ್ಮೆ ಪೂರೈಸುವಂತೆ ಜಲಮಂಡಳಿಯವರಿಗೆ ತಿಳಿಸಲಾಗಿದೆ’ ಎಂದು ಡಿಎಚ್‌ಒ ಹೇಳಿದರು.

‘ಹೊರಗಿನಿಂದ ಬರುವ ಸೊಳ್ಳೆಗಳಿಗಿಂತ, ಹಾಸಿಗೆ, ಸೊಳ್ಳೆ ಪರದೆಯ ಕೆಳಗೆ ಕುಳಿತಿರುವ ಸೊಳ್ಳೆಗಳಿಂದ ಹೆಚ್ಚು ಅಪಾಯವಿರುತ್ತದೆ’ ಎಂದು ಅವರು ಎಚ್ಚರಿಸಿದರು. ನಿಯಂತ್ರಣಕ್ಕೆ ಬಂದಿದೆ:  ‘ಜುಲೈ, ಆಗಸ್ಟ್‌ಗೆ ಹೋಲಿಸಿದರೆ, ಈ ತಿಂಗಳಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ನಿಯಮಿತವಾಗಿ ಫಾಗಿಂಗ್‌ ಮಾಡಲಾಗುತ್ತಿದೆ’ ಎಂದು ಪಾಲಿಕೆ ಆರೋಗ್ಯಾಧಿಕಾರಿ ಪ್ರಭು ಬಿರಾದಾರ ತಿಳಿಸಿದರು.

ಪ್ರತ್ಯೇಕ ತಂಡ ರಚನೆ
‘ಡೆಂಗಿ ಪ್ರಕರಣದ ಪತ್ತೆ ಮತ್ತು ಚಿಕಿತ್ಸೆಗಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ. 40 ಅರೆ ವೈದ್ಯಕೀಯ ಸಿಬ್ಬಂದಿಯನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ’ಎಂದು ರಾಜೇಂದ್ರ ದೊಡ್ಡಮನಿ ಹೇಳಿದರು.

‘ಧಾರವಾಡದಲ್ಲಿ ಮಂಗಳವಾರ ಜಿಲ್ಲೆಯ ಆರೋಗ್ಯ ಕೇಂದ್ರಗಳ ಆರೋಗ್ಯಾಧಿಕಾರಿಗಳ ಸಭೆ ನಡೆಸಲಾಗಿದೆ. ಡೆಂಗಿ ನಿಯಂತ್ರಣ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲರಿಗೂ ಸೂಕ್ತ ಕ್ರಮಕ್ಕೆ ಸಲಹೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.

* * 

ಡೆಂಗಿ ಕುರಿತ ಎಲ್ಲ ಪರೀಕ್ಷೆ ಮಾಡಿಸಲು ₹500ಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡಬಾರದು ಎಂದು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿ, ಎಚ್ಚರಿಕೆ ನೀಡಿದೆ
ರಾಜೇಂದ್ರ ದೊಡ್ಡಮನಿ
ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.