ADVERTISEMENT

ಜೈವಿಕ ಉದ್ಯಾನ ಸ್ಥಾಪನೆಗೆ ಚಿಂತನೆ: ಸಚಿವ ರೈ

ಧಾರವಾಡದಲ್ಲಿ ಅರಣ್ಯ ಭವನಕ್ಕೆ ಶಂಕುಸ್ಥಾಪನೆ; ಅರಣ್ಯದಲ್ಲಿನ ಕೆರೆಗಳ ಹೂಳೆತ್ತಲು ಶಾಸಕ, ಸಂಸದರ ನಿಧಿ ಬಳಕೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 10:55 IST
Last Updated 11 ಮಾರ್ಚ್ 2017, 10:55 IST
ಧಾರವಾಡ: ‘ಬನ್ನೇರಘಟ್ಟ ಹಾಗೂ ಹೊಸಪೇಟೆ ಮಾದರಿಯಲ್ಲಿ ಧಾರವಾಡ ಜಿಲ್ಲೆಯಲ್ಲೂ ಜೈವಿಕ ಉದ್ಯಾನ ಸ್ಥಾಪಿಸಲು ಚಿಂತನೆ ನಡೆದಿದೆ’ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.
 
ಇಲ್ಲಿನ ಕೆ.ಸಿ.ಪಾರ್ಕ್‌ ಬಳಿಯ ಅರಣ್ಯ ಇಲಾಖೆಯ ಆವರಣದಲ್ಲಿ ಶುಕ್ರವಾರ ₹8 ಕೋಟಿ ವೆಚ್ಚದ ಅರಣ್ಯ ಭವನದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
 
‘ಪ್ರಾಣಿಗಳನ್ನು ಒಂದೆಡೆ ಕೂಡಿ ಹಾಕುವ ಪದ್ಧತಿ ಬೇಡವೆಂಬ ಕಾರಣ­ಕ್ಕಾಗಿ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರವು ಜೈವಿಕ ಉದ್ಯಾನಗಳಿಗೆ ಮಹತ್ವ ನೀಡಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಅತ್ಯುತ್ತಮ ಮಾದರಿಯಲ್ಲಿ ಸಿದ್ಧಗೊಳ್ಳು­ತ್ತಿರುವ ಜೈವಿಕ ಉದ್ಯಾನದಂತೆ ಧಾರ­ವಾಡದ ಅಂಚಟಗೇರಿ ಬಳಿಯೂ ಸ್ಥಾಪಿಸಲು ಅಗತ್ಯ ಸಹಕಾರ ನೀಡಲಾಗುವುದು’ ಎಂದು ಅವರು ಹೇಳಿದರು.
 
ಸತತ ಮೂರು ವರ್ಷಗಳಿಂದ ಮಳೆಯಾಗದ ಕಾರಣ ಕಾಡಿನಲ್ಲಿರುವ ಕೆರೆಗಳು ಒಣಗಿವೆ. ನೀರಿಗಾಗಿ ಪ್ರಾಣಿ ಪಕ್ಷಿಗಳು ನಾಡಿನತ್ತ ಬರುವ ಅನಿ­ವಾರ್ಯತೆ ಸೃಷ್ಟಿಯಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಖಾಸಗಿ ಕಂಪೆನಿಗಳ ಸಹಯೋಗದಲ್ಲಿ ಅರಣ್ಯ­ದಲ್ಲಿನ ಕೆರೆಗಳ ಹೂಳು ಎತ್ತಲು ಅವಕಾಶವಿಲ್ಲ.
 
ಆದರೆ ಶಾಸಕರು ಹಾಗೂ ಸಂಸದರ ನಿಧಿ ಬಳಸಿಕೊಂಡು ಕಾರ್ಯ ಮಾಡಲು ಅವಕಾಶವಿದೆ. ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಕೊಳವೆ ಭಾವಿ ಕೊರೆಯಿಸಿ ಅಲ್ಲಿ ಸೌರವಿದ್ಯುತ್‌ ಚಾಲಿತ ಪಂಪ್‌ಸೆಟ್‌ ಅಳವಡಿಸುವ ಕೆಲಸ ನಡೆದಿದೆ. ಪ್ರಸಕ್ತ ಬಜೆಟ್‌ನಲ್ಲಿ ಇಂಥ 100 ಸೌರವಿದ್ಯುತ್ ಚಾಲಿತ ಪಂಪ್‌ಗಳನ್ನು ಕೂರಿಸಲು ಅನುದಾನದ ಬೇಡಿಕೆಯನ್ನು ಅರಣ್ಯ ಇಲಾಖೆ ಇಟ್ಟಿದೆ’ ಎಂದರು.
 
‘ಸಾಮಾಜಿಕ ಅರಣ್ಯ ಯೋಜನೆ­ಯಲ್ಲಿ ಇನ್ನು ಮುಂದೆ ಸಣ್ಣ ಗಿಡಗಳ ಬದಲು ದೊಡ್ಡ ಗಿಡಗಳನ್ನು ನೆಡುವ ಮೂಲಕ ಅವುಗಳನ್ನು ರಕ್ಷಿಸುವ ಪ್ರಯತ್ನ ಮಾಡಲಾಗುವುದು. ಇದರೊಂದಿಗೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಒಂದು ಗಿಡದ ಆರೈಕೆಗೆ ವರ್ಷಕ್ಕೆ ನೀಡುತ್ತಿದ್ದ ₹45 ಅನುದಾ­ನವನ್ನು ಇನ್ನು ಮುಂದೆ ₹100ಕ್ಕೆ ಹೆಚ್ಚಿಸಲಾಗುವುದು. ಚಿನ್ನರ ವನದರ್ಶನ ಯೋಜನೆಯಲ್ಲಿ ಪ್ರೌಢಶಾಲೆ ಮಕ್ಕ­ಳೊಂದಿಗೆ ಪ್ರಾಥಮಿಕ ಶಾಲಾ ಮಕ್ಕಳಿಗೂ ಅರಣ್ಯ ಪರಿಚಯಿಸುವ ಚಿಂತನೆ ನಡೆದಿದೆ’ ಎಂದರು.
 
ಇದಕ್ಕೂ ಮೊದಲು ಮಾತನಾಡಿದ ಸಚಿವ ವಿನಯ ಕುಲಕರ್ಣಿ, ‘ಪ್ರಾಣಿ, ಪಕ್ಷಿಗಳನ್ನು ನೋಡಲು ಈ ಭಾಗದ ಜನರು ದೂರದ ಬೆಂಗಳೂರು, ಮೈಸೂರಿಗೆ ಹೋಗುವ ಸ್ಥಿತಿ ಇದೆ. ಹೀಗಾಗಿ ಹುಬ್ಬಳ್ಳಿಯ ಅಂಚಟಗೇರಿ­ಯಲ್ಲಿರುವ 1,600 ಎಕರೆ ಅರಣ್ಯ ಪ್ರದೇಶದಲ್ಲಿ ಮೈಸೂರು ಮಾದರಿಯ ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿಪ­ಡಿಸಬೇಕು. ಅರಣ್ಯದಲ್ಲಿ ಪ್ರಾಣಿಗಳಿಗೆ ಜಲಮೂಲ ಕಲ್ಪಿಸುವ ಸಲುವಾಗಿ ಕಾನೂನು ಬದಿಗಿಟ್ಟು ಕೆರೆ ಹೂಳೆತ್ತುವ, ಬ್ಯಾರೇಜ್ ನಿರ್ಮಾಣದ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಳ್ಳಬೇಕು’ ಎಂದರು.
 
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ.ಉದಪುಡಿ ಮಾತನಾಡಿ, ‘ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಹೊಂದಿರುವ, ಗದಗ, ಹಾವೇರಿ, ಧಾರವಾಡ ಭಾಗದಲ್ಲಿ ಅರಣ್ಯ ಅಧಿಕಾರಿಗಳಿಗೆ ತರಬೇತಿ ನೀಡುವ, ಸಂಶೋಧನಾ ವಿಭಾಗ ಇದೆ. 1920ರಲ್ಲಿ ನಿರ್ಮಾಣವಾದ ಕಟ್ಟಡಗಳಲ್ಲಿ ಅರಣ್ಯ ಇಲಾಖೆಗಳ ವಿವಿಧ ವಿಭಾಗಗಳು ಚದುರಿದಂತಿವೆ. ಹೀಗಾಗಿ ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಅರಣ್ಯ ಭವನ ನಿರ್ಮಿಸಲಾಗುವುದು’ ಎಂದರು.
 
ಈ ಸಂದರ್ಭದಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ ಛಬ್ಬಿ, ಶಾಸಕರಾದ ಎನ್.ಎಚ್. ಕೋನರಡ್ಡಿ , ಅರವಿಂದ ಬೆಲ್ಲದ, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ, ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಜೆ. ಹೊಸಮಠ, ಅರಣ್ಯ ಅಕಾಡೆಮಿಯ ಎ. ರಾಧಾದೇವಿ, ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿಗಳಾದ ಮುಂಜುನಾಥ, ವಿ. ಗೀತಾಂಜಲಿ, ಪುನಟಿ ಶ್ರೀಧರ, ಆರ್.ಎಸ್. ಸುರೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಬಾಕತ್ ಹುಸೇನ್, ಸಹಾಯಕ ಅರಣ್ಯಾಧಿಕಾರಿ ಎಸ್. ಉಜ್ಜನಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.