ADVERTISEMENT

ಡಾಂಬರು ಹಾಕಿದ ಬೆನ್ನಲ್ಲೇ, ರಸ್ತೆ ಅಗೆದರು!

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 5:35 IST
Last Updated 9 ಸೆಪ್ಟೆಂಬರ್ 2017, 5:35 IST
ಒಳಚರಂಡಿ ಮಾರ್ಗದ (ಯುಜಿಡಿ) ಪೈಪ್‌ಗಳನ್ನು ಅಳವಡಿಸಲು ಹೊರಕೇರಿ ಓಣಿಯ ರಸ್ತೆಯನ್ನು ಗುರುವಾರ ಜೆಸಿಬಿ ಮೂಲಕ ಅಗೆದಿರುವುದು
ಒಳಚರಂಡಿ ಮಾರ್ಗದ (ಯುಜಿಡಿ) ಪೈಪ್‌ಗಳನ್ನು ಅಳವಡಿಸಲು ಹೊರಕೇರಿ ಓಣಿಯ ರಸ್ತೆಯನ್ನು ಗುರುವಾರ ಜೆಸಿಬಿ ಮೂಲಕ ಅಗೆದಿರುವುದು   

ಹುಬ್ಬಳ್ಳಿ: ತೀವ್ರವಾಗಿ ಹದಗೆಟ್ಟಿದ್ದ ಆ ರಸ್ತೆ, ಮೂರು ದಿನದ ಹಿಂದಷ್ಟೆ ಡಾಂಬರೀಕರಣಗೊಂಡಿತ್ತು. ಆದರೆ, ಒಳಚರಂಡಿ ಮಾರ್ಗದ (ಯುಜಿಡಿ) ಪೈಪ್‌ಗಳನ್ನು ಅಳವಡಿಸುವುದಕ್ಕಾಗಿ ಗುರುವಾರ ಆ ರಸ್ತೆಯ ಚಹರೆ ಸಿಗದಂತೆ ಗುಂಡಿ ತೆಗೆಯಲಾಗಿದೆ. ಹಳೇ ಹುಬ್ಬಳ್ಳಿಯ ವಾರ್ಡ್ 43ರ ಹೊರಕೇರಿ ಓಣಿ ರಸ್ತೆಯ ಕಥೆ ಇದು.
ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಇಂತಹ ಯಡವಟ್ಟಿಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

‘ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಜನರ ತೆರಿಗೆ ಹಣ ಹೇಗೆಲ್ಲಾ ಪೋಲಾಗುತ್ತದೆ ಎಂಬು ದಕ್ಕೆ ಇದೊಂದು ತಾಜಾ ಉದಾಹರಣೆ’ ಎಂದು ಓಣಿಯಲ್ಲಿ ಅಂಗಡಿ ಹೊಂದಿ ರುವ ವೆಂಕಟೇಶ ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆಯೇ ಇದಕ್ಕೆ ಕಾರಣ. ನಮ್ಮ ರಸ್ತೆಗಳು ಡಾಂಬರು ಕಾಣುವುದೇ ಅಪರೂಪ. ಹೀಗಿರುವಾಗ, ಡಾಂಬರು ಹಾಕಿದ ಎರಡೇ ದಿನದಲ್ಲಿ ಮತ್ತೆ ಅಗೆದಿದ್ದಾರೆ. ಇದಕ್ಕೆ ಏನೆನ್ನಬೇಕೊ ಗೊತ್ತಾಗುತ್ತಿಲ್ಲ’ ಎಂದು ಓಣಿಯ ನಿವಾಸಿ ನಜೀ ರ್ ಸಾಬ್ ತಲವಾಯಿ ಹೇಳಿದರು.

ADVERTISEMENT

ಡಾಂಬರು ಹಾಕದಂತೆ ಸೂಚಿಸಿದ್ದೆವು: ‘ಯುಜಿಡಿ ಪೈಪ್ ಅಳವಡಿಸುವ ಜಾಗದಲ್ಲಿ ಡಾಂಬರು ಹಾಕದಂತೆ ಗುತ್ತಿಗೆದಾರರಿಗೆ ತಿಳಿಸಲಾಗಿತ್ತು. ಆದರೆ, ರಸ್ತೆ ಬದಿ ಸ್ವಲ್ಪ ಜಾಗ ಬಿಟ್ಟು ಡಾಂಬರು ಹಾಕಿದ್ದರು’ ಎಂದು ಯುಜಿಡಿ ಪೈಪ್ ಅಳವಡಿಕೆ ಕಾಮಗಾರಿಯ ಗುತ್ತಿಗೆದಾರ ಬಿ. ರಮೇಶ್ ಪ್ರತಿಕ್ರಿಯಿಸಿದರು.

‘ರಸ್ತೆ ಬದಿ ನೀರಿನ ಪೈಪ್ ಹಾದು ಹೋಗಿರುವುದರಿಂದ, ಅನಿವಾರ್ಯವಾಗಿ ರಸ್ತೆ ಮಧ್ಯೆಯೇ ಗುಂಡಿ ತೆಗೆದು ಯುಜಿಡಿ ಪೈಪ್‌ಗಳನ್ನು ಅಳವಡಿಸಬೇಕಾಯಿತು. ಇನ್ನೊಂದು ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.

ಮತ್ತೆ ಹಾಕದಿದ್ದರೆ ಬಿಲ್‌ ತಡೆ: ‘ಯುಜಿಡಿ ಪೈಪ್ ಅಳವಡಿಸುವುದಕ್ಕೆ ಮುಂಚೆಯೇ ರಸ್ತೆಗೆ ಡಾಂಬರು ಹಾಕಿದ ಗುತ್ತಿಗೆ ದಾರನೇ ಮತ್ತೆ ರಸ್ತೆ ಡಾಂಬರೀಕರಣ ಮಾಡಬೇಕು. ಇಲ್ಲದಿದ್ದರೆ, ಬಿಲ್ ತಡೆ ಹಿಡಿಯಲಾಗುವುದು’ ಎಂದು 10ನೇ ವಲಯ ಸಹಾಯಕ ಆಯುಕ್ತ ಆನಂದ ವೈ. ಕಾಂಬಳೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುಜಿಡಿ ಕಾಮಗಾರಿ ಮುಗಿದ ಬಳಿಕವೇ ಡಾಂಬರೀಕರಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಗುತ್ತಿಗೆದಾರ ಮಾಡಿದ ಅವಸರದಿಂ ದಾಗಿ ಡಾಂಬರು ರಸ್ತೆಯನ್ನು ಮತ್ತೆ ಅಗೆಯುವಂತಾಯಿತು’ ಎಂದು ಅವರು ಹೇಳಿದರು.

* * 

ಕಾಮಗಾರಿ ನಡೆಸಲೇಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ, ರಸ್ತೆ ಅಗೆಯಲಾಗಿದೆ. ಕಾಮಗಾರಿ ಮುಗಿದ ತಕ್ಷಣ ದುರಸ್ತಿ ಕೆಲಸ ಆರಂಭಿಸಲಾಗುವುದು
ಬಷೀರ್‌ ಅಹ್ಮದ್‌ ಗುಡಮಾಲ
ವಾರ್ಡ್ 43ರ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.