ADVERTISEMENT

ಡಾಲರ್ಸ್‌ ಕಾಲೊನಿಯಲ್ಲಿ ಮಾದರಿ ಉದ್ಯಾನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 5:58 IST
Last Updated 15 ಸೆಪ್ಟೆಂಬರ್ 2017, 5:58 IST
ಹುಬ್ಬಳ್ಳಿಯ ಡಾಲರ್ಸ್‌ ಕಾಲೊನಿಯ ಸುಂದರ ಉದ್ಯಾನ
ಹುಬ್ಬಳ್ಳಿಯ ಡಾಲರ್ಸ್‌ ಕಾಲೊನಿಯ ಸುಂದರ ಉದ್ಯಾನ   

ಹುಬ್ಬಳ್ಳಿ: ನಗರದ ಡಾಲರ್ಸ್‌ ಕಾಲೊನಿ ಉದ್ಯಾನ ಅಲ್ಲಿನ ನಿವಾಸಿಗಳ ಆಸಕ್ತಿಯಿಂದ ಮಾದರಿ ಉದ್ಯಾನವಾಗಿ ಸುತ್ತ–ಮುತ್ತಲಿನ ಬಡಾವಣೆಯ ಜನರ ಗಮನ ಸೆಳೆಯುತ್ತಿದೆ.
ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ನೀಡಿರುವ ಅನುದಾನ ಹಾಗೂ ಶಾಸಕರ ನಿಧಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ಉದ್ಯಾನದ ಅಭಿವೃದ್ಧಿ ಕಾರ್ಯದಲ್ಲಿ ಡಾಲರ್ಸ್‌ ಕಾಲೊನಿ ನಿವಾಸಿಗಳ ಸಂಘವೂ ಕೈಜೋಡಿಸಿದೆ.

ಸಂಪಿಗೆ, ಸೆವಂತಿಗೆ, ಚೆಂಡು ಹೂ ಸೇರಿದಂತೆ ವಿವಿಧ ಬಗೆಯ ಗಿಡಗಳು ಉದ್ಯಾನದ ಸೌಂದರ್ಯ ಹೆಚ್ಚಿಸಿವೆ. ಸುವ್ಯವಸ್ಥಿತ ವಾಕಿಂಗ್‌ ಪಾತ್‌, ಹುಲ್ಲಿನ ಲಾನ್‌ ಬೆಳೆಸಲಾಗಿದೆ. ಉದ್ಯಾನವೂ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಕುಳಿತುಕೊಳ್ಳಲು ಬೆಂಚುಗಳಿವೆ.

ಪ್ರವೇಶ ಇಲ್ಲ: ಉದ್ಯಾನದ ಸಂರಕ್ಷಣೆಗಾಗಿ ಸೈಕಲ್‌, ಸಾಕು ಪ್ರಾಣಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನಿರ್ವಹಣಾ ಮಂಡಳಿ ಜಾರಿಗೊಳಿಸಿರುವ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನಾ ಫಲಕ ಅಳವಡಿಸಲಾಗಿದೆ.

ADVERTISEMENT

ಸಿ.ಸಿ.ಟಿ.ವಿ ಕ್ಯಾಮೆರಾ: ಉದ್ಯಾನ ಹಾಳು ಮಾಡುವುದನ್ನು ತಡೆಯಲು ಹಾಗೂ ಇಲ್ಲಿಗೆ ಆಗಮಿಸುವ ಜನರ ರಕ್ಷಣೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವ ಯೋಜನೆ ಇದೆ ಎನ್ನುತ್ತಾರೆ ನಿವೃತ್ತ ತಹಶೀಲ್ದಾರ್‌ ಆರ್‌. ಎನ್‌. ಶಿರಾಳಕರ್‌.

‘ವಿವಿಧ ಅನುದಾನದಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ನಾವೂ ಸಹಕಾರ ನೀಡಿದ್ದೇವೆ. ಅದಕ್ಕೆ ಅಧಿಕಾರಿಗಳೂ ಸ್ಪಂದಿಸಿದ್ದಾರೆ’ ಎಂದು ಡಾಲರ್ಸ್‌ ಕಾಲೊನಿ ಸಂಘದ ಮಾಜಿ ಅಧ್ಯಕ್ಷ ಸಂತೋಷ ಆರ್‌. ಶೆಟ್ಟಿ ‘ಪ್ರಜಾವಾಣಿ’ಗೆ ಹೇಳಿದರು.

‘ಉದ್ಯಾನ ಅಭಿವೃದ್ಧಿಗೆ ಶಾಸಕ ಜಗದೀಶ ಶೆಟ್ಟರ್‌, ಪಾಲಿಕೆ ಆಯುಕ್ತರಾಗಿದ್ದ ನೂರ್ ಮನ್ಸೂರ್, ಪಾಲಿಕೆ ಸದಸ್ಯ ಪ್ರಕಾಶ ಕ್ಯಾರಕಟ್ಟಿ ಸ್ಪಂದಿಸಿದ್ದರಿಂದ ಕೇವಲ ಒಂದು ವರ್ಷದಲ್ಲಿ ಉದ್ಯಾನವನ ನಿರ್ಮಾಣವಾಗಿದೆ’ ಎಂದು ಅವರು ತಿಳಿಸಿದರು.

‘ಉದ್ಯಾನಕ್ಕೆ ಬರುವ ಜನರು ಇಲ್ಲಿನ ಹಸಿರು ನೋಡಿ ಸಂತೋಷಗೊಳ್ಳುತ್ತಾರೆ. ವಾಯು ವಿವಾರ ಮಾಡಿ ಖುಷಿಯಿಂದ ಹೋಗುತ್ತಾರೆ’ ಎನ್ನುತ್ತಾರೆ ಅಲ್ಲಿನ ನಿವಾಸಿ ಎಸ್‌.ಸಿ. ದೇಸಾಯಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.