ADVERTISEMENT

ತಿಪ್ಪೆ ಗುಂಡಿಗಳಾದ ವೃತ್ತಗಳು, ಚರಂಡಿಗಳು

ಕಾಂಗ್ರೆಸ್‌ನ ಪ್ರಫುಲ್ಲಚಂದ್ರ ರಾಯನಗೌಡ್ರ ಅವರ ಪ್ರತಿನಿಧಿಸುವ 29ನೇ ವಾರ್ಡ್‌ನಲ್ಲಿ ಗ್ರಾಮ ಜೀವನ

ಮನೋಜ ಕುಮಾರ್ ಗುದ್ದಿ
Published 6 ಫೆಬ್ರುವರಿ 2017, 6:29 IST
Last Updated 6 ಫೆಬ್ರುವರಿ 2017, 6:29 IST
ಕಸ ಚೆಲ್ಲಬಾರದು ಎಂದು ಗೋಡೆಯ ಮೇಲೆ ಬರೆದಿದ್ದರೂ, ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ನಿವಾಸಿಗಳು ಗಟಾರ ಬಳಿ ತ್ಯಾಜ್ಯ ಚೆಲ್ಲಿ ಹೋಗಿರುವ ದೃಶ್ಯ ಭಾನುವಾರ ಮಧ್ಯಾಹ್ನ ಕಂಡು ಬಂತು   –ಪ್ರಜಾವಾಣಿ ಚಿತ್ರ
ಕಸ ಚೆಲ್ಲಬಾರದು ಎಂದು ಗೋಡೆಯ ಮೇಲೆ ಬರೆದಿದ್ದರೂ, ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ನಿವಾಸಿಗಳು ಗಟಾರ ಬಳಿ ತ್ಯಾಜ್ಯ ಚೆಲ್ಲಿ ಹೋಗಿರುವ ದೃಶ್ಯ ಭಾನುವಾರ ಮಧ್ಯಾಹ್ನ ಕಂಡು ಬಂತು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಇಲ್ಲಿನ ದೇವಾಂಗಪೇಟೆ, ರಾಜಾಜಿನಗರ, ಬೀರೇಶ್ವರ ದೇವಸ್ಥಾನದ ಆಸುಪಾಸಿನ ರಸ್ತೆಗಳನ್ನು ಹಾದು ಹೋದಾಗ ಚಕ್ಕಡಿಗಳು, ಎತ್ತುಗಳು, ರೈತಾಪಿ ಮನೆಗಳ ಎದುರು ಧೋತ್ರ ತೊಟ್ಟ ರೈತರು ಎಲೆ ಅಡಿಕೆ ಜಗಿಯುತ್ತಾ ಕುಳಿತಿರುವ ದೃಶ್ಯಗಳು ಕಾಣಿಸುತ್ತವೆ.

ಉಳಿದ ಬಡಾವಣೆಗಳಂತೆ ಇಲ್ಲಿಯೂ ಅಭಿವೃದ್ಧಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಡಾಂಬರೀಕರಣಗೊಂಡ ರಸ್ತೆಗಳು, ಸಿಮೆಂಟ್‌ ಕಾಂಕ್ರೀಟ್‌ ರಸ್ತೆಗಳೂ ಇವೆ.

ಸಮಸ್ಯೆ ಇರುವುದು ಇಲ್ಲಿಯೇ. ಮನೆ ಮನೆ ಕಸ ಸಂಗ್ರಹವನ್ನು ಉತ್ತೇಜನಗೊಳಿಸುವ ಉದ್ದೇಶದಿಂದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಕಸ ಹಾಕುವ ಪ್ರಮುಖ ತಾಣಗಳಲ್ಲಿ ಇಟ್ಟಿದ್ದ ಕಂಟೇನರ್‌ಗಳನ್ನು ವಾಪಸ್‌ ಒಯ್ದಿದೆ. ಹೀಗಾಗಿ, ರೈತರು ಅನಿವಾರ್ಯವಾಗಿ ರೈತರು ದನಗಳು ತಿಂದು ಬಿಟ್ಟ ಮೇವು, ಸಗಣಿ, ಗಂಜಲವನ್ನೂ ಒಳಗೊಂಡಂತೆ ಮನೆಯಲ್ಲಿ ಸಾಮಾನ್ಯವಾಗಿ ಉತ್ಪನ್ನವಾಗುವ ಕಸವನ್ನೂ ತಂದು ಹಾಕುತ್ತಾರೆ.

ಇಂತಹ ಹಲವು ಪ್ರದೇಶಗಳು ದೇವಾಂಗಪೇಟೆಯಲ್ಲಿರುವ ಗೌಡರ ಓಣಿ, ಬೀರೇಶ್ವರ ದೇವಸ್ಥಾನದ ಬಳಿಯ ಮೂಲೆಯಲ್ಲಿ ಯಾವಾಗಲೂ ಬಿದ್ದಿರುತ್ತದೆ.
ಕಾಂಗ್ರೆಸ್‌ನ ಹಿರಿಯ ಪಾಲಿಕೆ ಸದಸ್ಯ ಪ್ರಫುಲ್ಲಚಂದ್ರ ರಾಯನಗೌಡ್ರ ಹಲವು ವರ್ಷಗಳಿಂದ ಪ್ರತಿನಿಧಿಸುತ್ತಾ ಬಂದಿರುವ 29ನೇ ವಾರ್ಡ್‌ನಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಇದ್ದಾರೆ. ಹೀಗಾಗಿ, ಪಾಲಿಕೆ ಇತ್ತೀಚೆಗೆ ನೀಡಿದ ಆಟೊ ಟಿಪ್ಪರ್‌ಗಳನ್ನು ಈ ವಾರ್ಡ್‌ಗೆ ನೀಡಿಲ್ಲ.

ಬರೀ ಪೌರಕಾರ್ಮಿಕ ವಾರ್ಡ್‌ಗಳಿಗೆ ಮಾತ್ರ ನೀಡಲಾಗಿದೆ. ಸುಮಾರು 20 ಸಾವಿರ ಜನಸಂಖ್ಯೆ ಹೊಂದಿದ ಈ ಬಡಾವಣೆಗಳ ಕಸವನ್ನು ಸ್ವಚ್ಛಗೊಳಿಸುವ ಹೊಣೆ ಕೇವಲ 34 ಪೌರಕಾರ್ಮಿಕರು ಮಾತ್ರ ಮಾಡುತ್ತಾರೆ. ಕೆಲ ವರ್ಷಗಳ ಹಿಂದೆ ಇದ್ದ ಪ್ರದೇಶಗಳಿಗೆ ಅನುಗುಣವಾಗಿ ಗುತ್ತಿಗೆ ನೀಡಲಾಗಿದೆ. ಆದರೆ, ಈಗ ಹೊಸ ಬಡಾವಣೆಗಳು, ಜನವಸತಿ ಪ್ರದೇಶಗಳು ನಿರ್ಮಾಣವಾಗಿರುವುದರಿಂದ ಅಲ್ಲಿನ ಕಸ ವಿಲೇವಾರಿ ಸಮಸ್ಯೆಯಾಗಿದೆ.

ಕಸದ ಕಂಟೇನರ್‌ಗಳನ್ನು ಇಟ್ಟರೆ ನಮಗೂ ಒಂದು ಕಡೆ ಕಸ ಹಾಕಲು ಅನುಕೂಲವಾಗುತ್ತದೆ. ಕಂಟೇನರ್ ಇಲ್ಲದೇ ಇರುವುದರಿಂದ ಎಲ್ಲಿ ಬೇಕೆಂದರಲ್ಲಿ ಚೆಲ್ಲಬೇಕಾಗಿದೆ ಎಂದು ರೈತ ಶೇಖಪ್ಪ ನೆರ್ತಿ ಹೇಳಿದರು.

ಹೀಗೆ, ಬೀದಿಯಲ್ಲಿ ಬಿದ್ದ ಕಸ ತಿನ್ನಲು ಹಂದಿಗಳು ಹಾಗೂ ಬೀದಿ ದನಗಳು ಬರುತ್ತವೆ. ಅದನ್ನು ರಸ್ತೆ ತುಂಬಾ ಹರಡಿ ಹೋಗುತ್ತವೆ. ದುರ್ವಾಸನೆಯೂ ತಡೆಯಲು ಆಗುತ್ತಿಲ್ಲ. ಚಿಕ್ಕಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಇತ್ತ ಗಮನ ಹರಿಸಬೇಕು. ಪ್ರತಿನಿತ್ಯ ಕಸ ತೆಗೆದುಕೊಂಡು ಹೋಗಬೇಕು ಎಂದು ಕೆ.ಪಿ. ನಾಗವೇಣಿ ಒತ್ತಾಯಿಸುತ್ತಾರೆ.

‘ಹೊಸ ಬಡಾವಣೆಗಳದ್ದೇ ಸಮಸ್ಯೆ’
‘1962ಕ್ಕೂ ಮುನ್ನ ಗೋಪನಕೊಪ್ಪ ಗ್ರಾಮವಾಗಿತ್ತು. ಆ ನಂತರ ಗ್ರಾಮ ಪಂಚಾಯ್ತಿ ಬದಲು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ತರಲಾಯಿತು. ಆಗಿದ್ದ ಬಡಾವಣೆಗಳಿಗೆ ಅನುಗುಣವಾಗಿ ಸ್ವಚ್ಛತಾ ಗುತ್ತಿಗೆ ನೀಡಲಾಗಿತ್ತು. ಆದರೆ, ಈಗ ಸಾಕಷ್ಟು ಹೊಸ ಬಡಾವಣೆಗಳು ತಲೆ ಎತ್ತಿರುವುದರಿಂದ ಆ ಬಡಾವಣೆಗಳನ್ನು ಕಸವನ್ನು ಸದ್ಯ ಇರುವ ಪೌರಕಾರ್ಮಿಕರು ಸಾಗಿಸುವುದಿಲ್ಲ ಎನ್ನುತ್ತಾರೆ ಪಾಲಿಕೆಯಲ್ಲಿ 29ನೇ ವಾರ್ಡ್ ಪ್ರತಿನಿಧಿಸುವ ಪ್ರಫುಲ್ಲಚಂದ್ರ ರಾಯನಗೌಡ್ರ.

ADVERTISEMENT

‘ನಮ್ಮದು ಕಾಂಟ್ರ್ಯಾಕ್ಟ್‌ ವಾರ್ಡ್‌ ಆಗಿದ್ದರಿಂದ ಆಟೊ ಟಿಪ್ಪರ್‌ ಕೊಟ್ಟಿಲ್ಲ. ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಎರಡು ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸುತ್ತಾರೆ. ಜನಸಂಖ್ಯೆ ಹಾಗೂ ಮನೆಗಳು ಜಾಸ್ತಿ ಇರುವುದರಿಂದ ಮನೆಗಳಿಂದ ಕಸ ಸಂಗ್ರಹಿಸುತ್ತಿಲ್ಲ’ ಎಂದರು.

*
ನಮ್ಮ ಮನೆಗಳಿಗಂತೂ ಕಾರ್ಪೊರೇಷನ್‌ನವರು ಬರೋದಿಲ್ರಿ. ನಾಲ್ಕು ದಿನಕ್ಕೊಮ್ಮೆ ಒಂದು ಕಡೆ ಹಾಕಿದ ಕಸಾನ ಟ್ರ್ಯಾಕ್ಟರ್‌ ತುಂಬಕೊಂಡು ಹೋಗ್ತಾರ.
–ಬಸನಗೌಡ ಪಾಟೀಲ,
ಗೌಡರ ಓಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.