ADVERTISEMENT

ತೆರಿಗೆ ತುಂಬಲು ಆಸ್ತಿ ವಿವರ ಸಲ್ಲಿಕೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 7:38 IST
Last Updated 21 ಏಪ್ರಿಲ್ 2017, 7:38 IST

ಹುಬ್ಬಳ್ಳಿ: ಆಸ್ತಿ ತೆರಿಗೆ ತುಂಬಲು ಆಸ್ತಿ ಅಳತೆಯ ವಿವರ ಸಲ್ಲಿಸುವುದನ್ನು ಪಾಲಿಕೆ ಕಡ್ಡಾಯಗೊಳಿಸಿ ಹೊಸ ನಿಯಮ ಜಾರಿಗೊಳಿಸಿದೆ. ಇದರಿಂದ ತೆರಿಗೆ ಪಾವತಿದಾರರು ಕಿರಿಕಿರಿ ಅನುಭವಿಸುತ್ತಿದ್ದು, ಹುಬ್ಬಳ್ಳಿ–ಧಾರವಾಡ ಒನ್‌ ಕೇಂದ್ರಗಳಿಗೆ ನಿತ್ಯ ಅಲೆದಾಡುತ್ತಿದ್ದಾರೆ.ಹಿಂದಿನ ವರ್ಷದ ಆಸ್ತಿ ತೆರಿಗೆ ಬಿಲ್‌ ಇದ್ದರೆ ಸಾಕು ಈ ಮೊದಲು ಸುಲಭವಾಗಿ ಆಸ್ತಿ ತೆರಿಗೆ ತುಂಬಬಹುದಿತ್ತು. ಆದರೆ, ಆಸ್ತಿ ಅಳತೆಯ ಸಂಪೂರ್ಣ ವಿವರವನ್ನು ಒಳಗೊಂಡ ಅರ್ಜಿ ಪಡೆದು, ಭರ್ತಿ ಮಾಡಿದ ಬಳಿಕವಷ್ಟೇ ಇದೀಗ ತೆರಿಗೆ ತುಂಬಬೇಕಿದೆ. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದವರು ವಲಯ ಕಚೇರಿಗಳಿಗೆ ಎರಡು ಮೂರು ಸಾರಿ ಅಲೆಯುವಂತಾಗಿದೆ.

ಏ.30ರ ಒಳಗೆ ಆಸ್ತಿ ತೆರಿಗೆ ತುಂಬಿದರೆ ಶೇ 5ರಷ್ಟು ರಿಯಾಯಿತಿ ಇದೆ. ಹೀಗಾಗಿ, ಬಹುತೇಕ ಮಂದಿ ತೆರಿಗೆ ತುಂಬಲು ಹುಬ್ಬಳ್ಳಿ–ಧಾರವಾಡ ಒನ್‌ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಪಾಳಿ ಹಚ್ಚಿರುವ ದೃಶ್ಯ ವಲಯ ಕಚೇರಿ ಒಂಬತ್ತರ ಮುಂದೆ ಕಂಡುಬಂತು.‘ನನಗೆ ಅರ್ಜಿ ತುಂಬಲು ಬರುವುದಿಲ್ಲ. ಗೊತ್ತಿರುವವರಿಂದ ಅದನ್ನು ತುಂಬಿಸಬೇಕಿದೆ. ಕಳೆದ ವರ್ಷ ತುಂಬಿದ ಆಸ್ತಿ ತೆರಿಗೆ ಬಿಲ್‌ ಹಿಡಿದುಕೊಂಡು ವಲಯ ಕಚೇರಿ 9ರಲ್ಲಿ ಇರುವ ಹುಬ್ಬಳ್ಳಿ– ಧಾರವಾಡ ಒನ್‌ ಕೇಂದ್ರಕ್ಕೆ ಬುಧವಾರವೇ ಬಂದಿದ್ದೆ. ಆಸ್ತಿ ಅಳತೆ ವಿವರ ನೀಡಬೇಕೆಂದು ಸಿಬ್ಬಂದಿ ತಿಳಿಸಿದ್ದರಿಂದ ಅರ್ಜಿಯನ್ನು ಭರ್ತಿ ಮಾಡಿಸಿ, ತಂದಿದ್ದೇನೆ. ಹೊಸ ವ್ಯವಸ್ಥೆಯಿಂದ ಎರಡು–ಮೂರು ಬಾರಿ ಅಲೆಯಬೇಕಾಗಿದೆ. ಮೊದಲಿದ್ದ ವ್ಯವಸ್ಥೆಯೇ ಸರಳ ಇತ್ತು’ ಎಂದು ವಿಶಾಲನಗರ ನಿವಾಸಿ ಎನ್‌.ಜಿ. ಸವಣೂರ ಅಸಮಾಧಾನ ವ್ಯಕ್ತಪಡಿಸಿದರು.

‘ಹೆಂಚಿನ ಮನೆ ಇರುವ ನನ್ನ ಮನೆಗೆ ₹1,721 ಆಸ್ತಿ ತೆರಿಗೆ ಕಟ್ಟಿಸಿಕೊಂಡಿದ್ದಾರೆ. ನಮ್ಮ ಮನೆಯಷ್ಟೇ ಅಳತೆ ಇರುವ ಹೆಂಚಿನ ಮನೆಗೆ ₹1,327 ತೆರಿಗೆ ಕಟ್ಟಿಸಿಕೊಂಡಿದ್ದಾರೆ. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ. ಎಲ್ಲರಿಗೂ ಸಮಾನ ತೆರಿಗೆ ವಿಧಿಸಬೇಕು’ ಎಂದು ಆಶೀರ್ವಾದ ಕಾಲೊನಿ ನಿವಾಸಿ ಪರಿಮಳಾ ಪಟಾರೆ ತಿಳಿಸಿದರು.
‘ಆಸ್ತಿ ಅಳತೆ ವಿವರ ಸಲ್ಲಿಕೆ ಕಡ್ಡಾಯ ಮಾಡಲಾಗಿದೆ. ಅರ್ಜಿಗಳನ್ನು ವಲಯ ಕಚೇರಿಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ತೆರಿಗೆ ತುಂಬುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅರ್ಜಿ ಭರ್ತಿ ಮಾಡಲು ವಲಯ ಕಚೇರಿಗೆ ಮೂವರು ಯುವಕರನ್ನು ನಿಯೋಜಿಸಲಾಗಿದೆ. ಸ್ವಯಂಪ್ರೇರಿತರಾಗಿ ಕೆಲಸ ಮಾಡುವ ಅವರು ಅರ್ಜಿಯೊಂದನ್ನು ಭರ್ತಿ ಮಾಡಲು ₹25 ಶುಲ್ಕ ಪಡೆಯುತ್ತಿದ್ದಾರೆ’ ಎಂದು ಪಾಲಿಕೆ ಕಮಿಷನರ್‌ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.