ADVERTISEMENT

ದಕ್ಷಿಣ ಕನ್ನಡ ಜಿಲ್ಲೆಗೆ ಬಾಧಿಸಿದ ನೋಟು ಅಮಾನ್ಯೀಕರಣ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 9:52 IST
Last Updated 23 ಡಿಸೆಂಬರ್ 2017, 9:52 IST

ಧಾರವಾಡ: ‘ಬಹುತೇಕ ಬ್ಯಾಂಕುಗಳು ದಕ್ಷಿಣ ಕನ್ನಡ ಜಿಲ್ಲೆಯವೇ ಆಗಿರುವುದರಿಂದ ಅಲ್ಲಿನ ಜನರಿಗೆ ಬ್ಯಾಂಕಿಂಗ್ ವ್ಯವಹಾರ ಸುಲಲಿತ. ಹೀಗಾಗಿ ಗರಿಷ್ಠ ಮುಖ ಬೆಲೆಯ ನೋಟುಗಳು ರದ್ದಾದ ಸಂದರ್ಭದಲ್ಲಿ ಅವರು ವಿಚಲಿತರಾಗಲಿಲ್ಲ’ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಇಲ್ಲಿನ ವಿದ್ಯಾಗಿರಿಯಲ್ಲಿರುವ ಜೆಎಸ್‌ಎಸ್‌ ಕಾಲೇಜು ಆವರಣದಲ್ಲಿ ಕರ್ನಾಟಕ ಬ್ಯಾಂಕಿನ 777ನೇ ಶಾಖೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಎಸ್‌ಟಿ ಜಾರಿ ಹಾಗೂ ನೋಟು ರದ್ದತಿ ಕ್ರಮ ದೇಶದ ಇತರ ಭಾಗಗಳಿಗಿಂತ ದಕ್ಷಿಣ ಕನ್ನಡದ ಜನರು ಅತ್ಯಂತ ಸಮರ್ಥವಾಗಿ ಎದುರಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿನ ಅಂದಾಜು 40ಲಕ್ಷ ಸದಸ್ಯರಿಗೆ ರೂಪೇ ಕಾರ್ಡ್‌ ಕುರಿತು ಮಾಹಿತಿ ನೀಡಲಾಗುತ್ತಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಸಿಇಒ ಎಂ.ಎಸ್‌.ಮಹಾಬಲೇಶ್ವರ ಮಾತನಾಡಿ, ‘ಸರಸ್ವತಿಯ ತವರೂರಾಗಿರುವ ಧಾರವಾಡದಲ್ಲಿ ಲಕ್ಷ್ಮಿ ಬಂದಿದ್ದಾಳೆ. ರಾಜರ್ಷಿ ಅವರ ಸಮ್ಮುಖದಲ್ಲಿ ಲಕ್ಷ್ಮಿ, ಸರಸ್ವತಿಯ ಸಮಾಗಮವಾಗಿರುವುದು ಸಂತಸ ತಂದಿದೆ’ ಎಂದರು.

ADVERTISEMENT

‘ಬರುವ ಮಾರ್ಚ್ ಒಳಗಾಗಿ 800 ಶಾಖೆಗಳನ್ನು ಪ್ರಾರಂಭಿಸುವ ಉದ್ದೇಶವಿದೆ. ಡಿಸೆಂಬರ್ ಅಂತ್ಯದೊಳಗಾಗಿ ₹1ಲ ಕ್ಷ ಕೋಟಿ ವ್ಯವಹಾರ ಹಾಗೂ 90 ಲಕ್ಷ ಗ್ರಾಹಕರನ್ನು ಹೊಂದುವ ಉದ್ದೇಶ ಬ್ಯಾಂಕಿನದ್ದಾಗಿದೆ’ ಎಂದು ಹೇಳಿದರು. ಹುಬ್ಬಳ್ಳಿ ‍ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕ ಟಿ.ನಾಗೇಂದ್ರ ರಾವ್‌, ಜೆಎಸ್ಎಸ್‌ ಕಾರ್ಯದರ್ಶಿ ಡಾ. ನ.ವಜ್ರಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.