ADVERTISEMENT

ದುಡಿಮೆಗೆ ಉತ್ತಮ ಪ್ರತಿಫಲ ನೀಡಿದ ಪ್ರವಚನ !

ಧಾರವಾಡದ ಕೆಸಿಡಿ ಕಾಲೇಜು ಮೈದಾನದಲ್ಲಿ ಪ್ರವಚನ ಆಲಿಸಲು ಬಂದ ಅಪಾರ ಜನ; ನಿರೀಕ್ಷೆಗೂ ಮೀರಿದ ವ್ಯಾಪಾರ

ಮಂಜುನಾಥ್ ಆರ್.ಗೌಡರ
Published 23 ಮಾರ್ಚ್ 2017, 8:54 IST
Last Updated 23 ಮಾರ್ಚ್ 2017, 8:54 IST
ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಕೇಳಲು ಬರುವ ಜನರು ಪುಸ್ತಕ ಖರೀದಿಯಲ್ಲಿ ತೊಡಗಿರುವುದು
ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಕೇಳಲು ಬರುವ ಜನರು ಪುಸ್ತಕ ಖರೀದಿಯಲ್ಲಿ ತೊಡಗಿರುವುದು   

ಧಾರವಾಡ: ತಿಂಗಳಿಂದ ಇಲ್ಲಿನ ಕೆ.ಸಿ.ಡಿ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಮಾಲಿಕೆಯು ಜನರ ಮನಸ್ಸುಗಳನ್ನು ಜಾಗೃತಗೊಳಿಸುವುದರ ಜತೆಗೆ ಶ್ರಮಜೀವಿಗಳ ದುಡಿಮೆಗೂ ಫಲ ಕೊಟ್ಟಿದೆ.

ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಅಂದರೆ ಸಾವಿರಾರು ಜನ ಸೇರುತ್ತಾರೆ. ಹಾಗೆ ಬಂದವರು ಕೇವಲ ಪ್ರವಚನ ಕೇಳಿ ವಾಪಸ್ಸಾಗುತ್ತಾರೆಯೇ? ಇಲ್ಲ ಅಂತಹವರ ಸಲುವಾಗಿಯೇ ಇಲ್ಲಿ ಸಣ್ಣ ಮಟ್ಟದ ತಾತ್ಕಾಲಿಕ ಮಾರುಕಟ್ಟೆ ಸೃಷ್ಟಿಯಾಗಿದೆ.

ಪುಸ್ತಕ, ಆಯುರ್ವೇದ ಔಷಧಿ, ಖಾದಿ ಬಟ್ಟೆ, ಬಸವೇಶ್ವರರ ಭಾವಚಿತ್ರ, ಹೊದಿಕೆ, ಟವೆಲ್‌, ಹಾಲಿನ ಉತ್ಪನ್ನ, ಅಗರಬತ್ತಿ, ಜ್ಯೂಸ್‌, ಕ್ಯಾಲೆಂಡರ್‌ ಮೊದಲಾದ ದೈನಂದಿನ ವಸ್ತುಗಳ ಮಾರಾಟ ಭರದಿಂದ ಸಾಗಿದೆ. ಕೆಲ ವಸ್ತುಗಳಿಗೆ ರಿಯಾಯ್ತಿಯೂ ನೀಡಲಾಗುತ್ತಿದೆ.

ಇಪ್ಪತ್ತೈದಕ್ಕೂ ಹೆಚ್ಚು ವ್ಯಾಪಾರಿಗಳು ಸದ್ಯ ಮಾರಾಟದಲ್ಲಿ ತೊಡಗಿದ್ದಾರೆ. ಪ್ರತಿ ದಿನ ₹1 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ.  ಯಾವುದೇ ಶುಲ್ಕ ಮತ್ತು ನಿರ್ಬಂಧ ಇಲ್ಲದಿರುವುದರಿಂದ ಸ್ಥಳೀಯರು ಸೇರಿದಂತೆ ಹೊರ ಜಿಲ್ಲೆಗಳಿಂದಲೂ ವ್ಯಾಪಾರ ಮಾಡಲು ಬರುವರರ ಸಂಖ್ಯೆಯಲ್ಲಿ ಹೆಚ್ಚಾಗಿದೆ.

ಶರಣ ವಚನ, ವ್ಯಕ್ತಿತ್ವ ವಿಕಸನ ಕುರಿತಾದ ಪುಸ್ತಕಗಳು, ವಿವಿಧ ಬಗೆಯ ಬಟ್ಟೆಗಳು ಅಂದುಕೊಂಡಿದ್ದಕ್ಕಿಂತ ಹೆಚ್ಚು ಬಿಕರಿಯಾಗಿ ವ್ಯಾಪಾರಸ್ಥರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ. ಕೇವಲ ಅಂಕಲಿಪಿಗಳನ್ನು ಮಾರಾಟ ಮಾಡುತ್ತಿದ್ದ ಧಾರವಾಡದ ವೆಂಕಟೇಶ್ ಪಾಟೀಲ ಅವರ ಲಾಭ ಮೂರಂಕಿ ದಾಟಿದೆ. ಇವರು ಪ್ರತಿ ದಿನ 50 ಅಂಕಲಿಪಿ ಮಾರುತ್ತಾರೆ.

ಹುನಗುಂದದ ಪ್ರದೀಪ್‌ ಅವರು ಅಮರಾವತಿ ಸಾಹಿತ್ಯ ಪ್ರಕಾಶನದ ಪುಸ್ತಕ ಮಾರಾಟ ಮಾಡುತ್ತಿದ್ದಾರೆ. ‘ಅಮ್ಮ ಹೇಳಿದ ಸುಳ್ಳುಗಳು’, ‘ಅಪ್ಪ ಅಂದ್ರೆ ಆಕಾಶ’ ಹೆಚ್ಚು ಬಿಕರಿಯಾದ ಪುಸ್ತಕಗಳು ಎಂದು ಅವರು ಹೇಳುತ್ತಾರೆ. ಇವರ ಜೊತೆಯಲ್ಲಿ ಬಂದಿದ್ದ ಭೀಮರಾವ್ ಹೂಗಾರ ಉತ್ತಮ ವ್ಯಾಪಾರ ಮಾಡಿದ ಖುಷಿಯಲ್ಲಿದ್ದರು. ಇಲ್ಲಿ ‘10 ಸಾವಿರ ನುಡಿಮುತ್ತು’, ಸರ್ವಜ್ಞ, ಮಹಾಭಾರತ, ವಾಲ್ಮೀಕಿ, ನಿಜಗುಣಿ ಶಿವಯೋಗಿ ಪುಸ್ತಕಗಳಿಗೆ ಬೇಡಿಕೆ ಇತ್ತು.

ಹುಬ್ಬಳ್ಳಿಯಿಂದ ಬಂದಿದ್ದ ಬಸವರಾಜ ಬುಕ್ ಡಿಪೊದ ಮನೋಹರ ಮೈದರಗಿ ಮಾತನಾಡಿ ‘ಬಸವೇಶ್ವರರ ಚಿತ್ರದ ಫ್ರೇಮ್‌ಗಳಿಗೆ ಬೇಡಿಕೆ ಹೆಚ್ಚಿದೆ. ₹50ರಿಂದ 2,500ವರೆಗೆ ವಿವಿಧ ಬೆಲೆಯ ಫ್ರೇಮ್‌ಗಳಿವೆ. ಇದನ್ನು ಹೊರತುಪಡಿಸಿ ವಿಭೂತಿ, ರುದ್ರಾಕ್ಷಿ ಮತ್ತು ಪೂಜಾ ವಸ್ತುಗಳು ದೊರೆಯುತ್ತವೆ’ ಎಂದರು.

ಇನ್ನು ಶೇ10ರಷ್ಟು ರಿಯಾಯತಿ ಇಟ್ಟಿದ್ದ ಸೈಕಲ್‌ ಅಗರಬತ್ತಿ ವ್ಯಾಪಾರಸ್ಥರೂ ಪ್ರತಿದಿನ ₹5 ಸಾವಿರ ಗಳಿಸುತ್ತಿದ್ದಾರೆ. ತಡವಾಗಿಯಾದರೂ ಬಂದೆವಲ್ಲ ಎಂದು ಖುಷಿಯಲ್ಲಿದ್ದ ದಿನ ಬಳಕೆ ವಸ್ತು ಮಾರಾಟಗಾರ ವಿ.ಸಂಗಮೇಶ , ರಾಜೇಶ ಹಳ್ಯಾಳ ಅವರಿಗೂ ನಿರಾಸೆಯಾಗಿಲ್ಲ.

ಇನ್ನು ಸೋಲಾಪುರ ಹ್ಯಾಂಡ್‌ಲೂಮ್ಸ್‌ನಲ್ಲಿ  ಬೆಡ್‌ ಶೀಟ್‌, ಟವೆಲ್‌, ಸಿಂಗಲ್‌ ರಗ್ಗು, ಡಬಲ್‌ ರಗ್ಗು, ಜಮಖಾನಾ ಸೇರಿದಂತೆ ಒಟ್ಟು ₹ 1 ಲಕ್ಷ ಮೊತ್ತದಷ್ಟು ವಿವಿಧ ಬಗೆಯ ಬಟ್ಟೆಗಳನ್ನು ಮಾರಾಟಕ್ಕಿಡಲಾಗಿತ್ತು.

ಬೆಳಗಾವಿಯಿಂದ ಬಂದಿದ್ದ ರಾಜು ದೇಶಪಾಂಡೆ ಅವರ ಶಿವಶಕ್ತಿ ಆಯುರ್ವೇದಿಕ್ ಸೇವಾ ಭವನದ ವ್ಯಾಪಾರವು ₹5 ಸಾವಿರಕ್ಕಿಂತ ಕಡಿಮೆ ಇರಲಿಲ್ಲ. ಹಲ್ಲು, ತಲೆ, ಮೈ, ಕೈಗೆ ಉಪಶಮನ ನೀಡುವ ಚೂರ್ಣ, ಎಣ್ಣೆಯನ್ನು ಗ್ರಾಮೀಣ ಭಾಗದ ಮಹಿಳೆಯರು ಖರೀದಿ ಮಾಡುತ್ತಿದ್ದರು.

ಹಾಲು, ಜ್ಯೂಸ್‌:  ಕೇವಲ ಮಾರಾಟವಲ್ಲದೇ ಪ್ರಚಾರದ ದೃಷ್ಟಿಯಿಂದಲೂ ಕೆಲವರು ಬಂದಿದ್ದರು. ಅವರಲ್ಲಿ ನಂದಿನಿ ಹಾಲು ಮಾರುಕಟ್ಟೆ ಅಧಿಕಾರಿಗಳಾದ ಸಿ.ಕೆ.ಅಂಗಡಿ, ಬಿ.ಎಫ್‌.ಕಿಲ್ಲೆದಾರ ಕಳೆದ ಮೂರು ದಿನಗಳಲ್ಲಿ 100 ಲೀಟರ್ ಹಾಲು ಮಾರಾಟ ಮಾಡಿದ್ದಾರೆ. ಇನ್ನು ಸ್ವಂತ ಹೊಲದಲ್ಲಿ ನೆದರಲ್ಯಾಂಡ್ ತಳಿಯ ಸೌತೆಕಾಯಿ ಬೆಳೆದಿದ್ದ ಕಾಮರಡ್ಡಿ ಅವರ ಜ್ಯೂಸ್‌ ಮತ್ತು ಬೆಳೆಗೆ ಉತ್ತಮ ಬೇಡಿಕೆ ಇತ್ತು. ಪ್ರತಿದಿನ 30ರಿಂದ 40 ಕೆ.ಜಿ. ಮಾರಾಟವಾಗುತ್ತಿದೆ.

ಅಂಗೈ ಅಗಲದ ಪುಸ್ತಕದ  ಆಕರ್ಷಣೆ
ದೇವರಹುಬ್ಬಳ್ಳಿಯ ಸಿದ್ಧಾರೂಢಮಠದ ಶಾಖೆಯಿಂದ ಬಂದಿದ್ದ 12 ಜನ ಸೇವಾಕರ್ತರು ಗೋರಖ್‌ಪುರ ಪ್ರಕಾಶನದ ಭಗವದ್ಗೀತೆ ಕುರಿತಾದ ವೈವಿಧ್ಯಮಯ ಪುಸ್ತಕಗಳನ್ನು ತಂದಿದ್ದರು. ನಿತ್ಯ ಒಟ್ಟು 100 ಪುಸ್ತಕಗಳು ಮಾರಾಟವಾಗುತ್ತಿವೆ. ಇಲ್ಲಿ ಅಂಗೈ ಅಗಲದಿಂದ ಒಂದು ಅಡಿ ಅಗಲದವರೆಗಿನ ಪುಸ್ತಕಗಳ ಮಾರಾಟವೂ ಇದೆ

*
ಮಾರುಕಟ್ಟೆಯಲ್ಲಿ ಕಲಬೆರಕೆ ಹಾಲುಗಳ ಹೆಚ್ಚುತ್ತಿರುವ ದಿನದಲ್ಲಿ ಗುಣಮಟ್ಟದ ಹಾಲಿಗೆ ಜನರು ಆದ್ಯತೆ ನೀಡಬೇಕು ಎನ್ನುವುದು ನಮ್ಮ ಆಶಯವಾಗಿದೆ.
-ಸಿ.ಕೆ.ಅಂಗಡಿ,
ನಂದಿನಿ ಉತ್ಪನಗಳ ಮಾರುಕಟ್ಟೆ ಅಧಿಕಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.