ADVERTISEMENT

ಪಡಿತರ ವಿತರಣೆ ವಿಳಂಬ: ಪ್ರತಿಭಟನೆ

ಧಾರವಾಡದ ಜನ್ನತ್‌ ನಗರ ಕೊಳೆಗೇರಿ ನಿವಾಸಿಗಳ ಆಗ್ರಹ; ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 9:03 IST
Last Updated 20 ಜನವರಿ 2017, 9:03 IST
ಪಡಿತರ ವಿತರಣೆ ವಿಳಂಬ: ಪ್ರತಿಭಟನೆ
ಪಡಿತರ ವಿತರಣೆ ವಿಳಂಬ: ಪ್ರತಿಭಟನೆ   

ಧಾರವಾಡ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅನ್ನಭಾಗ್ಯ ಯೋಜನೆಯಡಿ ಪಡಿತರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಜನ್ನತ್‌ ನಗರ ಕೊಳೆಗೇರಿ ನಿವಾಸಿಗಳ ಅಭಿವೃದ್ಧಿ ಸಂಘದ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿ ಬಾರಿಯೂ ತಿಂಗಳ ಮೊದಲ ದಿನವೇ ಆಹಾರ ಧಾನ್ಯಗಳ ವಿತರಣೆ ಆಗುತ್ತಿತ್ತು. ಆದರೆ ಈ ಭಾರಿ 19 ದಿನಗಳಾದರೂ ಕೊಟ್ಟಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ‘ಸರ್ಕಾರ ಆಹಾರ ಧಾನ್ಯಗಳ ವಿತರಣೆಗೆ ಇನ್ನೂ ಒಪ್ಪಿಗೆ ಕೊಟ್ಟಿಲ್ಲ’ ಎಂದು ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಕೂಪನ್‌ ಪದ್ಧತಿಯನ್ನು ಕೂಡಲೇ ರದ್ದುಗೊಳಿಸಬೇಕು.  ಪದೇ ಪದೇ ಆಗುತ್ತಿರುವ ಕಂಪ್ಯೂಟರ್‌ ಲೋಪದೋಷದಿಂದ ಅನೇಕ ಬಡವರಿಗೆ ‘ಆಧಾರ್‌’ ಸಂಖ್ಯೆಗಳ ಜೋಡಣೆ ಆಗುತ್ತಿಲ್ಲ. ಈ ಪದ್ಧತಿಯನ್ನೂ ರದ್ದುಮಾಡಬೇಕು.

ಅಂತ್ಯೋದಯ ಮತ್ತು ಬಿಪಿಎಲ್‌ ಫಲಾನುಭವಿಗಳು ಇದ್ದರೂ ಇಲಾಖೆ ವತಿಯಿಂದ ಅವರಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ ಹಾಗೂ ಸರ್ಕಾರ ಜಾರಿಗೆ ತಂದಿರುವ ಎಸ್‌ಎಂಎಸ್‌ ಮಾಡುವ ಪದ್ಧತಿಯನ್ನೂ ರದ್ದು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರಮುಖರಾದ ಜೀವನ ಹುತ್ಕುರಿ, ಜಾವೀದ್ ದೊಡ್ಡಮನಿ, ಪ್ರೇಮಾ ಕೆ., ಜಾಹೀರಾಬಾನು ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.