ADVERTISEMENT

ಪರಿವರ್ತನಾ ಯಾತ್ರೆ; ಬಿಜೆಪಿ ಕಾರ್ಯಕರ್ತರಿಂದ ಬೈಕ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 7:19 IST
Last Updated 21 ಡಿಸೆಂಬರ್ 2017, 7:19 IST

ಹುಬ್ಬಳ್ಳಿ: ನಗರದ ನೆಹರೂ ಮೈದಾನದಲ್ಲಿ ಗುರುವಾರ ನಡೆಯಲಿರುವ ‘ಪರಿವರ್ತನಾ ಯಾತ್ರೆ’ ಅಂಗವಾಗಿ ಬುಧವಾರ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೈಕ್‌ ರ‍್ಯಾಲಿ ನಡೆಸಿದರು.ಇಲ್ಲಿನ ನೆಹರೂ ಮೈದಾನದಿಂದ ಆರಂಭಗೊಂಡ ರ‍್ಯಾಲಿಗೆ ಶಾಸಕ ಸಿ.ಟಿ.ರವಿ ಚಾಲನೆ ನೀಡಿದರು.

ಕೊಪ್ಪಿಕರ್‌ ರಸ್ತೆ, ಬ್ರಾಡ್‌ವೇ, ದುರ್ಗದಬೈಲ್, ಬೆಳಗಾವಿಗಲ್ಲಿ ಕ್ರಾಸ್‌, ಪೆಂಡಾರಗಲ್ಲಿ, ತುಳಜಾ ಭವಾನಿ ವೃತ್ತ, ಹಳೇ ಹುಬ್ಬಳ್ಳಿ ವೃತ್ತ, ಇಟಗಿ ಮಾರುತಿ ಗಲ್ಲಿ, ಮಂಗಳವಾರಪೇಟೆ, ಶಾಂತಿನಾಥ ಸ್ಕೂಲ್‌ ವೃತ್ತ, ಬಾಕಳೆಗಲ್ಲಿ, ಅಜಾದ್‌ ರಸ್ತೆ, ಸ್ಟೇಷನ್‌ ರಸ್ತೆ, ಲ್ಯಾಮಿಂಗ್ಟನ್‌ ರಸ್ತೆ ಮೂಲಕ ಮರಳಿ ನೆಹರೂ ಮೈದಾನ ತಲುಪಿತು.

ಮೇಯರ್‌ ಡಿ.ಕೆ.ಚವ್ಹಾಣ, ಉಪಮೇಯರ್‌ ಲಕ್ಷ್ಮಿ ಬಿಜವಾಡ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಎಪಿಎಂಸಿ ಸದಸ್ಯ ಶಂಕರಣ್ಣ ಬಿಜವಾಡ, ಮುಖಂಡರಾದ ಮಹೇಶ ಟೆಂಗಿನಕಾಯಿ, ಸತೀಶ ಶೆಜವಾಡಕರ, ರಂಗಾ ಬದ್ದಿ ಮುಂತಾದವರು ಬೈಕ್‌ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

‘ದುಶ್ಚಟಗಳ ವಿರುದ್ಧ ಜಾಗೃತಿ ಅಗತ್ಯ’
ಧಾರವಾಡ:
‘ಮದ್ಯಪಾನ, ಮಾದಕದ್ರವ್ಯ ಸೇವನೆಯಂಥ ಚಟಗಳಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಈ ದುಶ್ಚಟಗಳನ್ನು ನಿಯಂತ್ರಿಸುವಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಅಗತ್ಯ’ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಹೇಳಿದರು.

ಮದ್ಯಪಾನ ಮತ್ತು ಮಾದಕದ್ರವ್ಯ ಸೇವನೆಗಳಿಂದ ಆರೋಗ್ಯದ ಮೇಲೆ ಆಗುವ ಹಾನಿ ಕುರಿತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಇಲ್ಲಿನ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ತಿಳಿವಳಿಕೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಡಳಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ. ಬೀದಿ ನಾಟಕ, ಜನ ಜಾಗೃತಿ ಜಾಥಾಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಪ್ರತಿ ವರ್ಷ ಮದ್ಯಪಾನ ವಿರೋಧಿ ದಿನದಂದು ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅನ್ವರ್ ಮುಧೋಳ ಮಾತನಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ, ಮಂಡಳಿಯ ನಿರ್ದೇಶಕ ಶಫಿ ಮುದ್ದೇಬಿಹಾಳ, ಅಬಕಾರಿ ಇಲಾಖೆ ಅಧಿಕಾರಿ ಬಿ.ಆರ್.ಪಾಟೀಲ್, ಅಬಕಾರಿ ಇನ್‌ಸ್ಪೆಕ್ಟರ್‌ ಸಂಜೀವ ಬಳಲೂರು, ಡಾ.ಅಶ್ವಿನಿ ಪದ್ಮಶಾಲಿ ಇದ್ದರು. ‘ಕುಡಿತ ಬೇಡ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.