ADVERTISEMENT

ಬಜೆಟ್‌: ಮಿಶ್ರ ಪ್ರತಿಕ್ರಿಯೆ

ಪ್ರತಿಕ್ರಿಯೆ ನೀಡದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 5:31 IST
Last Updated 2 ಫೆಬ್ರುವರಿ 2017, 5:31 IST
ಬಜೆಟ್‌: ಮಿಶ್ರ ಪ್ರತಿಕ್ರಿಯೆ
ಬಜೆಟ್‌: ಮಿಶ್ರ ಪ್ರತಿಕ್ರಿಯೆ   

ವಿಜಯಪುರ: ಸಂಸತ್‌ನಲ್ಲಿ ಬುಧವಾರ ಮಂಡನೆಯಾದ ಕೇಂದ್ರ ಬಜೆಟ್‌ಗೆ ಜಿಲ್ಲೆಯ ಎಲ್ಲೆಡೆಯಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದರೂ, ಪ್ರಮುಖ ಮೂರು ಪಕ್ಷಗಳ ಜಿಲ್ಲಾ ಘಟಕದ ಅಧ್ಯಕ್ಷರು ಮಾತ್ರ ಕೇಂದ್ರ ಬಜೆಟ್‌ನತ್ತ ಕಣ್ಣಾಡಿಸಲು ಸಾಧ್ಯವಾಗಿಲ್ಲ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ ‘ನಾ ಹಳ್ಳಿಗೆ ಹೋಗಿದ್ದೆ. ಎರಡ್ಮೂರು ಲಗ್ನ ಇದ್ದವು. ಆದ್ದರಿಂದ ಬಜೆಟ್‌ ಗಮನಿಸಲಾಗಿಲ್ಲ’ ಎಂದು ಹೇಳಿದರು.

ಕೇಂದ್ರದ ಬಜೆಟ್‌ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುವ ಸ್ಥಾನಮಾನ ಹೊಂದಿರುವ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ‘ನಾ ಕಾರ್ಯ ಕ್ರಮವೊಂದರಲ್ಲಿದ್ದೆ. ಸಿಂದಗಿ ಯಲ್ಲಿ ನಮ್ಮ ಸಂಬಂಧಿಕರ ಮದುವೆಯಿತ್ತು. ಬಜೆಟ್‌ ಗಮನಿಸಿ ಪ್ರತಿಕ್ರಿಯೆ ನೀಡುವೆ’ ಎಂದು ಬುಧವಾರ ರಾತ್ರಿ ತಿಳಿಸಿದರು.
ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳದ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಸಚಿವ ಎಂ.ಸಿ.ಮನಗೂಳಿ ‘ಇವತ್ತು ಟಿವಿ ನೋಡಲಾಗಲಿಲ್ಲ. ನಾಳೆ ನಾನೇ ಫೋನ್‌ ಮಾಡಿ ಹೇಳುವೆ’ ಎಂದು ಪ್ರತಿಕ್ರಿಯಿಸಿದರು.

ನೇತಾರರ ಪ್ರತಿಕ್ರಿಯೆ: ಸ್ವಾಗತಾರ್ಹ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಸಕ್ತ ಕೇಂದ್ರ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದೆ. ಉದ್ಯೋಗ ಸೃಷ್ಟಿ, ಹೂಡಿಕೆ, ಬಡತನ ನಿರ್ಮೂಲನೆ, ಆರ್ಥಿಕ ಪ್ರಗತಿಗೆ ಸಾಕಷ್ಟು ಅನಕೂಲ ವಾಗಲಿದೆ. ಇದು ಜನಪ್ರಿಯ ಬಜೆಟ್. ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್ ಪೂರೈಕೆ ಸೇರಿದಂತೆ ಹತ್ತಾರು ಉತ್ತಮ ಯೋಜನೆಗಳನ್ನು ಬಜೆಟ್‌ನಲ್ಲಿ ಮಂಡಿಸಲಾಗಿದೆ. ಆರ್ಥಿಕತೆ, ಕೃಷಿ, ಕೈಗಾರಿಕೆ, ಶಿಕ್ಷಣ... ಹೀಗೆ ಎಲ್ಲ ರಂಗಗಳ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಮಂಡಿಸಲಾಗಿದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಬಜೆಟ್ ದೂರದೃಷ್ಟಿಯಿಂದ ಕೂಡಿದೆ. ಸ್ವಚ್ಛ ಭಾರತ, ಮೇಕ್‌ ಇನ್ ಇಂಡಿಯಾ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ದೇಶದ ಸರ್ವತೋಮುಖ ಪ್ರಗತಿ, ಪ್ರತಿಯೊಬ್ಬರ ವಿಕಾಸ ಎಂಬ ಧ್ಯೇಯ ಆಧರಿಸಿ ಬಜೆಟ್ ರೂಪಿಸಲಾಗಿದೆ ಎಂದು ಬಿಜೆಪಿ ಗೋಪ್ರಕೋಷ್ಠದ ಸಂಚಾಲಕ ವಿಜಯ ಜೋಶಿ ತಿಳಿಸಿದ್ದಾರೆ.
ರೈತರಿಗೆ ವರದಾನವಾಗಿದೆ. ರೈತರ ಹಿತರಕ್ಷಣೆಗಾಗಿ ಹಲ ಯೋಜನೆಗಳನ್ನು ರೂಪಿಸಲಾಗಿದೆ. ರೈತರ ಸಾಲದ ಮೇಲೆ 60 ದಿನಗಳ ಬಡ್ಡಿ ವಿನಾಯ್ತಿ, ಪ್ರಾಥಮಿಕ ಸಹಕಾರಿ ಬ್ಯಾಂಕ್‌ಗಳಿಗೆ ₹ 19 ಸಾವಿರ ಕೋಟಿ ಮಂಜೂರು ಸೇರಿದಂತೆ ಹತ್ತಾರು ರೈತಪರವಾದ ಯೋಜನೆ ಗಳನ್ನು ಪ್ರಕಟಿಸಿದ್ದಾರೆ. ಇದೊಂದು ರೈತಸ್ನೇಹಿ ಬಜೆಟ್ ಆಗಿದೆ ಎಂದು ವಿಜಯಪುರ ಬಿಜೆಪಿ ನಗರ ಘಟಕದ ಅಧ್ಯಕ್ಷ -ಶಿವರುದ್ರ ಬಾಗಲಕೋಟ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಬಜೆಟ್ ಉತ್ತಮವಾಗಿದೆ. ಕೃಷಿ–-ಕೈಗಾರಿಕಾ ರಂಗದ ಬೆಳವಣಿಗೆಗೆ ಆದ್ಯತೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿರುವುದು, ಹೆಲ್ತ್‌ ಕಾರ್ಡ್‌ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಉತ್ತಮ ಯೋಜನೆಗಳನ್ನು ಪ್ರಕಟಿಸ ಲಾಗಿದ್ದು, ಇದೊಂದು ಎಲ್ಲ ರೀತಿಯಿಂದಲೂ ಉತ್ತಮ ಬಜೆಟ್ ಎಂದು ಬಿಜೆಪಿ ಮುಖಂಡ ಡಾ.ರಾಜೇಶ ವಲ್ಲ್ಯಾಪುರ ತಿಳಿಸಿದ್ದಾರೆ.

ಬಜೆಟ್ ಆಶಾದಾಯಕ. ಸಣ್ಣ ವ್ಯಾಪಾರಸ್ಥರಿಗೆ ತೆರಿಗೆ ವಿನಾಯ್ತಿ, ಸರ್ಕಾರಿ ನೌಕರರಿಗೆ ಆದಾಯ ತೆರಿಗೆ ಕಡಿಮೆಗೊಳಿಸಿರುವುದು ಸೇರಿದಂತೆ ಹಲ ಉತ್ತಮ ಅಂಶಗಳನ್ನು, ಯೋಜನೆ ಗಳನ್ನು ಹೊಂದಿರುವ ಬಜೆಟ್ ಇದಾಗಿದ್ದು, ಅತ್ತ್ಯುತ್ತಮವಾಗಿದೆ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ -ಎಸ್.ಡಿ.ಕರ್ಪೂರಮಠ ಪ್ರತಿಕ್ರಿಯಿಸಿ ದ್ದಾರೆ.
ಟೀಕೆ: ಕೇಂದ್ರ ಬಜೆಟ್ ಸಂಪೂರ್ಣ ಹುಸಿಯಾಗಿದೆ. ಹಳೆಯ ಯೋಜನೆಗಳಿಗೆ ಹೊಸ ರೂಪ ನೀಡಿ ಪ್ರಕಟಿಸಲಾಗಿದೆ ಹೊರತು ಯಾವುದೇ ರೀತಿಯ ಜನಪರ, ರೈತಪರ, ಕಾರ್ಮಿಕರ ಪರವಾದ ಬಜೆಟ್ ಮಂಡನೆಯಾಗಿಲ್ಲ. ಹಳೆಯ ಬಜೆಟ್‌ನ ಭಟ್ಟಿ ಇಳಿಸುವಿಕೆಯೇ ಇದೆ ಹೊರತು ಹೊಸ ಬಜೆಟ್ ಇಲ್ಲ ಎಂದು ಜಿಲ್ಲಾ ಜೆಡಿಎಸ್‌ನ ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಪಡೇಕನೂರ ಕೇಂದ್ರದ ಬಜೆಟ್‌ ವಿರುದ್ಧ ಕಿಡಿಕಾರಿದ್ದಾರೆ.

ದೊಡ್ಡ ಕೈಗಾರಿಕೋದ್ಯಮಿಗಳಿಗೆ, ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವಂತಹ ಬಜೆಟ್ ಇದು. ಜನ ಸಾಮಾನ್ಯರ ಕಲ್ಯಾಣಕ್ಕಾಗಿ ಯಾವುದೇ ಯೋಜನೆಗಳನ್ನು ಪ್ರಕಟಿ ಸಿಲ್ಲ. ಕೂಲಿ ಕಾರ್ಮಿಕರು, ರೈತರಿಗಾಗಿ ಯಾವುದೇ ಯೋಜನೆ ಪ್ರಕಟಿಸಿಲ್ಲ. ಕೇವಲ ಘೋಷಣೆಗಳಲ್ಲಿಯೇ ಅಂಗೈ ಯಲ್ಲಿ ಅರಮನೆ ತೋರಿಸಿದಂತಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ -ಮಹಾದೇವಿ ಗೋಕಾಕ ಟೀಕಿಸಿದ್ದಾರೆ.

ಸಂಪೂರ್ಣ ನಿರಾಶಾದಾಯಕ. ನಿರುದ್ಯೋಗಿ ಯುವಕರು, ಬಡವರು, ಶ್ರೀಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ. ಮಹಿಳಾ ಸಬಲೀಕರಣಕ್ಕೂ ಒತ್ತು ನೀಡಿಲ್ಲ, ಉದ್ಯೋಗ ಸೃಷ್ಟಿಗೂ ಕ್ರಮ ಕೈಗೊಂಡಿಲ್ಲ. ಶಿಕ್ಷಣ, ಕೃಷಿ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇದೊಂದು ನೀರಸ ಬಜೆಟ್ ಆಗಿದೆ ಎಂದು ಕಾಂಗ್ರೆಸ್‌ ಮುಖಂಡ ಸಂಗಮೇಶ ಬಬಲೇಶ್ವರ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ‘ಹುಳಿ’ಯಾದ ಕೇಂದ್ರ ಬಜೆಟ್...
ಪ್ರಜಾವಾಣಿ ವಾರ್ತೆ

ವಿಜಯಪುರ: ರಾಜ್ಯದ 16 ಜಿಲ್ಲೆಗಳ ದ್ರಾಕ್ಷಿ ಬೆಳೆಗಾರರಿಗೆ ಕೇಂದ್ರ ಬಜೆಟ್ ಕಹಿಯಾಗಿ ಪರಿಣಮಿಸಿದೆ. ವರ್ಷಗಳ ಹೋರಾಟಕ್ಕೆ ಮನ್ನಣೆ ದೊರಕದಾಗಿದೆ.
ಹಲ ವರ್ಷಗಳಿಂದ ದ್ರಾಕ್ಷಿ–ದಾಳಿಂಬೆ ತೋಟಗಾರಿಕೆ ಬೆಳೆಗಾರರು ಸಾಲ ಮನ್ನಾಗೆ ಆಗ್ರಹಿಸಿ ಕೇಂದ್ರ–ರಾಜ್ಯ ಸರ್ಕಾರದ ಬಳಿ ನಿಯೋಗ ತೆರಳಿದ್ದರು.
ಪ್ರತಿ ಬಾರಿಯೂ ಎರಡೂ ಸರ್ಕಾರಗಳು ಪರಸ್ಪರ ಒಬ್ಬರತ್ತ ಒಬ್ಬರು ಬೊಟ್ಟು ಮಾಡಿ, ನಿಯೋಗದ ಮೂಗಿಗೆ ತುಪ್ಪ ಸವರಿ ಕಳುಹಿಸುತ್ತಿದ್ದರು.

ಈ ಬಾರಿ ದ್ರಾಕ್ಷಿ–ದಾಳಿಂಬೆ ಬೆಳೆಗಾರರು ವ್ಯವಸ್ಥಿತವಾಗಿ ಕೇಂದ್ರದ ಹಣಕಾಸು ಸಚಿವ, ಕೃಷಿ ಸಚಿವರ ಬಳಿ ತೆರಳಿ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದರು. ನಿಯೋಗಕ್ಕೂ ಸಕಾರಾತ್ಮಕ ಸ್ಪಂದನೆ ದೊರಕಿತ್ತು. ಇದರ ಆಧಾರದಲ್ಲಿ ಉಳಿದ ಪಾಲನ್ನು ತುಂಬುವಂತೆ ಬೆಳೆಗಾರರು ರಾಜ್ಯ ಸರ್ಕಾರದ ಮೇಲೆ ಅತೀವ ಒತ್ತಡ ಹಾಕುತ್ತಿದ್ದರು.

ಆದರೆ ಬುಧವಾರ ಸಂಸತ್ತಿನಲ್ಲಿ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾದ ವಿಚಾರ ಪ್ರಸ್ತಾಪವಾಗದಿರುವುದಕ್ಕೆ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ಎಸ್‌.ನಾಂದ್ರೇಕರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸ ಸಾಲವೂ ಸಿಗಲ್ಲ: ಕೃಷಿ ವಲಯದ ಅಭಿವೃದ್ಧಿಗಾಗಿ, ರೈತರ ನೆರವಿಗಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ₹ 15 ಲಕ್ಷ ಕೋಟಿ ಹಣವನ್ನು ಸಾಲ ಒದಗಿಸಲಿಕ್ಕಾಗಿಯೇ ಮೀಸಲಿಟ್ಟಿದೆ. ಆದರೆ ಇದು ರಾಜ್ಯದ ರೈತರ ಪಾಲಿಗೆ ಕೈಗೆಟುಕದ ‘ಹುಳಿ ದ್ರಾಕ್ಷಿ’ಯಂತೆ ಎಂದು ನಾಂದ್ರೇಕರ ಟೀಕಿಸಿದರು.

ರಾಜ್ಯದ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‌ಗಳಲ್ಲಿ ₹ 42 ಸಾವಿರ ಕೋಟಿ ಮೊತ್ತ ಸಾಲ ಬಾಕಿಯಿದೆ. ರೈತರ ಸಂಖ್ಯೆ ಅಪಾರ ಪ್ರಮಾಣದಲ್ಲಿದೆ. ಈ ರೈತರಿಗೆ ನೂತನ ಸಾಲ ಯಾವ ಕಾರಣಕ್ಕೂ ಸಿಗಲ್ಲ. ಎಷ್ಟೇ ಬೃಹತ್‌ ಮೊತ್ತ ಮೀಸಲಿಟ್ಟರೂ ರೈತ ಈಗಾಗಲೇ ಸಾಲದ ಶೂಲದಲ್ಲಿ ಸಿಲುಕಿರುವುದರಿಂದ ಹೊಸ ಸಾಲ ಪಡೆಯಲು ಬರುವುದಿಲ್ಲ.
ಇದರಿಂದ ಕೇಂದ್ರ ಸರ್ಕಾರ ರೈತರ ಅಭಿವೃದ್ಧಿಗಾಗಿ ಸಂಕಲ್ಪ ತೊಟ್ಟಿರುವುದಾಗಿ ನೀಡುವ ಘೋಷಣೆ ಕೇವಲ ಹೇಳಿಕೆಗೆ ಮಾತ್ರ ಸೀಮಿತಗೊಳ್ಳುತ್ತದೆ. ಅನುಷ್ಠಾನಕ್ಕೆ ಬರುವುದು ಬಹುತೇಕ ಕಷ್ಟಸಾಧ್ಯ ಎಂದರು.

ADVERTISEMENT

***

ಸಾಮಾನ್ಯ, ಮಧ್ಯಮ ವರ್ಗ ಸೇರಿದಂತೆ ಎಲ್ಲರ ಏಳಿಗೆಗಾಗಿ  ಹಣಕಾಸು ಸಚಿವ ಅರುಣ್ ಜೇಟ್ಲಿ ಅತ್ಯುತ್ತಮ ಬಜೆಟ್‌ ಮಂಡಿಸಿದ್ದಾರೆ
- ರಮೇಶ ಜಿಗಜಿಣಗಿ, ಕೇಂದ್ರ ಸಚಿವ

***

ಕೇಂದ್ರ ಸರ್ಕಾರಗಳು ಸಂಕಷ್ಟದಲ್ಲಿರುವ ದ್ರಾಕ್ಷಿ–ದಾಳಿಂಬೆ ಬೆಳೆಗಾರರ ನೆರವಿಗೆ ಧಾವಿಸಿಲ್ಲ. ಇದರಿಂದ ಬೆಳೆಗಾರರಲ್ಲಿನ ಆತ್ಮಸ್ಥೈರ್ಯ ಕುಸಿದಿದೆ

-ಅಭಯಕುಮಾರ ಎಸ್‌ ನಾಂದ್ರೇಕರ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.