ADVERTISEMENT

ಬಾನಾಡಿಗಾಗಿ ಬಂದ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 15 ಮೇ 2017, 5:41 IST
Last Updated 15 ಮೇ 2017, 5:41 IST

ಧಾರವಾಡ: ನಗರದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಹಳ್ಳಿಗೇರಿಗೆ ಶನಿವಾರ ಚಿಣ್ಣರು ತೆರಳಿ, ಅಲ್ಲಿನ ಹಕ್ಕಿಗಳ ವಿಸ್ಮಯ ಲೋಕ ಅರಿತರು. ಬಿರು ಬೇಸಿಗೆ ಹಿನ್ನೆಲೆ, ಒಣಗಿದ ಕೆರೆಕುಂಟೆಗಳ ದೆಸೆಯಿಂದ ಈ ಬಾರಿ ಬಹುತೇಕ ವಲಸೆ ಹಕ್ಕಿಗಳು ತುಸು ಮುಂಚೆಯೇ ಮರಳಿ ಹೋಗಿದ್ದರ ಕುರಿತು 30ಕ್ಕೂ ಹೆಚ್ಚು ಮಕ್ಕಳು ಕಾರಣ ತಿಳಿದುಕೊಂಡರು.

ವಲಸೆ ಹಕ್ಕಿಗಳ ಅಂತಾರಾಷ್ಟ್ರೀಯ ದಿನಾಚರಣೆ ಅಂಗವಾಗಿ ನೇಚರ್ ರಿಸರ್ಚ್ ಸೆಂಟರ್, ನೇಚರ್ ಫಸ್ಟ್ ಇಕೋ ವಿಲೇಜ್‌ನಲ್ಲಿ ಆಯೋಜಿಸಿದ್ದ, ‘ಒಂದು ಮರ ನೂರು ಸ್ವರ’ ಸ್ಥಳೀಯ ಪಕ್ಷಿಗಳ ವೀಕ್ಷಣೆ ಕಾರ್ಯಕ್ರಮದಲ್ಲಿ ಮಕ್ಕಳನ್ನು ಅಷ್ಟೇ ಕುತೂಹಲದಿಂದ ರೆಕ್ಕೆಯ ಮಿತ್ರರು ಗಮನಿಸಿದರು.

ಒಂದೇ ಅರಳಿ ಮರದಲ್ಲಿ ಸ್ಥಳೀಯ ಪಕ್ಷಿಗಳ ವೀಕ್ಷಿಸುವ ಹಾಗೂ ಅವುಗಳ ಬಗ್ಗೆ ಚರ್ಚಿಸುವ ಮೂಲಕವೂ ಮಹತ್ವದ ದಿನಾಚರಣೆ ಅರಿತರು. ‘ವಲಸೆ ಹಕ್ಕಿಗಳ ಭವಿಷ್ಯದಲ್ಲಿಯೇ ನಮ್ಮ ಭವಿಷ್ಯ ಅಡಗಿದೆ’ ಎಂಬ ಮಹತ್ವವನ್ನು ತಜ್ಞರು ಮಕ್ಕಳಿಗೆ ವಿವರಿಸಿದರು.

ADVERTISEMENT

ಉತ್ತರ ಕರ್ನಾಟಕ ಪಕ್ಷಿ ವೀಕ್ಷಕರ ಸಂಘದ ಎಸ್.ಎಂ.ಪಾಟೀಲ, ಪವನ್ ಮಿಸ್ಕಿನ್, ನೇಚರ್ ರಿಸರ್ಚ್ ಸೆಂಟರ್‌ ಹರ್ಷವರ್ಧನ್‌ ಶೀಲವಂತ, ಪ್ರಕಾಶ ಗೌಡರ. ರಾಮಗಿಳಿ, ಚಿಟ್ಟು ಗಿಳಿ, ಚಿಟ್ಟು ಗುಟುರು, ಚಿಟ್ಟು ಮಡಿವಾಳ, ಮಡಿವಾಳ, ಕೆಮ್ಮಂಡೆ ಗಣಿಗಾರ  ಹಕ್ಕಿ , ಕಿರು ಮಿಂಚುಳ್ಳಿ, ಕೆಮ್ಮೀಸೆ ಪಿಕಳಾರ , ಕೆಂಪು ಬಾಲದ ಪಿಕಳಾರ, ಬಿಳಿ ಕುಂಡೆಕುಸ್ಕ, ಚುಕ್ಕೆ ಮುನಿಯ, ಕಿರು ಗುಲಗಂಜಿ, ಬಿಳಿ ಹುಬ್ಬಿನ ಬೀಸಣಿಗೆ ಬಾಲ, ಹಳದಿ ಹೂ ಗುಬ್ಬಿ, ಕಾಜಾಣ, ಭರದ್ವಾಜ, ಮೈನಾ ಹಕ್ಕಿ , ಗೀಜಗ, ಕದುಗನ ಹಕ್ಕಿ, ಕಾಡು ಕಾಗೆ, ನವಿಲು, ಗೌಜಿಗ ಹಕ್ಕಿ, ಹುಂಡು ಕೋಳಿ, ಮಣಿ ಹೊರಸಲು, ಮನಿಯಾಡಲು, ಬೂದು ಮಂಗಡ್ಡೆ ಹಕ್ಕಿ, ಕೋಗಿಲೆ, ಕೆಂಬೂತ, ಗೋಲ್ಡನ್ ಓರಿಯೋಲ್, ಪ್ಯಾರಾಡೈಸ್ ಫ್ಲೈ ಕ್ಯಾಚರ್ ಹೀಗೆ 35ಕ್ಕೂ ಹೆಚ್ಚು ಸ್ಥಳೀಯ ಪಕ್ಷಿಗಳನ್ನು ಗುರುತಿಸಿ, ಅವುಗಳ ಬದುಕು ಅರಿತರು.

ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆ:
‘ಅವುಗಳ ಭವಿಷ್ಯವೇ ನಮ್ಮ ಭವಿಷ್ಯ’ ‘ವನ್ಯಜೀವಿ ಹಾಗೂ ಮನುಷ್ಯರಿಗಾಗಿ ಸುಸ್ಥಿರ ಅಭಿವೃದ್ಧಿ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಲು ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆ ನಡೆಯುತ್ತಿದೆ. ಸಂಪನ್ಮೂಲ ಲಭ್ಯತೆ ಆಧರಿಸಿ ಬಳಕೆ ಮಿತಿ, ಮಾನವ ಮತ್ತು ವಲಸೆ ಹಕ್ಕಿ ಮಧ್ಯದ ಆಂತರಿಕ ಅವಲಂಬನೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಈ ದಿನಾಚರಣೆ ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.