ADVERTISEMENT

‘ಬಿಜೆಪಿ ಕಿತ್ತೊಗೆಯಲು ಮುನ್ನುಡಿ’

​ಪ್ರಜಾವಾಣಿ ವಾರ್ತೆ
Published 28 ಜುಲೈ 2017, 6:35 IST
Last Updated 28 ಜುಲೈ 2017, 6:35 IST

ಹುಬ್ಬಳ್ಳಿ: ‘ಮುಂದಿನ ಲೋಕಸಭಾ ಚುನಾವಣೆಗೆ ದೇಶದಿಂದ ಬಿಜೆಪಿಯನ್ನು ಕಿತ್ತೊಗೆಯಲು ಕರ್ನಾಟಕದಿಂದಲೇ ಮುನ್ನುಡಿ ಬರೆಯಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರಿಗೆ ಮಾತನಾಡಿದ ಅವರು, ‘ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿ ಕೊಳ್ಳದೇ ಕಾಂಗ್ರೆಸ್‌ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲಿದೆ’ ವಿಶ್ವಾಸ ವ್ಯಕ್ತಪಡಿಸಿದರು.

ತೀರ್ಮಾನಿಸಿಲ್ಲ: ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಸಂಬಂಧ ಸಚಿವರ ತಂಡವನ್ನೂ ನೇಮಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯಪುರ ಮತ್ತು ಧಾರವಾಡಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆ ಸಮುದಾಯದ ಮುಖಂಡರು ಮತ್ತು ಮಠಾಧೀಶರು, ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಮುಂದಿ ಟ್ಟಾಗ ಪರಿಶೀಲಿಸುವುದಾಗಿ ಭರವಸೆ ನೀಡಿದ್ದೆ. ಇದೀಗ ಈ ಕುರಿತು ಪರ, ವಿರೋಧ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಆ ಸಮುದಾಯದಿಂದ ಅಧಿಕೃತ ಮನವಿ ಬಂದರೆ ಕಾನೂನಾತ್ಮಕವಾಗಿ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಬಿಜೆಪಿ ಯೂಟರ್ನ್‌: ಕನ್ನಡ ಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡುವ ಸರ್ಕಾರದ ಕ್ರಮವನ್ನು ವಿರೋಧಿಸುತ್ತಾ ಬಂದಿದ್ದ ಬಿಜೆಪಿ ನಿಲುವಿಗೆ ಸಾಹಿತಿಗ ಳಿಂದ, ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ ಇದೀಗ ಬಿಜೆಪಿ ಈ ವಿಷಯದಲ್ಲಿ ತಟಸ್ಥವಾಗಿರಲು ನಿರ್ಧರಿಸುವ ಮೂಲಕ ‘ಯೂಟರ್ನ್‌’ ಹೊಡೆದಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಅವಕಾಶವಾದಿ ರಾಜಕಾರಣ:
‘ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅವಕಾಶವಾದಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ.  ಈ ಹಿಂದಿನ ಚುನಾವಣೆಯಲ್ಲಿ ಜೆಡಿಯು ಮತ್ತು ಆರ್‌ಜೆಡಿ ಒಟ್ಟಾಗಿ ಹೋದ ಕಾರಣಕ್ಕೆ ಜನರು ಆಶೀರ್ವದಿಸಿದ್ದರು. ನಿತೀಶ್‌ ಅಥವಾ ಲಾಲೂ ಪ್ರತ್ಯೇಕವಾಗಿ ಚುನಾವಣೆಗೆ ಹೋಗಿದ್ದರೆ ಯಾರಿಗೂ ಜಯ ಸಾಧ್ಯವಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವಮಾನ: ಮೇಯರ್‌ ಆರೋಪ
ಹುಬ್ಬಳ್ಳಿ: ಮುಖ್ಯಮಂತ್ರಿಗೆ ಸ್ವಾಗತ ಕೋರಲು ವಿಮಾನ ನಿಲ್ದಾಣದ ಒಳ ಹೋಗಲು ಅವಕಾಶ ನೀಡದೇ ಅಗೌರವ ತೋರಲಾಗಿದೆ ಎಂದು  ಮೇಯರ್‌ ಡಿ.ಕೆ.ಚವ್ಹಾಣ ಆರೋಪಿಸಿದರು.

ಪೊಲೀಸರು ಶಿಷ್ಟಾಚಾರವನ್ನು ಪಾಲಿಸದೇ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಅಣತಿಯಂತೆ ನಡೆದುಕೊಂಡಿದ್ದಾರೆ. ಉದ್ದೇಶ ಪೂರ್ವಕವಾಗಿ ನನ್ನನ್ನು ವಿಮಾನ ನಿಲ್ದಾಣದ ಒಳಗೆ ಬಿಡಲಿಲ್ಲ ಎಂದು ದೂರಿದರು. ಮಾಧ್ಯಮಗಳ ಎದುರು ಮೇಯರ್‌ ಮಾತನಾಡುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್‌ ಕಮಿಷನರ್‌ ಪಾಂಡುರಂಗ ರಾಣೆ, ಮೇಯರ್ ಅವರ ಕೈಹಿಡಿದು ನಿಲ್ದಾಣದ ಒಳಗೆ ಕರೆದುಕೊಂಡು ಹೋದರು.

ಸ್ವಲ್ಪ ಸಮಯದ ಬಳಿಕ ಮತ್ತೆ ಅಸಮಾಧಾನದಿಂದ ಹೊರಬಂದ ಮೇಯರ್‌ ಡಿ.ಕೆ.ಚವ್ಹಾಣ, ಮುಖ್ಯ ಮಂತ್ರಿ ಸ್ವಾಗತಿಸಲು ನಿಲ್ದಾಣದ ಒಳಗೆ ಕಾಂಗ್ರೆಸ್‌ನ ಸಣ್ಣಪುಟ್ಟ ಕಾರ್ಯಕರ್ತರನ್ನು ಬಿಟ್ಟಿದ್ದಾರೆ. ಆದರೆ, ನನ್ನನ್ನು ಒಳಗೆ ಬಿಡದೇ ಮತ್ತೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಉಪ ಮೇಯರ್‌ ಲಕ್ಷ್ಮಿ ಬಿಜವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.