ADVERTISEMENT

ಬೆಳಕಿನಲ್ಲಿ ಮಿಂದೆದ್ದ ಮೂರುಸಾವಿರ ಮಠ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 9:04 IST
Last Updated 21 ನವೆಂಬರ್ 2017, 9:04 IST
ಹುಬ್ಬಳ್ಳಿಯ ಮೂರುಸಾವಿರ ಮಠದ ಆವರಣದಲ್ಲಿ ಕಾರ್ತೀಕ ಮಾಸದ ಅಂಗವಾಗಿ ಸೋಮವಾರ ನಡೆದ ಲಕ್ಷ ದೀಪೋತ್ಸವ ನೋಡುಗರ ಕಣ್ಮನ ಸೆಳೆಯಿತು
ಹುಬ್ಬಳ್ಳಿಯ ಮೂರುಸಾವಿರ ಮಠದ ಆವರಣದಲ್ಲಿ ಕಾರ್ತೀಕ ಮಾಸದ ಅಂಗವಾಗಿ ಸೋಮವಾರ ನಡೆದ ಲಕ್ಷ ದೀಪೋತ್ಸವ ನೋಡುಗರ ಕಣ್ಮನ ಸೆಳೆಯಿತು   

ಹುಬ್ಬಳ್ಳಿ: ಕಾರ್ತೀಕ ಮಾಸದ ಅಂಗವಾಗಿ ಮೂರುಸಾವಿರ ಮಠದಲ್ಲಿ ಸೋಮವಾರ ನಡೆದ ಲಕ್ಷ ದೀಪೋತ್ಸವ ಭಕ್ತರ ಕಣ್ಮನ ಸೆಳೆಯಿತು. ಎತ್ತ ನೋಡಿದರೂ ದೀಪಗಳೇ ಕಂಗೊಳಿಸುತ್ತಿದ್ದವು. ಶ್ರೀಸದ್ಗುರು ಶಿವಯೋಗಿಗಳ ಗದ್ದುಗೆ, ಮಠದ ಆವರಣದಲ್ಲಿ ಒಪ್ಪವಾಗಿ ಜೋಡಿಸಲಾಗಿದ್ದ ಹಣತೆಗಳನ್ನು ಮಹಿಳೆಯರು, ಮಕ್ಕಳು ಬೆಳಗಿದರು. ಇಷ್ಟಾರ್ಥ ಸಿದ್ಧಿಸಲೆಂದು ಪ್ರಾರ್ಥಿಸಿ, ದೀಪಗಳನ್ನು ಬೆಳಗಿ, ಭಕ್ತಿಯ ಪರಾಕಾಷ್ಠೆ ಮೆರೆದರು.

ದಾಜಿಬಾನಪೇಟೆ, ಕಮರಿಪೇಟೆ, ಹಳೇ ಹುಬ್ಬಳ್ಳಿ, ಆನಂದನಗರ, ಗಬ್ಬೂರ, ಬಿಡ್ನಾಳ, ಗೋಪನಕೊಪ್ಪ, ನಾಗಶೆಟ್ಟಿಕೊಪ್ಪ, ದೇಶಪಾಂಡೆನಗರ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಭಕ್ತರು ಮಠದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ದೀಪಗಳಿಗೆ ಎಣ್ಣೆಗಳನ್ನು ಹಾಕಿ, ಬೆಳಗಿದರು. ಮಠದ ಆವರಣದಲ್ಲಿ ಹಬ್ಬದ ವಾತಾವರಣ ಕಂಡುಬಂತು.

ವಿದ್ಯಾರ್ಥಿ, ಅಧ್ಯಾಪಕರ ಸೇವೆ: ಮಠದ ಆವರಣದಲ್ಲಿ ದೀಪಗಳನ್ನು ಸಾಲಾಗಿ ಜೋಡಿಸಿ, ಎಣ್ಣೆ ಬಿಡಲು ವಿದ್ಯಾವರ್ಧಕ ಸಂಘದ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ನೆರವಾದರು. ಮಠದ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಿದರು.

ADVERTISEMENT

ಮಠದ ದ್ವಾರದ ಮುಂದೆ ಭಕ್ತರು ಆಕಾಶಬುಟ್ಟಿಯನ್ನು ಹಾರಿ ಬಿಟ್ಟರು. ದೀಪ ಬೆಳಗುತ್ತಲೇ ಬಾನಿನತ್ತ ಹೊರಟ ಆಕಾಶಬುಟ್ಟಿ ಸೊಬಗನ್ನು ಭಕ್ತರು ಕಣ್ತುಂಬಿಕೊಂಡರು. ಮಕ್ಕಳು
ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಲಕ್ಷ ದೀಪೋತ್ಸವ ಅಂಗವಾಗಿ ಮಠದ ಗದ್ದುಗೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ ನಡೆಯಿತು. ದೀಪಗಳನ್ನು ಬೆಳಗಿ ಮನೆಯತ್ತ ಹೆಜ್ಜೆ ಹಾಕಿದವರಿಗೆ ಚುರಮುರಿ ಪ್ರಸಾದವನ್ನು ನೀಡಲಾಯಿತು.

ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರವಿಂದ ಕುಬಸದ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಕೆ.ಎಲ್‌.ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ವೀರೇಶ ಸಂಗಳದ, ಜಗದೀಶ ಬುಳ್ಳನವರ, ರಾಜು ಕೋರ್ಯಾನಮಠ, ಮಠದ ಪೂಜಾ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ರು, ಗುರುಸಿದ್ದೇಶ್ವರ ಕಲ್ಯಾಣ ಮಂಟಪ ಸಮಿತಿ ಅಧ್ಯಕ್ಷ ಕುಮಾರಗೌಡ ಪಾಟೀಲ, ನಿರ್ಮಲಾ ಹಿರೇಮಠ, ಡಿ.ಎಂ.ಸಾಲಿಮಠ, ತಾರಾದೇವಿ ವಾಲಿ, ಹೇಮಾ ನೀಲಕಂಠನವರ, ಎಸ್‌.ಎಸ್‌.ಕಮಡೊಳ್ಳಿ ಶೆಟ್ರು, ನವೀನ ಕುದುರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.