ADVERTISEMENT

ಮದ್ಯದಂಗಡಿ ಬಂದ್‌ಗೆ ಒತ್ತಾಯ: ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 4:57 IST
Last Updated 30 ಆಗಸ್ಟ್ 2017, 4:57 IST

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ನೇಕಾರನಗರ ಗಿರಿಯಾಲ ಕ್ರಾಸ್ ಬಳಿ ತೆರೆಯಲಾಗಿರುವ ಮದ್ಯದಂಗಡಿ ಬಂದ್‌ ಮಾಡಿಸುವಂತೆ ಒತ್ತಾಯಿಸಿ ನೇಕಾರನಗರ ಸೇರಿದಂತೆ ಸುತ್ತ–ಮುತ್ತಲ ಬಡಾವಣೆಯ ನಿವಾಸಿಗಳು ಮಂಗಳವಾರ ದಿಢೀರ್‌ ರಸ್ತೆ ತಡೆ ಮಾಡಿದರು.

ಇದರಿಂದ ಗಿರಿಯಾಲ ಕ್ರಾಸ್‌ನಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಬಂದು ಅಹವಾಲು ಸ್ವೀಕರಿಸಿ, ಬಾರ್‌ ಬಂದ್ ಮಾಡಿಸುವುದಾಗಿ ಭರವಸೆ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

‘ಹೆದ್ದಾರಿಗೆ ಹೊಂದಿಕೊಂಡಿರುವ 500 ಮೀ. ವ್ಯಾಪ್ತಿಯಲ್ಲಿನ ಬಾರ್‌ ಬಂದ್‌ ಮಾಡುವಂತೆ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಶುಕ್ರವಾರದವರೆಗೂ ಬಾರ್‌ ಬಂದ್ ಮಾಡಲಾಗಿತ್ತು. ಆದರೆ, ಶನಿವಾರದಿಂದ ಮತ್ತೆ ತೆರೆಯಲಾಗಿದೆ. ಗಣೇಶ ವಿಸರ್ಜನೆ 5ನೇ ದಿನದ ನಿಮಿತ್ತ ಇದೀಗ ಬಂದ್ ಮಾಡಲಾಗಿದೆ.

ADVERTISEMENT

ಮದ್ಯ ಕುಡಿದವರು ರಸ್ತೆಯಲ್ಲಿ ನಿಂತು ಮಹಿಳೆಯರು ಮತ್ತು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಬಾರ್‌ ಬಂದ್ ಮಾಡಿಸುವ ಮೂಲಕ ಕುಡುಕರ ಹಾವಳಿ ತಪ್ಪಿಸಬೇಕು’ ಎಂದು ಸ್ಥಳೀಯರಾದ ಎಸ್‌.ಜಿ. ದೊಡ್ಡಮನಿ ಒತ್ತಾಯಿಸಿದರು.

‘ಮಕ್ಕಳನ್ನು ಶಾಲೆಗೆ ಬಿಡಲು ಹೋದರೆ ಕುಡಿದು ರಸ್ತೆಯಲ್ಲಿ ನಿಂತಿರುವವರು ಮೈಮೇಲೆ ಬೀಳುತ್ತಾರೆ. ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಮಹಿಳೆಯರು ಎದುರಿಸುತ್ತಿರುವ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳು ಬಾರ್‌ ಬಂದ್‌ ಮಾಡಿಸಬೇಕು’ ಎಂದು ಶೈಲಜಾ ಆಲದಹಳ್ಳಿ ಆಗ್ರಹಿಸಿದರು.

ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿಗಳು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ‘ಬಾರ್‌ ಬಂದ್‌ ಮಾಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಮನೋಹರ ಹೊಸೂರ, ಅಚ್ಯುತರಾವ್‌ ಮಹಿಷಿ, ಸಿ.ವಿ. ನರಗುಂದ, ವೀಣಾ ಕುಬಸದ, ಶಕುಂತಲಾ ದೊಡ್ಡಮನಿ, ಕಸ್ತೂರಿ ಪಾಟೀಲ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.