ADVERTISEMENT

‘ಮೊದಲು ಪಿಂಚಣಿ ಹಣ ತನ್ನಿ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 9:03 IST
Last Updated 22 ನವೆಂಬರ್ 2017, 9:03 IST
ಪ್ರದೀಪ ಶೆಟ್ಟರ್
ಪ್ರದೀಪ ಶೆಟ್ಟರ್   

ಹುಬ್ಬಳ್ಳಿ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದರೂ ಅವಳಿನಗರ ಅಭಿವೃದ್ಧಿ ಹೊಂದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಆದರೆ, ಮೂರು ದಶಕಗಳಿಂದ ರಾಜಕೀಯದಲ್ಲಿರುವ, ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಹೊರಟ್ಟಿ, ಹುಬ್ಬಳ್ಳಿ–ಧಾರವಾಡಕ್ಕೆ ನೀಡಿರುವ ಕೊಡುಗೆ ಏನು’ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಸ್ತೆ ಗುಂಡಿಗಳ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಮೊದಲು, ರಾಜ್ಯ ಸರ್ಕಾರದಿಂದ ಪಾಲಿಕೆಗೆ ಬರಬೇಕಾದ ಪಿಂಚಣಿ ₹137 ಕೋಟಿ ಬಿಡುಗಡೆ ಮಾಡಿಸಲಿ’ ಎಂದು ಅವರು ಹೇಳಿದ್ದಾರೆ.

‘ವಿಧಾನ ಪರಿಷತ್‌ನಲ್ಲಿ ನಡೆದ ಚರ್ಚೆಯಲ್ಲಿ ಹೊರಟ್ಟಿಯವರು ಜಗದೀಶ ಶೆಟ್ಟರ್ ಅವರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಂಸದ ಪ್ರಹ್ಲಾದ ಜೋಶಿ ಅವರ ಸತತ ಪ್ರಯತ್ನದಿಂದಲೇ ನಗರದ ಯುಜಿಡಿ ಹಾಗೂ 24X7 ಕುಡಿಯುವ ನೀರಿನ ಯೋಜನೆಗೆ ಚಾಲನೆ ದೊರೆತಿದ್ದು, ನಗರದ 26 ವಾರ್ಡ್‌ಗಳಲ್ಲಿ ನಿರಂತರ ನೀರು ಪೂರೈಕೆ ಆಗುತ್ತಿದೆ. ಇದಲ್ಲದೆ, ಜೋಶಿಯವರ ವಿಶೇಷ ಪ್ರಯತ್ನದಿಂದ ಅವಳಿನಗರಗಳ ಒಳರಸ್ತೆಗಳ ಸುಧಾರಣೆಗಾಗಿ ಕೇಂದ್ರ ಸರ್ಕಾರ ಸಿ.ಆರ್.ಎಫ್ ನಿಧಿಯಡಿ ₹442 ಕೋಟಿಯಷ್ಟು ದಾಖಲೆಯ ಅನುದಾನ ದೊರಕಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಆದರೆ, 2 ವರ್ಷಗಳಾದರೂ ರಾಜ್ಯ ಸರ್ಕಾರಕ್ಕೆ ಮಂಜೂರಾದ ರಸ್ತೆಗಳ ಸುಧಾರಣಾ ಕಾಮಗಾರಿಗಳಿಗೆ ಟೆಂಡರ್ ಕರೆಯುವುದೂ ಸಾಧ್ಯವಾಗಿಲ್ಲ. ಪಾಲಿಕೆ ನಿವೃತ್ತ ನೌಕರರ ಜೀವನಾಂಶವಾದ ಪಿಂಚಣಿಯನ್ನು ಬೇರೆ ಮೂಲಗಳಿಂದ ಅನಿವಾರ್ಯವಾಗಿ ಪಾವತಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಅವಳಿ ನಗರಕ್ಕೆ ಸಚಿವರು, ಹೊಸ ಯೋಜನೆಗಳನ್ನು ತರುವುದಿರಲಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಬಿಆರ್‌ಟಿಎಸ್ ಕಾಮಗಾರಿಗೆ ತಮ್ಮ ಸರ್ಕಾರದ ಅವಧಿ ಮುಗಿಯುತ್ತಾ ಬಂದರೂ, ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿಲ್ಲ. ಇದರಿಂದ ಸಾರ್ವಜನಿಕರಿಗೆ ಎಷ್ಟು ತೊಂದರೆಯಾಗುತ್ತಿದೆ ಎಂಬುದರ ಬಗ್ಗೆ ಸಚಿವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

‘10 ವರ್ಷಗಳ ಯುಪಿಎ ಆಡಳಿತದಲ್ಲಿ ಜಿಲ್ಲೆಗೆ ಸಿ.ಆರ್.ಎಫ್ ನಲ್ಲಿ ಎಷ್ಟು ಹಣ ಕಾಂಗ್ರೆಸ್ ಸರ್ಕಾರ ನೀಡಿದೆ ಎಂಬುದನ್ನು ಸಚಿವ ವಿನಯ ಕುಲಕರ್ಣಿ ಹಾಗೂ ಹೊರಟ್ಟಿಯವರೇ ತಿಳಿಸಲಿ’ ಎಂದೂ ಪ್ರದೀಪ ಶೆಟ್ಟರ್‌ ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.