ADVERTISEMENT

ಯೇಸು ಪುನರುತ್ಥಾನ: ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 10:17 IST
Last Updated 16 ಏಪ್ರಿಲ್ 2017, 10:17 IST
ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ಶನಿವಾರ ಮೆರವಣಿಗೆಯಲ್ಲಿ ಸಾಗಿದ ಶಿಲುಬೆಗೆ ಏರಿಸಿದ ಯೇಸು ಮೂರ್ತಿ
ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ಶನಿವಾರ ಮೆರವಣಿಗೆಯಲ್ಲಿ ಸಾಗಿದ ಶಿಲುಬೆಗೆ ಏರಿಸಿದ ಯೇಸು ಮೂರ್ತಿ   

ಹುಬ್ಬಳ್ಳಿ: ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ಮತ್ತು ಪುನರುತ್ಥಾನದ ಅಂಗವಾಗಿ ಕರ್ನಾಟಕ ರಾಜ್ಯ ಕ್ರಿಶ್ಚಿಯನ್‌ ಅಲ್ಪಸಂಖ್ಯಾತರ ಕಲ್ಯಾಣ ಸಂಘದ ವತಿಯಿಂದ ನಗರದಲ್ಲಿ ಶನಿವಾರ ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ಸುಮಾರು 60 ಅಡಿ ಉದ್ದದ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.

ನಗರದ ಗದಗ ರಸ್ತೆಯ ಮಕ್ಕಳ ಉದ್ಯಾನದಿಂದ ಹೊರಟ ಮೆರವಣಿಗೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಕ್ರೈಸ್ತರು ಭಾಗವಹಿಸಿ ಯೇಸು ಪರ ಘೋಷಣೆಗಳನ್ನು ಮೊಳಗಿಸಿದರು. ಗದಗ ರಸ್ತೆ, ಕೇಶ್ವಾಪುರ ವೃತ್ತ, ಕೋರ್ಟ್‌ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಿ.ಆರ್‌. ಅಂಬೇಡ್ಕರ್‌ ವೃತ್ತ ಹಾದು ಮತ್ತೆ ಗದಗ ರಸ್ತೆ ತಲುಪಿತು.ಮೆರವಣಿಗೆ ಉದ್ದಕ್ಕೂ ಧರ್ಮಗುರುಗಳು ಪುಷ್ಪಾರ್ಚನೆ ಮಾಡಿದರು. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಸಂಘದ ಅಧ್ಯಕ್ಷ ಲಾಜರಸ್‌ ಲುಂಜಾನ, ಫಾ. ಜೇಮ್ಸ್ ತಲಪಾಟಿ, ರೆ.ಪಿ. ಜಾನ್‌ ವಿಲಿಯಮ್‌, ಸೇಡ್ರಿಕ್‌ ಜಾಕೋಬ್‌, ಡಾ.ಜುಂಜು ಮೇತಾಕ್‌, ಡಾ.ಪಿ. ಇಮ್ಯಾನುಯಲ್‌, ಎಡ್ವರ್ಡ್‌ ಗೌಡರ, ವಿ.ಡಿ. ಪ್ರಭಾಕರ, ಗಾಬ್ರೀಲ್‌ ಗಾಂಧಿ, ಎಸ್‌.ಎಚ್‌. ಉಳ್ಳಾಗಡ್ಡಿ, ಫಾ.ಪಿಡೋಲಿನಾ, ರವಿ ಪ್ರಸಾದ, ಜೋ ಡಿಸೋಜಾ, ಇಮ್ಯಾನುಯಲ್‌ ಸುರಣಗಿ, ಸುಭಾಷಕರ, ಶಾಂತಕುಮಾರ ಆಡಗಲ್‌, ಥಿಯೋಫಿಲಸ್‌ ಭಿಲ್ಲಾ ಶ್ರೀರಂಗಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ADVERTISEMENT

ವಿಶೇಷ ಪ್ರಾರ್ಥನೆ:  ಯೇಸುವಿನ ಪುನರುತ್ಥಾನ ಅಂಗವಾಗಿ ಕೇಶ್ವಾಪುರದ ರಸ್ತೆಯ ಸೇಂಟ್‌ ಜೋಸೆಫ್‌ ಚರ್ಚ್‌ನಲ್ಲಿ ರಾತ್ರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
‘ಭಕ್ತರಿಗೆ ನೀಡಲಾಗುವ ಪವಿತ್ರ ನೀರನ್ನು ಪವಿತ್ರೀಕರಣ ಮಾಡಲಾಯಿತು. ವರ್ಷಪೂರ್ತಿ ಅದನ್ನು ವಿವಿಧ ಪೂಜೆ, ಆಶೀರ್ವಾದಗಳಿಗೆ ಬಳಸಲಾಗುವುದು’ ಎಂದು ಚರ್ಚ್‌ನ ರಾಜೇಂದ್ರ ಪ್ರಸಾದ್‌ ತಿಳಿಸಿದರು.

ಸಂಚಾರ ದಟ್ಟಣೆ: ಮೆರವಣಿಗೆಯಿಂದಾಗಿ ಗದಗ ರಸ್ತೆ, ಕೇಶ್ವಾಪುರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಚನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಯಿತು.
ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರ ಸುಗಮಗೊಳಿಸಲು ಪೊಲೀಸರು ಹೆಣಗಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.