ADVERTISEMENT

ರಸ್ತೆ ಒತ್ತುವರಿ ತೆರವಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 9:52 IST
Last Updated 18 ಫೆಬ್ರುವರಿ 2017, 9:52 IST
ಹುಬ್ಬಳ್ಳಿ:  ಇಲ್ಲಿನ ಬಂಕಾಪುರ ಚೌಕ ಬಳಿ ಸಂಚಾರ ದಟ್ಟಣೆ ಇರುವುದರಿಂದ, ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಶಾಸಕ ಪ್ರಸಾದ ಅಬ್ಬಯ್ಯ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
 
₹ 14 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಲಿದ್ದು, ರಸ್ತೆ ಪಕ್ಕದಲ್ಲಿನ ವಿದ್ಯುತ್ ಕಂಬಗಳು ಹಾಗೂ ಮರಗಳ ತೆರವಿಗೆ ವಿಳಂಬ ಮಾಡುತ್ತಿರುವ ಹೆಸ್ಕಾಂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು. 
 
ಅಲ್ಲದೆ, ರಸ್ತೆ ಮೇಲೆ ಬಂದಿರುವ ಮರಗಳನ್ನು ತೆರವುಗೊಳಿಸಿ, ಹೊಸ ರಸ್ತೆ ನಿರ್ಮಾಣವಾದ ಬಳಿಕ ಸೂಕ್ತ ಜಾಗೆಯಲ್ಲಿ ಗಿಡ ಮರಗಳನ್ನು ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.  
 
ರಸ್ತೆ ಒತ್ತುವರಿದಾರರಿಗೆ ನೋಟಿಸ್‌ ಕೊಟ್ಟು, ನಿಯಮಿತ ಕಾಲಾವಕಾಶ ನೀಡಿ ಪೊಲೀಸರ ಸಹಕಾರ ಪಡೆದು ಮಳಿಗೆಗಳನ್ನು ತೆರವುಗೊಳಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು. ಒತ್ತುವರಿದಾರರು ಸಹ ಕಾಲ ಮಿತಿಯೊಳಗೆ ತಮ್ಮ ಮಳಿಗೆಗಳನ್ನು ತೆರವು ಮಾಡಿ ನಗರದ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
 
ಪಾಲಿಕೆಯ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ಕುಮಾರ ಕುಂದನಹಳ್ಳಿ, ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳಾದ ಎನ್.ಬಿ. ಅರಳಿಕಟ್ಟಿ, ವಿ.ಬಿ. ಯಮಕನಮರಡಿ, ಎಸ್.ಪಿ. ಕಟ್ಟಿಮನಿ, ಎಚ್. ವಿಜಯಕುಮಾರ, ಉಮಾಪತಿ, ದಿವಾನಜೀ, ಹೆಸ್ಕಾಂನ ರಾಥೋಡ್, ಸಿಟಿ ಸರ್ವೇಯರ್ ಸೂರ್ಯವಂಶಿ, ವಲಯಾಧಿಕಾರಿ ಬಸವರಾಜ ಲಮಾಣಿ, ಸಂಚಾರಿ ಪೊಲೀಸ್ ವಿಭಾಗದ ಅಲಿ ಶೇಖ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.