ADVERTISEMENT

ರೈತರ ದವಸ,ಧಾನ್ಯ ಸ್ವಚ್ಛತೆ ಇನ್ನು ಸುಲಭ

ಬಸವರಾಜ ಸಂಪಳ್ಳಿ
Published 18 ಏಪ್ರಿಲ್ 2017, 5:52 IST
Last Updated 18 ಏಪ್ರಿಲ್ 2017, 5:52 IST
ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಿರ್ಮಾಣವಾಗಿರುವ ಕ್ಲೀನಿಂಗ್‌, ಗ್ರೇಡಿಂಗ್‌, ಪ್ಯಾಕಿಂಗ್‌ ಘಟಕ
ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಿರ್ಮಾಣವಾಗಿರುವ ಕ್ಲೀನಿಂಗ್‌, ಗ್ರೇಡಿಂಗ್‌, ಪ್ಯಾಕಿಂಗ್‌ ಘಟಕ   

ಹುಬ್ಬಳ್ಳಿ: ಜೋಳ, ಹೆಸರು, ಉದ್ದು, ಸೋಯಾಬೀನ್‌, ಗೋದಿ ಮತ್ತಿತರ ದವಸ, ಧಾನ್ಯಗಳಲ್ಲಿ ಇರುವ ಕಸ, ಕಡ್ಡಿ, ಕಲ್ಲು, ಹೊಟ್ಟನ್ನು ರೈತರು ಸುಲಭವಾಗಿ ಸ್ವಚ್ಛಗೊಳಿಸಿಕೊಳ್ಳಲು ಮತ್ತು ಅವುಗಳ ಗಾತ್ರಕ್ಕೆ ತಕ್ಕಂತೆ ಗ್ರೇಡಿಂಗ್‌ ಮಾಡಿಕೊಳ್ಳಲು ಅನುಕೂಲವಾಗುವಂತೆ ಇಲ್ಲಿನ ಅಮರಗೋಳ ಎಪಿಎಂಸಿ ಆವರಣದಲ್ಲಿ ಮಲ್ಪಿಗ್ರೇನ್ಸ್‌ ಕ್ಲಿನಿಂಗ್‌, ಗ್ರೇಡಿಂಗ್‌, ಪ್ಯಾಕಿಂಗ್‌ ಘಟಕವನ್ನು ಹೊಸದಾಗಿ ಸ್ಥಾಪಿಸಲಾಗಿದೆ.

2014–15ನೇ ಸಾಲಿನ ನಬಾರ್ಡ್‌ನ ವೇರ್‌ಹೌಸ್‌ ಇನ್‌ಫ್ರಾಸ್ಟ್ರಕ್ಚರ್‌ ಫಂಡ್‌(ಡಬ್ಲ್ಯೂಐಎಫ್‌) ಯೋಜನೆಯಡಿ ₹ 1 ಕೋಟಿ ಮೊತ್ತದಲ್ಲಿ ನಿರ್ಮಾಣವಾಗಿರುವ ಮಲ್ಪಿಗ್ರೇನ್ಸ್‌ ಕ್ಲೀನಿಂಗ್‌, ಗ್ರೇಡಿಂಗ್‌, ಪ್ಯಾಕಿಂಗ್‌ ಘಟಕ ಶೀಘ್ರದಲ್ಲೇ ರೈತರ ಸೇವೆಗೆ ಲಭಿಸಲಿದೆ ಎಂದು ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎಚ್‌.ಸಿ.ಗಜೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷಿಕರು ತಮ್ಮ ಹೊಲದಲ್ಲಿ ಬೆಳೆದ ದವಸ, ಧಾನ್ಯಗಳನ್ನು ನೇರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದು  ಕ್ಲೀನಿಂಗ್‌, ಗ್ರೇಡಿಂಗ್‌, ಪ್ಯಾಕಿಂಗ್‌ ಮಾಡಿಕೊಳ್ಳುವುದರಿಂದ ಸಮಯ, ಶ್ರಮ ಉಳಿತಾಯವಾಗುವ ಜೊತೆಗೆ ನೇರವಾಗಿ ಮಾರಾಟಕ್ಕೂ ಅನುಕೂಲವಾಗಲಿದೆ. ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ಸುಲಭವಾಗಿ ಬೆಲೆ ನಿಗದಿ ಮಾಡಲು ಮತ್ತು ಸ್ಪರ್ಧಾತ್ಮಕ ಬೆಲೆ ಪಡೆಯಲು ಅನುಕೂಲವಾಗುತ್ತದೆ.  ಜೊತೆಗೆ ಖರೀದಿದಾರರಿಗೆ ಕೃಷಿ ಉತ್ಪನ್ನದ ನಿರ್ಧಿಷ್ಟ ಗುಣಮಟ್ಟ ತಿಳಿಯಲು ಸಹಾಯವಾಗುತ್ತದೆ ಎಂದು ಹೇಳಿದರು.

ADVERTISEMENT

ಕ್ಲೀನಿಂಗ್‌, ಗ್ರೇಡಿಂಗ್‌, ಪ್ಯಾಕಿಂಗ್‌ ಘಟಕದಲ್ಲಿ ಸಣ್ಣದೊಂದು ತಾಂತ್ರಿಕ ಸಮಸ್ಯೆ ಇದ್ದು, ಸರಿಪಡಿಸಿದ ಬಳಿಕ ರೈತರ ಸೇವೆಗೆ ಒದಗಿಸಲಾಗುವುದು.ರೈತರು ನಿರ್ದಿಷ್ಟ ಶುಲ್ಕ(ರಿಯಾಯಿತಿ) ಪಾವತಿಸಿ ಇದರ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಗುಣ ವಿಶ್ಲೇಷಣಾ ಘಟಕ: ಮುಖ್ಯಮಂತ್ರಿಗಳ ₹ 1 ಕೋಟಿ ವಿಶೇಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಗುಣಮಟ್ಟ ವಿಶ್ಲೇಷಣಾ ಘಟಕವು ದವಸ, ಧಾನ್ಯಗಳ ತೇವಾಂಶ ಯಾವ ಪ್ರಮಾಣದಲ್ಲಿದೆ, ಕಲ್ಲು, ಮಣ್ಣು, ಹೊಟ್ಟು ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ತಿಳಿಯಲು ಸಹಾಯವಾಗುತ್ತದೆ.

ಉದಾಹರಣೆಗೆ ಮೆಣಸಿನ ಕಾಯಿಯ ಬಣ್ಣ, ಖಾರದ ಪ್ರಮಾಣ ಎಷ್ಟಿದೆ ಎಂಬುದನ್ನು ಸುಲಭವಾಗಿ ತಿಳಿಯಲು ಸಹಾಯವಾಗುತ್ತದೆ ಎಂದು ಗಜೇಂದ್ರ ತಿಳಿಸಿದರು.ಗುಣಮಟ್ಟ ವಿಶ್ಲೇಷಣಾ ಘಟಕವು ರೈತರ ಬಳಕೆಗೆ ಸಂಪೂರ್ಣ ಉಚಿತವಾಗಿದೆ. ಶೀಘ್ರದಲ್ಲೇ ಈ ಎರಡೂ ಘಟಕಗಳನ್ನು ಲೋಕಾರ್ಪಣೆ ಮಾಡಲಾಗುವುದು ಹಾಗೂ ಈ ಘಟಕಗಳನ್ನು ನಿರ್ವಹಿಸಲು ಎಪಿಎಂಸಿಯಲ್ಲಿ ತಜ್ಞ ಸಿಬ್ಬಂದಿ ಕೊರತೆ ಇರುವುದರಿಂದ ಟೆಂಡರ್‌ ಕರೆದು, ಖಾಸಗಿಯವರಿಗೆ ನೀಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.