ADVERTISEMENT

ವಂಚನೆ ಪ್ರಕರಣ: ನಾಲ್ವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 6:07 IST
Last Updated 17 ಏಪ್ರಿಲ್ 2017, 6:07 IST

ಹುಬ್ಬಳ್ಳಿ: ಹೆಚ್ಚಿನ ದರದ ಬಡ್ಡಿ ನೀಡುವುದಾಗಿ ಆಮಿಷ ಒಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ ಆರೋಪದ ಮೇರೆಗೆ ನಾಲ್ವರನ್ನು ಕಲಘಟಗಿ ಠಾಣೆ ಪೊಲೀಸರು ಭಾನುವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ಹಣ ವಂಚಿಸಿದ ಆರೋಪ ಎದುರಿಸುತ್ತಿರುವ ಹರ್ಷ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಮಾಲೀಕರಾದ ಹರ್ಷ ಖಾಸನೀಸ ಅಲಿಯಾಸ್‌ ಸತ್ಯಬೋಧ, ಸಂಜೀವ ಖಾಸನೀಸ ಮತ್ತು  ಶ್ರೀಕಾಂತ ಖಾಸನೀಸ ಅವರೊಂದಿಗೆ ಕೆಲಸ ಮಾಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಸಹೋದರರು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.ಜಿಲ್ಲಾ ಎಸ್ಪಿ ಧರ್ಮೇಂದ್ರಕುಮಾರ ಮೀನಾ ಪಟ್ಟಣಕ್ಕೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದರು.ಅಲ್ಲದೆ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಅವರನ್ನು ಭೇಟಿಯಾಗಿ ಚರ್ಚಿಸಿದರು.

34 ಮಂದಿ ದೂರು: ‘ಬಡ್ಡಿ ಆಸೆಗಾಗಿ ಹರ್ಷ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಗೆ ಹಣ ಹೂಡಿಕೆ ಮಾಡಿದ್ದ 34 ಮಂದಿ ಇಲ್ಲಿವರೆಗೆ ದೂರು ನೀಡಿದ್ದಾರೆ. ಇವರು ₹ 1.26 ಕೋಟಿ ಹಣ ತೊಡಗಿಸಿರುವ ಬಗ್ಗೆ ಮಾಹಿತಿ ಇದೆ. ನೂರಾರು ಸಂಖ್ಯೆಯಲ್ಲಿ ಜನರು ಠಾಣೆಗೆ ಬಂದು ಹೋಗುತ್ತಿದ್ದಾರೆ. ಆದರೆ, ಬಹುತೇಕ ಮಂದಿ ದೂರು ನೀಡಲು ಮುಂದಾಗುತ್ತಿಲ್ಲ. ಏಜೆಂಟರ ಮೂಲಕ ಹಣ ತೊಡಗಿಸಿದವರು ದೂರಿಗೆ ಸಾಕ್ಷಿ ಹಾಕಿದ್ದಾರೆ’ ಎಂದು ಧರ್ಮೇಂದ್ರಕುಮಾರ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.‘ಆರೋಪಿಗಳಾದ ಮೂವರು ಸಹೋದರರು ಎಲ್ಲಿ ಇದ್ದಾರೆ ಎಂಬುದು ಇದುವರೆಗೆ ಗೊತ್ತಾಗಿಲ್ಲ. ಆದರೆ, ವಿದೇಶಕ್ಕೆ ಹೋಗದಂತೆ ತಡೆಯಲು ಎಚ್ಚರ ವಹಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ದಂಡ ವಸೂಲಿ:   ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ವಾಹನ ಸವಾರರ ವಿರುದ್ಧ ಸಂಚಾರ ಪೊಲೀಸರು ಶನಿವಾರ 884 ಕೇಸುಗಳನ್ನು ದಾಖಲಿಸಿ ಒಟ್ಟು ₹96,800 ದಂಡ ವಸೂಲಿ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.