ADVERTISEMENT

ವಾಹನಗಳ ಹೆಚ್ಚಳ; ವಿಷವಾದ ಗಾಳಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 9:17 IST
Last Updated 2 ಡಿಸೆಂಬರ್ 2017, 9:17 IST

ಧಾರವಾಡ: ‘ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಸೇವಿಸುವ ಗಾಳಿಯೂ ವಿಷಕಾರಿಯಾಗುತ್ತಿದೆ. ಇಂದಿನ ಹಾಗೂ ಮುಂದಿನ ಪೀಳಿಗೆಯ ಆರೋಗ್ಯವನ್ನು ಗಮದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಜೋಡಿಸಬೇಕು’ ಎಂದು ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಬಿ.ಪಿ. ಉಮಾಶಂಕರ್ ಹೇಳಿದರು.

ಸಾರಿಗೆ ಇಲಾಖೆ, ಉಪ ಸಾರಿಗೆ ಆಯುಕ್ತರ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಾಹನ ಹೊರಸೂಸುವ ಇಂಗಾಲ ಡಯಾಕ್ಸೈಡ್‌ ಪ್ರಮಾಣ ಕಡಿಮೆ ಮಾಡಬೇಕು. ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಮೂಲಕ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಬೇಕು. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಮುಂದಿನ ಪೀಳಿಗೆಗೆ ಸುಂದರ ಹಾಗೂ ಸಮೃದ್ಧ ಪ್ರಕೃತಿಯನ್ನು ಉಡುಗೊರೆಯಾಗಿ ನೀಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸುಸ್ಥಿತಿಯ ವಾಹನಗಳನ್ನು ಬಳಸುವ ಅಗತ್ಯವಿದೆ’ ಎಂದರು.

ADVERTISEMENT

‘ವಾಹನಗಳು ಹೊರಸೂಸುವ ವಿಷಕಾರಕ ಅನಿಲಗಳಿಂದ ಕಣ್ಣು ಮಂಜಾಗುವಿಕೆ, ಮೆದುಳಿನ ಕಾರ್ಯದಲ್ಲಿ ಕುಂಠಿತ, ಗರ್ಭಿಣಿಯರಿಗೆ ಗರ್ಭಪಾತ ಸಾಧ್ಯತೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ದುರ್ಬಲತೆ, ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್, ಯಕೃತ್‌, ಮೂತ್ರಕೋಶ, ಕರುಳಿಗೆ ಘಾಸಿ ಹಾಗೂ ಸಂತಾನೋತ್ಪತ್ತಿ ಕುಂಠಿತವಾಗುವ ಎಲ್ಲ ಲಕ್ಷಣಗಳಿರುತ್ತವೆ. ಹೀಗಾಗಿ ಪ್ರತಿಯೊಬ್ಬರೂ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಹೆಚ್ಚಿನ ಆಧ್ಯತೆ ನೀಡಬೇಕು’ ಎಂದರು.

‘ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸರ್ಕಾರ ಅಥವಾ ಸಾರಿಗೆ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಈ ಕುರಿತು ಸಾರ್ವಜನಿಕರು ಹೆಚ್ಚು ತಿಳಿದುಕೊಳ್ಳುವಂಥ ಮನಸ್ಥಿತಿ ಬೆಳಸಿಕೊಳ್ಳಬೇಕಿದೆ. ಅಂದಾಗ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಉತ್ತರ ವಲಯದ ಹೆಚ್ಚುವರಿ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಮಾತನಾಡಿ, ‘ವಾಯು ಮಾಲಿನ್ಯ ನಿಯಂತ್ರಣದಲ್ಲಿ ಸಾರ್ವಜನಿಕರ ಪಾಲುದಾರಿಕೆ ಅಗತ್ಯ. ಪ್ರತಿ ವಾಹನವನ್ನೂ 6 ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ವಾಯುಮಾಲಿನ್ಯ ತಪಾಸಣೆಗೆ ಒಳಪಡಿಸಬೇಕು. ಇದರಿಂದ ವಾಹನ ಹೊರಸೂಸುವ ಹೊಗೆಯ ಪ್ರಮಾಣವನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ದುರಸ್ತಿ ಮಾಡಿಸಬಹುದಾಗಿದೆ’ ಎಂದರು.

‘ಪರಿಸರ ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ವಾಹನಗಳಿಂದ ಹೊರಸೂಸುವ ಹೊಗೆ ನಿಯಂತ್ರಿಸಲು ಬಿಎಸ್‌4 ವಾಹನಗಳನ್ನು ಬಳಸುವಂತೆ ಸೂಚಿಸಿದೆ. ಈ ವಾಹನಗಳು ಕಡಿಮೆ ಹೊಗೆ ಹೊರಸೂಸುತ್ತವೆ ಹಾಗೂ ಪರಿಸರ ರಕ್ಷಣೆಗೆ ಪೂರಕವಾಗಿವೆ. ಹೀಗಾಗಿ ಪ್ರತಿಯೊಬ್ಬರೂ ಬಿಎಸ್‌4 ವಾಹನಗಳನ್ನು ಬಳಸುವುದು ಉತ್ತಮ’ ಎಂದರು.

ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಅಂಗವಾಗಿ ಸಾರಿಗೆ ಕಚೇರಿಯಿಂದ ಧಾರವಾಡದ ಆಯ್ದ ಶಾಲಾ ಕಾಲೇಜುಗಳಲ್ಲಿ ನಡೆಸಲಾದ ಚಿತ್ರಕಲೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಅಧೀಕ್ಷಕರಾದ ಬಿ.ಎಸ್. ಪಾಟೀಲ, ಎಸ್.ಎಲ್. ರೇಣುಕಾ, ಲಕ್ಷ್ಮಿ ಬೂದಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.