ADVERTISEMENT

ವಿದೇಶಿ ತಂತ್ರಜ್ಞಾನ ಹೊಗಳುವ ವಿಜ್ಞಾನಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 8:42 IST
Last Updated 24 ಸೆಪ್ಟೆಂಬರ್ 2017, 8:42 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜನೆಗೊಂಡಿರುವ ಕೃಷಿ ಮೇಳದಲ್ಲಿ ನೀರು ಕುರಿತ ಚರ್ಚೆಯಲ್ಲಿ ಮಲ್ಲಣ್ಣ ನಾಗರಾಳ ಹಾಗೂ ವಿ.ಐ.ಬೆಣಗಿ ಸಮಾಲೋಚನೆ ನಡೆಸಿದರು. ನಮಿತಾ, ಶಿವಾನಂದ ಕಳವೆ, ಡಾ. ಪ್ರಕಾಶ ಭಟ್‌ ಇದ್ದಾರೆ
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜನೆಗೊಂಡಿರುವ ಕೃಷಿ ಮೇಳದಲ್ಲಿ ನೀರು ಕುರಿತ ಚರ್ಚೆಯಲ್ಲಿ ಮಲ್ಲಣ್ಣ ನಾಗರಾಳ ಹಾಗೂ ವಿ.ಐ.ಬೆಣಗಿ ಸಮಾಲೋಚನೆ ನಡೆಸಿದರು. ನಮಿತಾ, ಶಿವಾನಂದ ಕಳವೆ, ಡಾ. ಪ್ರಕಾಶ ಭಟ್‌ ಇದ್ದಾರೆ   

ಧಾರವಾಡ: ‘ಇಸ್ರೇಲ್‌ ಮಾದರಿ ಸೇರಿದಂತೆ ವಿದೇಶಿ ಮಾದರಿಗಳನ್ನು ಹೊಗಳುವ ಮೊದಲು ನಮ್ಮ ಅಕ್ಕಪಕ್ಕ ಇರುವ ರೈತರು ಬರದಲ್ಲೂ ಸಾಧನೆ ಮಾಡಿರುವುದನ್ನು ಗುರುತಿಸುವಂತಾಗಬೇಕು. ಈ ವಿಷಯ ಕುರಿತಂತೆ ವಿಜ್ಞಾನಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಜಲತಜ್ಞ ಶಿವಾನಂದ ಕಳವೆ ಹೇಳಿದರು.

ಕೃಷಿ ಮೇಳದಲ್ಲಿ ಶನಿವಾರ ಆಯೋಜಿಸಿದ್ದ ‘ಕೃಷಿಯಲ್ಲಿ ನೀರಿನ ಸದ್ಬಳಕೆ’ ಕುರಿತು ಅವರು ಮಾತನಾಡಿದರು.

‘ಹಿಂಗಾರಿ ಹಾಗೂ ಮುಂಗಾರಿ ಎಂದು ಮಳೆಯನ್ನೇ ವಿಂಗಡಿಸಿ ಕೃಷಿ ಮಾಡಿದ ನಮಗೆ ಇಂದು ಅಕಾಲಿಕ ಮಳೆಯಲ್ಲೇ ಕೃಷಿ ಮಾಡಬೇಕಾದ ಸ್ಥಿತಿ ಬಂದೊದಗಿದೆ. ಇಂಥ ಸಂದರ್ಭದಲ್ಲೂ ಲಾಭದಾಯಕ ಕೃಷಿಯನ್ನು ಮಾಡಿದವರು ನಮ್ಮೊಂದಿಗೆ ಇದ್ದಾರೆ. ಅಂಥವರನ್ನು ಗುರುತಿಸಬೇಕು. ಈ ನೆಲದ ಗುಣಧರ್ಮಕ್ಕೆ ಅನುಗುಣವಾಗಿ ಅವರು ಕೈಗೊಂಡ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ’ ಎಂದರು.

ADVERTISEMENT

‘ಕಳೆದ ನಾಲ್ಕು ವರ್ಷಗಳಿಂದ ಕಾಲುದಾರಿಯಲ್ಲಿ ಸಾಗಿ ನೀರಿನ ಮಹತ್ವ ತಿಳಿಸುವ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿದೆ. ಇದು ಜಲಕ್ಷಮಾದ ತೀವ್ರತೆ. ಇಂದಿನ ಕೃಷಿಕರು ಓದಿದ್ದರೂ ಜಗತ್ತಿನ ಸುದ್ದಿಗಳನ್ನು ತಿಳಿಯುವ ಭರದಲ್ಲಿ ನೆಲದ ಸಂಗತಿಯನ್ನು ಮರೆತಿರುವುದು ಬೇಸರದ ಸಂಗತಿ’ ಎಂದರು.

‘ಯಾವುದೇ ಸರ್ಕಾರದ ನೆರವಿಲ್ಲದೆ ಈ ನಾಡಿನಲ್ಲಿ 35 ಸಾವಿರ ಕೆರೆಯನ್ನು ಜನರೇ ನಿರ್ಮಿಸಿದ್ದಾರೆ. ಒಂದು ಕ್ಷಣ ಸರ್ಕಾರವನ್ನು ಮರೆಯೋಣ. ನಮ್ಮ ಊರಿನ ಮಳೆ, ನೀರು, ಮರ ಕುರಿತು ಮೊದಲು ಜ್ಞಾನ ಸಂಪಾದಿಸಬೇಕು. ಬೆಲೆ ವೈವಿಧ್ಯತೆಗೆ ಹೆಚ್ಚಿನ ಗಮನ ನೀಡಬೇಕು. ಹೊಲದಲ್ಲಿ ಕನಿಷ್ಠ ಒಂದಷ್ಟು ಸಸಿಗಳನ್ನು ನೆಡಲೇಬೇಕು ಎಂದು ಸಂಕಲ್ಪ ಮಾಡಿದಾಗ ಮಾತ್ರ ಉತ್ತಮ ಮಳೆ ನಿರೀಕ್ಷಿಸಲು ಸಾಧ್ಯ’ ಎಂದು ಶಿವಾನಂದ ಕಳವೆ ಹೇಳಿದರು.

ಡಾ. ಅರವಿಂದ ಗಲಗಲಿ ಮಾತನಾಡಿ, ‘ಜೀವ ಉಗಮಕ್ಕೆ ಕಾರಣವಾಗಿರುವ ನೀರು, ಜೀವ ವಿನಾಶಕ್ಕೂ ಕಾರಣವಾಗಬಹುದಾದ ಅಪಾಯದ ಸ್ಥಿತಿಗೆ ನಾವು ತಲುಪಿದ್ದೇವೆ. 50 ವರ್ಷದ ಹಿಂದೆ ಪ್ರತಿ ವರ್ಷ 15 ಸಾವಿರ ಕ್ಯುಬಿಕ್‌ ಸೆ.ಮೀ ಮಳೆಯಾಗುತ್ತಿತ್ತು. ಆದರೆ, ಇಂದು ಅದು 1650 ಸಿಎಂಗೆ ಇಳಿದಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ 2030ರ ಹೊತ್ತಿಗೆ ಶೇ 50ರಷ್ಟು ಕೊರತೆ ಹೆಚ್ಚಾಗಬಹುದು ಎಂದು ಅಂದಾಜು ಮಾಡಿದ್ದಾರೆ’ ಎಂದರು.

‘ಹಾಯಿ ನೀರು ಮೂಲಕ ಕಬ್ಬು ಬೆಳೆಯಲು 258 ಟಿಎಂಸಿ ನೀರು ಪೋಲಾಗುತ್ತಿದೆ. ಆದರೆ, ಹನಿ ನೀರಾವರಿ ಮೂಲಕ ಆಲಮಟ್ಟಿ ಆಣೆಕಟ್ಟೆಯಲ್ಲಿ ನಿಲ್ಲುವಷ್ಟು ನೀರನ್ನು ಉಳಿತಾಯ ಮಾಡಬಹುದು ಎಂದು ಅಂದಾಜು ಮಾಡಲಾಗಿದೆ. ಇದಕ್ಕಾಗಿ ರೈತ, ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಜತೆ ತ್ರಿವಳಿ ಒಪ್ಪಂದ ಮಾಡುವ ಉದ್ದೇಶವಿದೆ. ಇದರಿಂದ ನಾಲ್ಕು ಪಟ್ಟು ನೀರು ಉಳಿತಾಯವಾಗಲಿದೆ’ ಎಂದು ಹೇಳಿದರು.

ಮಲ್ಲಣ್ಣ ನಾಗರಾಳ ಅವರು ಮಳೆ ನಕ್ಷತ್ರಗಳ ವಿವರಗಳನ್ನು ನೀಡಿ, ನೀರು ಹಿಡಿದಿಡುವ ಕುರಿತು ಮಾಹಿತಿ ನೀಡಿದರು. ಜತೆಗೆ ನೀರು ಮಿತವಾಗಿ ಬಳಸಿ ಕೃಷಿ ಮಾಡುವ ಪದ್ಧತಿಯನ್ನು ವಿವರಿಸಿದರು.

ಡಾ. ಪ್ರಕಾಶ ಭಟ್‌, ನಮಿತಾ, ಡಾ. ರಾಜೇಂದ್ರ ಪೊದ್ದಾರ್‌ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.