ADVERTISEMENT

ವಿದ್ಯಾವರ್ಧಕ ಸಂಘಕ್ಕೆ ಐದು ಎಕರೆ ಜಮೀನು

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:32 IST
Last Updated 21 ಜುಲೈ 2017, 6:32 IST

ಧಾರವಾಡ: ‘ಕನ್ನಡದ ನಾಡು, ನುಡಿ, ಭಾಷೆ ಹಾಗೂ ಜಲಕ್ಕಾಗಿ ಹೋರಾಡುವ ಯಾವುದೇ ಕನ್ನಡ ಸಂಸ್ಥೆಗಳಿಗೆ ಸಹಕಾರ ನೀಡಲು ಸರ್ಕಾರ ಸದಾ ಸಿದ್ಧ. ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಅಗತ್ಯವಿರುವ ಐದು ಎಕರೆ ಜಮೀನನ್ನು ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಸಂಘಕ್ಕೆ ಅನುದಾನ ನೀಡುವ ಸಂಬಂಧ  ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ 128ನೇ ಸಂಸ್ಥಾಪನಾ ದಿನಾಚರಣೆ, ಸಂಘದ ನವೀಕೃತ ಪಾರಂಪರಿಕ ಕಟ್ಟಡ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದರು. ‘ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್‌ ಅಂತವರು ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಬೀಜ ಇಲ್ಲಿ ಬಿತ್ತಿರುವುದ­ರಿಂದಲೇ ಈ ನೆಲದಲ್ಲಿ ಕೋಮುವಾದಿ­ಗಳು ಸಮಾಜಕ್ಕೆ ಬೆಂಕಿ ಇಡುವ ಕೆಲಸ ಮಾಡಿದರೂ ಅದು ಸಾಧ್ಯವಾಗು­ವುದಿಲ್ಲ’ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಾಟೀಲ ಪುಟ್ಟಪ್ಪ, ‘ಶಿವಾಜಿಯನ್ನು ಸೋಲಿಸಿದ ಬೆಳವಡಿ ಮಲ್ಲಮ್ಮ ಅವರ ಹೆಸರಿನಲ್ಲಿ ಸ್ಮಾರಕ ಆಗಬೇಕು. ಹಾಗೆಯೇ ಗಾಂಧಿ ಭವನ ಕಟ್ಟಲು ಸಂಘಕ್ಕೆ ಅವಕಾಶ ನೀಡಿದರೆ, ಸಂಘದಂತೆಯೇ ಅದನ್ನೂ ಬೆಳೆಸಲಾಗು­ವುದು’ ಎಂದು ಭರವಸೆ ನೀಡಿದರು.

ADVERTISEMENT

ವಿಜಯಪುರದ ಜ್ಞಾನ ಯೋಗಾ­ಶ್ರಮದ ಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.  ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹಾಗೂ ಮನಗುಂಡಿಯ ಬಸವಾನಂದ ಸ್ವಾಮೀಜಿ, ಸಚಿವ ವಿನಯ ಕುಲಕರ್ಣಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಎನ್‌.ಎಚ್‌.ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಬಿ.ಆರ್‌.ಯಾವಗಲ್‌, ಅರವಿಂದ ಬೆಲ್ಲದ, ಡಾ. ವುಡೇ ಪಿ. ಕೃಷ್ಣ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಡಾ. ಪಾಟೀಲ ಪುಟ್ಟಪ್ಪ ಅವರ ಕಂಚಿನ ಪ್ರತಿಮೆಯನ್ನು ಸಿದ್ದರಾಮಯ್ಯ ಅನಾವರಣ­ಗೊಳಿಸಿದರು. ನವೀಕೃತ ಪಾರಂಪರಿಕ ಕಟ್ಟಡ ಉದ್ಘಾಟಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಜತೆಗೆ ಕಟ್ಟಡದಲ್ಲಿ ಓಡಾಡಿ ಕಾಮಗಾರಿ ವೀಕ್ಷಿಸಿದರು.

ಆರೋಗ್ಯವಾಗಿ ಬಾಳಿ: ‘ಪುಟ್ಟಪ್ಪ ಅವರಿಗೆ 98 ವರ್ಷಗಳು ಎಂದು ತಿಳಿದು ನೂರಿಪ್ಪತ್ತು ವರ್ಷ ಬಾಳಿ ಬದುಕಿ ಎಂದೆ. ಅವರು ‘ಏಕೆ ಅನುಮಾನವೇ?’ ಎಂದು ಕೇಳಿದರು. ಖಂಡಿತವಾಗಿಯೂ ಇಲ್ಲ. ನೂರಿಪ್ಪತ್ತೇ ಏಕೆ. ಇನ್ನೂ ಹೆಚ್ಚು ವರ್ಷ ಬದುಕಿ ಬಾಳಿ. ಆದರೆ, ಬದುಕಿರುವಷ್ಟು ವರ್ಷ ಆರೋಗ್ಯವಾಗಿ ಬಾಳಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರತ್ನಕ್ಕೆ ಚಪ್ಪಾಳೆ ಒತ್ತಾಯ: ಪಾಟೀಲ ಪುಟ್ಟಪ್ಪ ಅವರ ಕನ್ನಡ ಸೇವೆಯನ್ನು ಪರಿಗಣಿಸಿ ಅವರಿಗೆ ‘ಕರ್ನಾಟಕ ರತ್ನ’ ನೀಡಬೇಕು ಎಂದು ಬುಧವಾರ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಮುಖ್ಯಮಂತ್ರಿ ಎದುರು ಪ್ರಸ್ತಾಪಿಸಿದ ಸಭಿಕರು, ಚಪ್ಪಾಳೆಯ ಮೂಲಕ ವಿನೂತನವಾಗಿ ಒತ್ತಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.