ADVERTISEMENT

ಸಂಚಾರಕ್ಕೆ ಸವಾಲೆಸೆಯುವ ಸಾಯಿನಗರ, ಉಣಕಲ್‌ ರಸ್ತೆಗಳು

ಮಾರುದ್ದಕ್ಕೆ ಒಂದರಂತೆ ಎದುರಾಗುವ ಗುಂಡಿಗಳು, ಬಿದ್ದು ಎದ್ದವರು ಅದೆಷ್ಟೊ..!

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 10:01 IST
Last Updated 20 ಜುಲೈ 2017, 10:01 IST
ಕೆಸರಿನ ರಾಡಿಯಾಗಿರುವ ಶ್ರೀನಗರ ಕ್ರಾಸ್ ಸಮೀಪದ ರಸ(ಎಡ ಚಿತ್ರ), ಗುಂಡಿಬಿದ್ದಿರುವ ಉಣಕಲ್ ಕ್ರಾಸ್‌ ರಸ್ತೆ
ಕೆಸರಿನ ರಾಡಿಯಾಗಿರುವ ಶ್ರೀನಗರ ಕ್ರಾಸ್ ಸಮೀಪದ ರಸ(ಎಡ ಚಿತ್ರ), ಗುಂಡಿಬಿದ್ದಿರುವ ಉಣಕಲ್ ಕ್ರಾಸ್‌ ರಸ್ತೆ   

ಹುಬ್ಬಳ್ಳಿ: ಧಾರವಾಡ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಉಣಕಲ್ ಮತ್ತು ಸಾಯಿನಗರದ ರಸ್ತೆಗಳು ಸೇರಿದಂತೆ, ಒಳಭಾಗದ ಬಹುತೇಕ ರಸ್ತೆಗಳು ಮಳೆಗೆ ಬಾಯ್ತೆರೆದುಕೊಂಡಿವೆ. ಉಣಕಲ್ ಕ್ರಾಸ್ ಮತ್ತು ಶ್ರೀನಗರ ಕ್ರಾಸ್‌ ಮಾರ್ಗದಲ್ಲಿ ಸಾಗಿದರೆ ಗುಂಡಿಬಿದ್ದ ರಸ್ತೆಗಳು ಕಣ್ಣಿಗೆ ರಾಚುತ್ತವೆ.

ಬಿಆರ್‌ಟಿಎಸ್‌ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಕೆಲ ರಸ್ತೆಗಳು ಗುಂಡಿಬಿದ್ದಿವೆ.

ಒಳಭಾಗದ ರಸ್ತೆಗಳಾದರೂ ಸುಧಾರಿಸಿವೆಯೇ ಎಂದು ನೋಡಿದರೆ, ಖಂಡಿತ ನಿರಾಶೆಯಾಗುತ್ತದೆ. ಮೇಲಿನ ಎರಡೂ ಪ್ರದೇಶಗಳ ರಸ್ತೆಗಳು ಹಾಳಾಗಿವೆ ಎಂದು ಅಲ್ಲಿನ ನಿವಾಸಿಗಳು ದೂರುತ್ತಾರೆ.

ADVERTISEMENT

ಉಣಕಲ್ ಕೆರೆಯ ಆಸುಪಾಸಿನ ಪ್ರದೇಶಗಳ ರಸ್ತೆಗಳು ಮೇಲ್ನೋಟಕ್ಕೆ ಪರವಾಗಿಲ್ಲ ಎನಿಸಿದರೂ, ಮುಂದೆ ಸಾಗಿದ ಹಾಗೆ ಹಲವು ಗುಂಡಿಗಳು ಕಾಣ ಸಿಗುತ್ತವೆ.

‘ಮಳೆಗಾಲ ಆರಂಭಕ್ಕೂ ಮುಂಚೆಯೇ ಗುಂಡಿಗಳನ್ನು ಮುಚ್ಚುವ ಕೆಲಸ ಆಗಬೇಕಿತ್ತು. ಆದರೆ, ಪಾಲಿಕೆಯವರು ಮಳೆಗಾಲ ಶುರುವಾಗಿ ತಿಂಗಳು ಕಳೆದರೂ ಗುಂಡಿಬಿದ್ದ ರಸ್ತೆಗಳತ್ತ ಗಮನ ಹರಿಸಿಲ್ಲ. ಬೇಸಿಗೆಯಲ್ಲಾದರೆ ಗುಂಡಿಗಳು ಇರುವುದು ಕಾಣಿಸುತ್ತದೆ.

ಆಗ ಗುಂಡಿಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡಬಹುದು. ಆದರೆ, ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಲ್ಲುವುದರಿಂದ ಗುಂಡಿಗಳು ಕಣ್ಣಿಗೆ ಗೋಚರಿಸುವುದಿಲ್ಲ. ಆಗ ಅನಾಹುತ ಕಟ್ಟಿಟ್ಟ ಬುತ್ತಿ’ ಎಂದು ಉಣಕಲ್‌ ಬಳಿ ಕಿರಾಣಿ ಅಂಗಡಿ ಇಟ್ಟುಕೊಂಡಿರುವ ಮಹದೇವಪ್ಪ ಪೂಜಾರ ಹೇಳುತ್ತಾರೆ.

ಸಾಯಿನಗರದ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ಬಿದ್ದಿರುವ ಗುಂಡಿಗಳು ಬಲಿಗೆ ಕಾದು ಕುಳಿತಿವೆ. ಸಿದ್ದಪ್ಪಾಜಿ ಗುಡಿಯ ಅಕ್ಕ–ಪಕ್ಕದ ಭಾಗದ ಓಣಿಗಳಲ್ಲಿನಲ್ಲಿ ರಸ್ತೆಯಲ್ಲಿನ ಡಾಂಬರ್‌ ಕಿತ್ತು ಹೋಗಿದ್ದು, ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ.

‘ಉಣಕಲ್ ಕ್ರಾಸ್‌ನಿಂದ ಆರಂಭವಾಗುವ ಸಾಯಿನಗರ ರಸ್ತೆಯಲ್ಲಿ ಗುಂಡಿಗಳಷ್ಟೇ ರಸ್ತೆಯ ಉಬ್ಬುಗಳೂ ಇವೆ. ಸುರಿಯುವ ಮಳೆಯಿಂದಾಗಿ ವಾಹನಗಳ ಸಂಚಾರ ದುಸ್ತರವಾಗಿದೆ. ಓಣಿಯ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುಬ ಗೋಜಿಗೆ ಹೋಗಿಲ್ಲ. ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನ ಹರಿಸಬೇಕು’ ಎಂದು ಸಾಯಿನಗರ ಮುಖ್ಯರಸ್ತೆಯಲ್ಲಿ ವಾಸವಾಗಿರುವ ವೀರೇಶ್  ಒತ್ತಾಯಿಸುತ್ತಾರೆ.

‘ಹೆಂಗಸರು  ಮತ್ತು ಮಕ್ಕಳನ್ನು ಬೈಕ್‌ ಮತ್ತು ಸ್ಕೂಟರ್‌ಗಳಲ್ಲಿ ಕೂರಿಸಿಕೊಂಡು ಈ ರಸ್ತೆಯಲ್ಲಿ ಓಡಾಡುವುದು ಸವಾಲಾಗಿದೆ. ಗುಂಡಿ ಯಾವುದು, ರಸ್ತೆ ಯಾವುದು ಎಂದು ಸರಿಯಾಗಿ ಗೊತ್ತಾಗುವುದೇ ಇಲ್ಲ. ಅಪ್ಪಿ–ತಪ್ಪಿ ಬೈಕ್ ಗುಂಡಿಗಿಳಿದರೆ ಬೀಳುವುದು ಖಚಿತ.’ ಎಂದು ಅವರ ಮಾತಿಗೆ ದನಿಗೂಡಿಸುತ್ತಾರೆ ರಾಕೇಶ್.

**

ಗುಂಡಿಬಿದ್ದ ರಸ್ತೆಗಳು ಮಳೆಗಾಲದಲ್ಲಿ ಸಂಚಾರಕ್ಕೆ ಎಷ್ಟು ಅಪಾಯಕಾರಿ ಎಂಬುದು ಇಲ್ಲಿ ಓಡಾಡುವವರಿಗೆ ಗೊತ್ತು.  ಪಾಲಿಕೆಯ ವರು ತಕ್ಷಣ ದುರಸ್ತಿ ಮಾಡಬೇಕು.
ಪ್ರಭು
ಉಣಕಲ್

**

ಸಾಯಿನಗರ ಮುಖ್ಯರಸ್ತೆಯ ವಿಸ್ತರಣೆ ನಡೆಯಲಿರುವುದ ರಿಂದ, ಅಲ್ಲಿ ರಸ್ತೆ ದುರಸ್ತಿ ಕೆಲಸ ಸಾಧ್ಯ ವಾಗುತ್ತಿಲ್ಲ. ಉಳಿದ ರಸ್ತೆಗಳಲ್ಲಿ ಬಿದ್ದಿ ರುವ ಗುಂಡಿಗಳನ್ನುಮುಚ್ಚಲಾಗುವುದು.

ಅಶ್ವಿನಿ ಮಜ್ಜಗಿ
ಸದಸ್ಯೆ, ವಾರ್ಡ್ ನಂ.27

**

ರಸ್ತೆಯಲ್ಲಿ ಈಗಾಗಲೇ ಮುಚ್ಚಿದ್ದ ಗುಂಡಿಗಳು ಮತ್ತೆ ತೆರೆದುಕೊಂಡಿವೆ. ಮತ್ತೆ ಅವುಗಳನ್ನು ಮುಚ್ಚುವ ಕೆಲಸವನ್ನು ಮೂರ್ನಾಲ್ಕು ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.

ಉಮೇಶಗೌಡ ಕೌಜಗೇರಿ
ಸದಸ್ಯ, ವಾರ್ಡ್ ನಂ.23

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.