ADVERTISEMENT

ಸಂಚಿತ ವೇತನಕ್ಕೆ ‘ರಕ್ತ ಪತ್ರ’

ಸಚಿವರಿಗೆ ಪತ್ರ ಬರೆದ ಕ.ವಿ.ವಿ ಸಫಾಯಿ ಕರ್ಮಚಾರಿಗಳು

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:19 IST
Last Updated 5 ಜನವರಿ 2017, 10:19 IST

ಧಾರವಾಡ:  ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಸಫಾಯಿ ಕರ್ಮಚಾರಿಗಳು ಸಂಚಿತ ವೇತನಕ್ಕೆ ಆಗ್ರಹಿಸಿ ಬುಧವಾರ ರಕ್ತದಲ್ಲಿ ಪತ್ರ ಬರೆಯುವ ಚಳವಳಿ ನಡೆಸಿದರು. ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಸದಸ್ಯರು, ಇಲ್ಲಿಯ ಕ.ವಿ.ವಿ ಮುಖ್ಯ ಆಡಳಿತ ಕಚೇರಿ ಎದುರು ಧರಣಿ ನಡೆಸಿದರು.

ರಕ್ತದಲ್ಲಿ ಪತ್ರ ಬರೆದು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರಿಗೆ ರವಾನೆ ಮಾಡಿದರು. ‘ಕ.ವಿ.ವಿ ಈಗಾಗಲೇ ವಿವಿಧ ಜನಾಂಗದ 30ಕ್ಕೂ ಅಧಿಕ ಜನರಿಗೆ ಸಂಚಿತ ವೇತನ ನೀಡುತ್ತಿದೆ. ಆದರೆ, ದಲಿತ ಸಫಾಯಿ ಕರ್ಮಚಾರಿಗಳಿಗೆ ಮಾತ್ರ ಸಂಚಿತ ವೇತನ ನೀಡಲು ನಿರಾಕರಿಸುತ್ತಿದೆ. ಕುಲಪತಿ ಹಾಗೂ ಕುಲಸಚಿವರು ಜಾತಿ ತಾರತಮ್ಯ ಮಾಡುತ್ತಿದ್ದಾರೆ.

ಕಾನೂನು ಬಾಹಿರ ಹಾಗೂ ಕಾರ್ಮಿಕ ವಿರೋಧಿ ಗುತ್ತಿಗೆ ಕರೆಯುವ ಮೂಲಕ ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿರುವ ದಲಿತ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವ ಸಂಚು ರೂಪಿಸಿದ್ದಾರೆ’  ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನಾರಾಯಣ ಅವರು ಧಾರವಾಡದಲ್ಲಿ ಮೂರು ಬಾರಿ ಸಭೆ ನಡೆಸಿ, ಸರ್ಕಾರದ ಆದೇಶದ ಅನುಸಾರ ಸಂಚಿತ ವೇತನ ನೀಡುವಂತೆ ಸೂಚಿಸಿದ್ದಾರೆ. ಆದರೆ, ಕುಲಪತಿ ಮತ್ತು ಕುಲಸಚಿವರು ಈ ಕುರಿತು ಗಮನಹರಿಸುತ್ತಿಲ್ಲ.

ಈವರೆಗೂ ಕಾರ್ಮಿಕರಿಗೆ ಬಾಕಿ ವೇತನ, ಕಾರ್ಮಿಕ ಕಾಯ್ದೆ ಅನುಷ್ಠಾನಗೊಳಿಸಿಲ್ಲ. ಇದೆಲ್ಲದರ ಕುರಿತು ಎಸ್‌ಸಿ, ಎಸ್‌ಟಿ ಆಯೋಗ, ಸಚಿವರು, ಉನ್ನತ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಈಗ ಏಕಾಏಕಿ ವಿಶ್ವವಿದ್ಯಾಲಯ ಹೊಸದಾಗಿ ಟೆಂಡರ್‌ ಕರೆದು ದಲಿತ ಕಾರ್ಮಿಕರು ಹಾಗೂ ಕುಟುಂಬಗಳನ್ನು ಬೀದಿ ಪಾಲು ಮಾಡುವ ಸಂಚು ರೂಪಿಸಿದೆ’ ಎಂದು ದೂರಿದರು.

ಸಂಘದ ಜಿಲ್ಲಾ ಅಧ್ಯಕ್ಷ ವಿಜಯ ಗುಂಟ್ರಾಳ, ಗಂಗಯ್ಯ ಸಾಕೇನವರ, ಸುನಂದಾ ಮಾದರ, ಗಂಗಾಧರ ಪೆರೂರ, ಲಕ್ಷ್ಮಣ ಬಕ್ಕಾಯಿ, ಚಿಂತಮ್ಮ ಮಾದರ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.