ADVERTISEMENT

ಸಂತರ ಶಕ್ತಿ ಮುಂದೆ ಮತ್ತೊಂದು ಶಕ್ತಿ ಇಲ್ಲ

ಮಂಗಲಯಾತ್ರೆಯಲ್ಲಿ ಯತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:10 IST
Last Updated 9 ಜನವರಿ 2017, 9:10 IST
ಹುಬ್ಬಳ್ಳಿ: ‘ಎಲ್ಲ ಸಂತರೂ ಒಂದಾಗಿ ನಿಲ್ಲುವ ಶಕ್ತಿಯ ಮುಂದೆ ದೇಶದ ಯಾವುದೇ ಶಕ್ತಿ ಏನೂ ಮಾಡಲು ಸಾಧ್ಯ­ವಿಲ್ಲ. ಸಂತರು ಸಂಘಟನೆಯಾದರೆ ಯಾವುದೇ ಸರ್ಕಾರ, ಪಕ್ಷ ವಿರೋಧಿ­ಸಲು ಸಾಧ್ಯವಿಲ್ಲ. ಆದ್ದರಿಂದ ನಾವೆಲ್ಲ ಒಂದಾಗಿ ಗೋ ರಕ್ಷಣೆಗೆ ಮುಂದಾಗ­ಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
 
ಇಲ್ಲಿನ ಮೂರುಸಾವಿರ ಮಠದ ಶಾಲಾ ಮೈದಾನದಲ್ಲಿ ಮಂಗಲ­ಗೋಯಾತ್ರೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಯತಿ ಸಮಾವೇಶ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
 
‘ರಾಮಚಂದ್ರಾಪುರ ಮಠ ಆರಂಭಿಸಿರುವ ಮಂಗಲಗೋಯಾತ್ರೆಗೆ ರಾಜ್ಯದಲ್ಲಿರುವ 1000 ಮಠಗಳು ಬೆಂಬಲ ಸೂಚಿಸಿವೆ. ಇದೇ ನಮಗೆ ಶಕ್ತಿಯಾಗಿದೆ. ಈ ಯಾತ್ರೆ ರಾಜ್ಯಾದ್ಯಂತ ಪ್ರಚಂಡ ಯಶಸ್ತು ಕಂಡಿದೆ’ ಎಂದರು.
 
‘ಗೋಹತ್ಯೆ ನಿಷೇಧ ಕಾನೂನು ಬಂದರೆ ಶೇ 50ರಷ್ಟು ಮಾತ್ರ ಗೋಹತ್ಯೆ ನಿಲ್ಲುತ್ತದೆ. ಪೂರ್ಣ ಸಾಧ್ಯವಾಗುವುದಿಲ್ಲ. ಗೋಕೊಬ್ಬು, ಗೋಎಲುಬು ಸೇರಿದಂತೆ ಗೋ ಉತ್ಪನ್ನಗಳನ್ನು ಬಳಸಿ ತಯಾರಿ­ಸುವ ಆಹಾರ ಪದಾರ್ಥಗಳನ್ನು ನಾವು ತ್ಯಜಿಸುವ ಪ್ರತಿಜ್ಞೆ ಕೈಗೊಂಡರೆ ಮಾತ್ರ ಗೋ­ಹತ್ಯೆ ನಿಲ್ಲಲು ಸಾಧ್ಯ’ ಎಂದು ಹೇಳಿದರು.
 
‘ಈ ಮಂಗಲಯಾತ್ರೆಯಲ್ಲಿ ಭಾಗವ­ಹಿ­ಸಿ­ರುವ ಅರ್ಧದಷ್ಟು ಜನ ನಮ್ಮೊಂದಿಗೆ ನಿಂತುಕೊಳ್ಳಿ. ಇದು ಯಾವುದೇ ಸರ್ಕಾರ, ಪಕ್ಷದ ವಿರುದ್ಧ ಅಲ್ಲ. ಗೋರಕ್ಷಣೆಯ ಕಾರ್ಯಕ್ಕಾಗಿ. ಏನೇ ಎದುರಾದರೂ ನಾವು ಮುಂದೆ ಇರುತ್ತೇವೆ. ಪ್ರಾಣ ಕೊಡುವ ಸಂದರ್ಭ ಬಂದರೂ ನಾವು ಕೊಡುತ್ತೇವೆ. ಗೋರಕ್ಷಣೆಗೆ ಎಲ್ಲರೂ ಪ್ರತಿಜ್ಞೆ ಮಾಡೋಣ’ ಎಂದರು.
 
ಮನುಷ್ಯ ಮಾತೆಯ ಹಾಲಿಗೆ ಸಮೀಪವಾದದ್ದು ಗೋವಿನ ಹಾಲು. ಅದಕ್ಕೇ ತಾಯಿಯೂ ಅದನ್ನು ಕುಡಿದ ನಂತರವೇ ಮಗುವಿಗೆ ಹಾಲುಣಿಸುವುದು. ನಂತರ ಗೋವಿನ ಹಾಲೇ ಮಗು ಕುಡಿಯುವುದು. ಆದರೆ, ಎಮ್ಮೆ ಹಾಲು, ಜರ್ಸಿ ಹಾಲು ಕುಡಿಯಬೇಡಿ. ಅದರಲ್ಲಿನ ಅಸಮ­ತೋ­­ಲ­­ನ­­ದಿಂದ ಹಾಲು ವಿಷವಾಗಿದೆ. ಅದರಿಂದ ಸಮಸ್ಯೆಗಳು ಹೆಚ್ಚು. ಇದು ವೈಜ್ಞಾನಿಕವಾಗಿಯೇ ಸಾಬೀತಾಗಿದೆ. ಹೀಗಾಗಿ ಗೋವಿನ ಹಾಲು ಮಾತ್ರ ಬಳಸಿ’ ಎಂದು ಕರೆ ನೀಡಿದರು.
 
‘ಗೋಉತ್ಪನ್ನಗಳನ್ನು ಸೇವನೆ ಮಾಡುವುದರಿಂದ ಆರೋಗ್ಯವೃದ್ಧಿಯ ಜತೆಗೆ ಮಾರಣಾಂತಿಕ ರೋಗಗಳನ್ನೂ ನಿವಾರಿಸಬಹುದು. ಈ ಉತ್ಪನ್ನಗಳ ಬಳಕೆಯಿಂದ ರೈತರಿಗೂ ಹಣ ಸಿಗುತ್ತದೆ. ಗೋರರಕ್ಷಣೆಗೆ ನಾವು ಸರ್ಕಾರದ ಕಡೆ ಮುಖ ಮಾಡಿಲ್ಲ. ನಾಗರಿಕರ ಕಡೆ ಮುಖ ಮಾಡಿದ್ದೇವೆ’ ಎಂದರು.
 
ರುದ್ರಾಕ್ಷಿ ಮಠದ ಬಸವಲಿಂಗಸ್ವಾಮಿ, ಕುಂದಗೋಳ ಹಿರೇಮಠದ ಶತಿಕಂಠೇಶ್ವರ ಸ್ವಾಮೀಜಿ, ನವಲಗುಂದ ನಾಗಲಿಂಗಾಮಠದ ನಾಗಲಿಂಗೇಶ್ವರ ಸ್ವಾಮೀಜಿ ಸಮಾವೇಶದಲ್ಲಿ ಹಾಜರಿದ್ದರು. ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದರು.
 
ಗೋಪಾಲಕೃಷ್ಣ ಹಾಡು ಸ್ಪರ್ಧೆ: ಮಂಗಲ­ಗೋಯಾತ್ರೆ ಅಂಗವಾಗಿ ಆಯೋಜಿಸಲಾಗಿದ್ದ ಗೋಪಾಲಕೃಷ್ಣ ಹಾಡು ಸ್ಪರ್ಧೆಯಲ್ಲಿ ಪ್ರಥಮ ಐದು ಸ್ಥಾನ ಪಡೆದ ಎಂಟು ಮಹಿಳಾ ಸಂಘಟನೆಗಳಿಗೆ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಹುಬ್ಬಳ್ಳಿಯ ಹವ್ಯಕ ಮಹಿಳಾ ಮಂಡಳಿ– ಪ್ರಥಮ,  ತ್ರಿವೇಣಿ ಮಹಿಳಾ ಮಂಡಳಿ– ದ್ವಿತೀಯ, ಬೆಂಗೇರಿಯ ಲಲಿತಾ ಮಹಿಳಾ ಮಂಡಳಿ– ತೃತೀಯ ಪ್ರಶಸ್ತಿ ಬಹುಮಾನ ಪಡೆದವು.
 
ಈ ಸಮಾವೇಶಕ್ಕೂ ಮುನ್ನ, ಮಂಗಲಗೋಯಾತ್ರೆಯನ್ನು ಬೈಕ್‌ ರ್‌್್ಯಾಲಿ ಮೂಲಕ ಕರೆತರಲಾಯಿತು. ಗೋಮಾತೆ ಕುರಿತಾದ ಸಾಂಸ್ಕೃತಿಕ ಕಾರ್ಯಕ್ರಮ­ದಲ್ಲಿ ಗೋವಿನ ಕುರಿತು ಪ್ರದರ್ಶನ ನೀಡಲಾಯಿತು. ಗೋಆರತಿ ನಂತರ ಮಂಗಲ ಶೋಭಾಯಾತ್ರೆ ನಡೆಯಿತು.
 
***
ನಮ್ಮಂತಹ ಸಂತರ ಪವಾಡ ನಂಬಬೇಡಿ. ಆದರೆ, ಗೋ­ಮೂತ್ರ, ಗೋಉತ್ಪನ್ನಗಳ ಮಹತ್ವ ಅರಿತುಕೊಳ್ಳಿ. ಆರೋಗ್ಯಕರ ಜೀವನ ನಿಮ್ಮ ಕೈಯಲ್ಲೇ ಇದೆ 
-ರಾಘವೇಶ್ವರಭಾರತೀ ಸ್ವಾಮೀಜಿ,
ರಾಮಚಂದ್ರಾಪುರ ಮಠ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.