ADVERTISEMENT

ಸಂಸದರ ಕಚೇರಿಗೆ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:32 IST
Last Updated 21 ಜನವರಿ 2017, 5:32 IST

ಹುಬ್ಬಳ್ಳಿ: ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ಗೆ ಈ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂಪಾಯಿ ಮೀಸಲಿಡಬೇಕು ಮತ್ತು ತಮಗೆ ₹ 18 ಸಾವಿರ ಕನಿಷ್ಠ ವೇತನ ನೀಡಬೇಕು ಎಂದು ಒತ್ತಾಯಿಸಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಇಲ್ಲಿನ ಚಿಟಗುಪ್ಪಿ ಆಸ್ಪತ್ರೆ ಬಳಿ ಇರುವ ಸಂಸದ ಪ್ರಹ್ಲಾದ ಜೋಶಿ ಅವರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರಲ್ಲದೇ ಮುತ್ತಿಗೆ ಹಾಕಲು ಯತ್ನಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್‌ನ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ವಿವಿಧ ಅಂಗನವಾಡಿಗಳ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಸುಡು ಬಿಸಿಲಿನಲ್ಲಿಯೂ ಒಂದು ಗಂಟೆಗೂ ಹೆಚ್ಚು ಕಾಲ ಕಚೇರಿಯ ಮುಂಭಾಗದಲ್ಲಿ ಕುಳಿತಿದ್ದರು. ಸಂಸದರು ನಗರದಲ್ಲಿ ಇರಲಿಲ್ಲ. ಹೀಗಾಗಿ, ಅವರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಚನ್ನಬಸವ್ವ ಹೆಬ್ಬಳ್ಳಿ ಮಾತನಾಡಿ, ‘ಕೇಂದ್ರದಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕ್ರಮವಾಗಿ ಮಾಸಿಕ ₹ 3 ಸಾವಿರ ಹಾಗೂ ₹ 1500 ಗೌರವಧನ ದೊರೆಯುತ್ತಿದೆ. ಸತತ ಹೋರಾಟದ ಫಲವಾಗಿ ರಾಜ್ಯ ಸರ್ಕಾರವೂ ಕೇಂದ್ರದಷ್ಟೇ ಗೌರವಧನ ನೀಡುತ್ತಿದೆ. ಆದರೆ, ಪಕ್ಕದ ಗೋವಾದಲ್ಲಿ ₹ 15 ಸಾವಿರ, ಕೇರಳದಲ್ಲಿ ₹ 10 ಸಾವಿರ, ಆಂಧ್ರಪ್ರದೇಶದಲ್ಲಿ ₹ 7100 ಹಾಗೂ ತೆಲಂಗಾಣದಲ್ಲಿ ₹ 7 ಸಾವಿರ ಗೌರವಧನವಿದೆ. ಕರ್ನಾಟಕದಲ್ಲಿ ಮಾತ್ರ ಕೇಂದ್ರ ಹಾಗೂ ರಾಜ್ಯದ ಪಾಲಿನ ನೆರವು ಸೇರಿ ಒಬ್ಬ ಕಾರ್ಯಕರ್ತೆಗೆ ₹ 6 ಸಾವಿರ ಸಿಗುತ್ತಿದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಇಷ್ಟು ಕಡಿಮೆ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರಿ ನೌಕರರಿಗೆ ₹ 18 ಸಾವಿರ ಕನಿಷ್ಠ ವೇತನ ಘೋಷಿಸಿದ್ದಾರೆ. ಅದನ್ನು ನಮಗೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

ಐಸಿಡಿಎಸ್‌ ಯೋಜನೆಯನ್ನು ಅಭಿಯಾನದ ಹೆಸರಿನಲ್ಲಿ ಖಾಸಗೀಕರಣ ಮಾಡಬಾರದೂ ಎಂದು ಒತ್ತಾಯಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ರಜಹಾನ್‌ ಸಮುದ್ರಿ, ಕಾರ್ಯದರ್ಶಿ ಈರಮ್ಮ ತುರಕಾಣಿ, ರಾಜ್ಯ ಸಂಚಾಲಕರಾದ ಎನ್‌.ಎ. ಖಾಜಿ, ರಾಷ್ಟ್ರಸಮಿತಿ ಸದಸ್ಯೆ ಲತೀಫಾ ಬಾಗಲಕೋಟೆ, ಕುಂದಗೋಳ ತಾಲ್ಲೂಕು ಘಟಕದ ಅಕ್ಕಮ್ಮ ಬಡವಿ, ಕಲಘಟಗಿ ತಾಲ್ಲೂಕಿನ ಶಿವಗಂಗಾ ಹುಬ್ಬಳ್ಳಿ, ನವಲಗುಂದ ತಾಲ್ಲೂಕಿನ ಐ.ಡಿ. ಸುಂಕದ ನೇತೃತ್ವ ವಹಿಸಿದ್ದರು.

ಬಡ್ತಿ ನೀಡಲು ಆಗ್ರಹ
ಧಾರವಾಡ: ಕನಿಷ್ಠ ವೇತನ ನಿಗದಿ, ಸೇವಾ ಹಿರಿತನ ಪರಿಗಣಿಸಿ ಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ 1.25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದುಡಿಯುತ್ತಿದ್ದಾರೆ. ಇದುವರೆಗೂ ಅವರ ಸೇವೆಯನ್ನು ಸರ್ಕಾರ ಕಾಯಂಗೊಳಿಸಿಲ್ಲ ಎಂದು ದೂರಿದರು.

ವೀರಮ್ಮ ತುರಕಾಣಿ, ಗಿರಿಜಾ ಬಡಿಗೇರ, ಸುನಿತಾ ನರಗುಂದ, ಭಾರತಿ ಆಲೂರ, ಶಶಿಕಲಾ ಜಾಲಗಾರ, ಸರೋಜಾ ಮೇಲಿನಮನಿ, ಚನ್ನವ್ವ ಗುಗ್ಗರಿ, ವಿಜಯಲಕ್ಷ್ಮೀ ಹಿರೇಮಠ, ಸಂಧ್ಯಾ ಕುಲಕರ್ಣಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.