ADVERTISEMENT

ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಗುಡುಗು

ಹುಬ್ಬಳ್ಳಿಯ ಪಿ.ಬಿ. ರಸ್ತೆಯಲ್ಲಿ ರ್‌್ಯಾಲಿ, ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಎಬಿವಿಪಿ ಸದಸ್ಯರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 6:12 IST
Last Updated 7 ಅಕ್ಟೋಬರ್ 2015, 6:12 IST

ಹುಬ್ಬಳ್ಳಿ: ಸರ್ಕಾರಿ ಶಾಲಾ–ಕಾಲೇಜುಗಳ ಗುಣಮಟ್ಟ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾ­ಯಿಸಿ ಎಬಿವಿಪಿ ನಗರದಲ್ಲಿ ಮಂಗಳ­ವಾರ ಬೃಹತ್‌ ಪ್ರತಿಭಟನೆ ನಡೆಸಿತು.

ಗುಲ್ಬರ್ಗ, ಬೀದರ್‌, ರಾಯಚೂರು, ಬಳ್ಳಾರಿ, ಕೊಪ್ಪಳ, ಬೆಳಗಾವಿ, ವಿಜಯ­ಪುರ, ಹುಬ್ಬಳ್ಳಿ–ಧಾರವಾಡ ಅವಳಿ­ನಗರ, ಉತ್ತರ ಕನ್ನಡ, ಗದಗ, ಹಾವೇ­ರಿಯ ವಿವಿಧ ಕಾಲೇಜುಗಳು ಮತ್ತು ಹಾಸ್ಟೆಲ್‌ಗಳ ಸಹಸ್ರಾರು ವಿದ್ಯಾರ್ಥಿಗಳು ರ್‌್ಯಾಲಿಯಲ್ಲಿ ಭಾಗವಹಿಸಿದ್ದರು.

ಬಿ.ವಿ. ಭೂಮರಡ್ಡಿ ಕಾಲೇಜಿನಿಂದ ಚನ್ನಮ್ಮ ವೃತ್ತದವರೆಗೂ ಪ್ರತಿಭಟನಾ ರ್‌್ಯಾಲಿ ನಡೆಯಿತು. ರ್‌್ಯಾಲಿ ಉದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಲಾಯಿತು.

ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ಸರ್ಕಾರ ಎಂಜಿನಿಯರಿಂಗ್‌ ಮತ್ತು ಪದವಿ ಕಾಲೇಜುಗಳನ್ನು ತೆರೆದಿಲ್ಲ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿ­­ಕೊಡೆಗಳಂತೆ ತಲೆ ಎತ್ತುತ್ತಲಿವೆ. ಎಲ್‌ಕೆಜಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೂ ಲಕ್ಷ ಲಕ್ಷಗಟ್ಟಲೇ ಹಣವನ್ನು ಡೊನೇಷನ್‌ ರೂಪದಲ್ಲಿ ಪಡೆಯಲಾಗುತ್ತಿದೆ. ಶಿಕ್ಷಣ ವ್ಯಾಪಾರೀ­ಕರಣವಾಗಿದೆ. ಇಷ್ಟಾದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಪ್ರತಿ­ಭಟನಾಕಾರರು ಆಗ್ರಹಿಸಿದರು.

ಸರ್ಕಾರಿ ಕಾಲೇಜುಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕು. ಸರ್ಕಾರಿ ಕಾಲೇಜು­ಗಳ ಅಧ್ಯಾಪಕರನ್ನು ಕಾಯಂ­ಗೊಳಿಸಬೇಕು. ರಾಜ್ಯವನ್ನು ತಲ್ಲಣ­ಗೊಳಿಸಿರುವ ಸೌಜನ್ಯ, ರತ್ನಾ ಕೊಟ್ಟಾರಿ, ನಂದಿತಾ, ಯಲ್ಲಾಲಿಂಗ ಕೊಲೆ ಪ್ರಕರಣ ತನಿಖೆಯನ್ನು ಶೀಘ್ರವೇ ಮುಗಿಸಿ ಆರೋಪಿಗಳನ್ನು ಶಿಕ್ಷೆಗೆ ಗುರಿ­ಪಡಿಸಬೇಕು ಎಂದು ಪ್ರತಿ­ಭಟನಾ­ನಿರತರು ಸರ್ಕಾರವನ್ನು ಒತ್ತಾಯಿಸಿದರು.

ಎಬಿವಿಪಿ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ವಿನಯ ಬಿದರೆ ಮಾತನಾಡಿ, ‘ಒಂದು ಕಾಲದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿದ್ದರು. ಆದರೆ, ಗುಣಮಟ್ಟದ ಶಿಕ್ಷಣ ಇಲ್ಲವಾದ ಕಾರಣ ಬಿಕೋ ಎನ್ನುತ್ತಿವೆ. ಗ್ರಾಮೀಣ ಭಾಗದ ಶಾಲಾ–ಕಾಲೇಜುಗಳು ಮುಚ್ಚುವ ಸ್ಥಿತಿಯಲ್ಲಿವೆ. ರಾಜ್ಯದಲ್ಲಿ 9,503 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 20ಕ್ಕೂ ಕಡಿಮೆ ಇದ್ದು, 534 ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿಯೇ ಇಲ್ಲ­ವಾಗಿದೆ. ಶೇ 56ಕ್ಕೂ ಹೆಚ್ಚು ಪದವಿ ಕಾಲೇಜು­ಗಳಲ್ಲಿ ಅಧ್ಯಾಪಕರ ನೇಮ­ಕಾತಿಯೇ ಆಗಿಲ್ಲ. ಶೇ 70ಕ್ಕೂ ಹೆಚ್ಚು ಶಾಲಾ–ಕಾಲೇಜುಗಳಲ್ಲಿ ಪ್ರಯೋಗ ಶಾಲೆ, ಕೊಠಡಿಗಳು ಹಾಗೂ ಶೌಚಾ­ಲಯಗಳ ಕೊರತೆ ಇದೆ’ ಎಂದರು.

ಎಬಿವಿಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ಮಾತನಾಡಿ, ‘ತಾಂತ್ರಿಕ, ವೈದ್ಯಕೀಯ ಹಾಗೂ ವೃತ್ತಿಪರ ಶಿಕ್ಷಣ ಬಡವರಿಗೂ ದೊರೆಯುವಂತಾಗಬೇಕು. 2006ರ ಸಿಇಟಿ ಕರಾಳ ಶಾಸನ ರದ್ದಾಗಬೇಕು. ಕಾಮೆಡ್‌– ಕೆ, ಮೈನಾರಿಟಿ, ಖಾಸಗಿ ವಿವಿಗಳಲ್ಲಿ ನಡೆಯುತ್ತಿರುವ ಸಿಇಟಿ ರದ್ದು ಮಾಡಬೇಕು. ರಾಜ್ಯಕ್ಕೆ ಒಂದೇ ಸಿಇಟಿ ಜಾರಿಯಾಗಬೇಕು’ ಎಂದರು.

‘ರಾಜ್ಯದಲ್ಲಿ ವಿದ್ಯಾರ್ಥಿಗಳ ಕೊಲೆ, ಅತ್ಯಾಚಾರದಿಂದಾಗಿ ಕಾನೂನು ಸುವ್ಯ­ವಸ್ಥೆ ಹದಗೆಟ್ಟಿದೆ. ಅದು ಸರಿ­ಹೋಗ­ಬೇಕು. ಕೊಲೆಗಾರರನ್ನು ಕೂಡಲೇ ಬಂಧಿಸಬೇಕು. ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ ತಡೆಗಟ್ಟಲು ಗೃಹ ಇಲಾಖೆ ಮುಂದಾಗಬೇಕು’ ಎಂದು ಆಗ್ರಹಿಸಿದರು.

ಎಬಿವಿಪಿ ಜಿಲ್ಲಾ ಸಂಚಾಲಕ ರವೀಂದ್ರ ಎಂ. ಪಾಟೀಲ, ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಡಾ.ಲಕ್ಷ್ಮೀ ತೆಲ್ಲೂರ, ರಾಜ್ಯ ಸಹ ಕಾರ್ಯದರ್ಶಿ ಸಿದ್ದು ಸಾಲಿಮಠ ನೇತೃತ್ವ ವಹಿಸಿದ್ದರು.

ಸ್ವಂತ ಖರ್ಚಿಂದ ಬಂದಿದ್ದರು:  ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಸ್ವಂತ ಖರ್ಚಿನಿಂದಲೇ ಹುಬ್ಬಳ್ಳಿಗೆ ಬಂದಿದ್ದರು. ಕೆಲವರು ಬಸ್‌ಗಳನ್ನು ಮಾಡಿಕೊಂಡು ಬಂದಿದ್ದರು. ಮಧ್ಯಾಹ್ನದ ಊಟ ನೀಡುವ ಸಲುವಾಗಿ ಪ್ರತಿ ವಿದ್ಯಾರ್ಥಿ­ಯಿಂದ ₹ 10 ಸಂಗ್ರಹ ಮಾಡಲಾಗಿತ್ತು ಎಂದು ಎಬಿವಿಪಿ ಪ್ರಮುಖರು ತಿಳಿಸಿ­ದರು.

ಊಟಕ್ಕಾಗಿ ಮುಗಿಬಿದ್ದ ವಿದ್ಯಾರ್ಥಿಗಳು
ಎಬಿವಿಪಿ ರ್‌್ಯಾಲಿಯಲ್ಲಿ ಭಾಗ­ವಹಿಸಲು ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡ­ಲಾಗಿತ್ತು.

ನೆಹರು ಮತ್ತು ರಾಯ್ಕರಮೈದಾನ­ದಲ್ಲಿ ವೆಜಿಟಬಲ್‌ ಪಲಾವ್ ಮತ್ತು ನೀರಿನ ಪೊಟ್ಟಣಗಳನ್ನು ವಿತರಿಸ­ಲಾಯಿತು. ಊಟದ ಪೊಟ್ಟಣಗಳನ್ನು ಪಡೆ­ಯಲು ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂದು ಮುಗಿ­ಬಿದ್ದರು. ನೀರಿನ ಪೊಟ್ಟಣಗಳನ್ನು ವಿದ್ಯಾರ್ಥಿಗಳಿಗೆ ಎಸೆಯುತ್ತಿದ್ದ ದೃಶ್ಯ ಕಂಡುಬಂತು.

ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ರ್‌್ಯಾಲಿ ಮುಗಿದ ಬಳಿಕ ತಮ್ಮ ಕಿಸೆಯಲ್ಲಿದ್ದ ಮೊಬೈಲ್‌ಗಳನ್ನು ತೆಗೆದು ಸೆಲ್ಫಿ ತೆಗೆಯುವುದರಲ್ಲಿ ತಲ್ಲೀನ­ರಾಗಿದ್ದ ದೃಶ್ಯ ಕಂಡುಬಂತು. ಚನ್ನಮ್ಮ ವೃತ್ತದ ಸುತ್ತಲೂ ಬರೇ ವಿದ್ಯಾರ್ಥಿಗಳೇ ತುಂಬಿದ್ದರು. ರ್‌್ಯಾಲಿ ಮುಗಿಸಿ ಊರುಗಳಿಗೆ ಹೋಗುವ ಮುನ್ನ ಕೊಪ್ಪಿಕರ್‌ ರಸ್ತೆ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳು ಬಟ್ಟೆ ಹಾಗೂ ಇತರೆ ವಸ್ತುಗಳ ಖರೀದಿಯಲ್ಲೂ ತೊಡಗಿದ್ದ ದೃಶ್ಯ ಕಂಡುಬಂತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.