ADVERTISEMENT

ಸಾಹಿತ್ಯ ಸಮ್ಮೇಳನ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:11 IST
Last Updated 24 ಮಾರ್ಚ್ 2017, 6:11 IST

ಧಾರವಾಡ: ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇದೇ 25, 26ರಂದು 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಹಿರಿಯ ಕವಿ ವಿ.ಸಿ.ಐರಸಂಗ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಹೇಳಿದರು.

ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಗೆ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹೆಸರಿಡಲಾಗಿದ್ದು, ಉಳಿದಂತೆ ಡಾ.ವಾಮನ ಬೇಂದ್ರೆ, ಸದಾನಂದ ಕನವಳ್ಳಿ, ಗೋಪಾಲ ವಾಜಪೇಯಿ, ಗಜಾನನ ಮಹಾಲೆ ಹಾಗೂ ಆರ್ಯ ಆಚಾರ್ಯ ಅವರ ಹೆಸರಿನಲ್ಲಿ ಐದು ಮಹಾದ್ವಾರ ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.

ಅನುಭಾವ ಸಾಹಿತ್ಯ, ಮಾಧ್ಯಮದ ರಸ ನಿಮಿಷಗಳು, ಮಕ್ಕಳ ಸಾಹಿತ್ಯದಲ್ಲಿ ಫ್ಯಾಂಟಸಿ, ಮಹಿಳೆ: ಸಂಘಟನೆ-ಸಶಕ್ತೀಕರಣದ ಹಾದಿಯಲ್ಲಿ ಹಾಗೂ ಸಂಪನ್ಮೂಲಗಳು: ಸವಾಲುಗಳು ಸಾಧ್ಯತೆಗಳು ವಿಷಯಗಳ ಕುರಿತು ಐದು ವೈಚಾರಿಕ ಗೋಷ್ಠಿಗಳು ಜರುಗಲಿವೆ.

26ರಂದು ಸಮ್ಮೇಳನದ ಸರ್ವಾಧ್ಯಕ್ಷರಾದ ಕವಿ ವಿ.ಸಿ. ಐರಸಂಗ ಅವರ ಕವಿತೆಗಳ ವಾಚನ ಹಾಗೂ ಗಾಯನ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ' ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

25ರ ಬೆಳಿಗ್ಗೆ ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕ ಸತೀಶ ಪರ್ವತೀಕರ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಕವಿವಿ ಗಾಂಧಿ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ಶಿವಾನಂದ ಶೆಟ್ಟರ ಕನ್ನಡ ಧ್ವಜಾರೋಹಣ ಮಾಡುವರು.

ಅದೇ ದಿನ ಬೆಳಿಗ್ಗೆ ಸಾಹಿತಿ ಡಾ.ಬಸವರಾಜ ಸಾದರ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದು, ಹಿರಿಯ ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಾಹಿತಿ ಡಾ.ರಾಜೇಂದ್ರ ಚೆನ್ನಿ ಭಾಗವಹಿಸಲಿದ್ದು, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ವಿವಿಧ ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ.

ಕಾರ್ಮಿಕ ಸಚಿವ ಸಂತೋಷ ಲಾಡ, ಶಾಸಕ ಸಿ.ಎಸ್.ಶಿವಳ್ಳಿ, ಸಾಹಿತಿಗಳಾದ ಎಚ್.ಎಂ.ಬೀಳಗಿ, ಡಾ. ರಾಘವೇಂದ್ರ ಪಾಟೀಲ, ಡಾ.ಮಲ್ಲಿಕಾರ್ಜುನ ಹಿರೇಮಠ ಹಾಗೂ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಮೇಯರ್‌ ಡಿ.ಕೆ.ಚವ್ಹಾಣ ಪಾಲ್ಗೊಳ್ಳುವರು ಎಂದರು.

25ರ  ಬೆಳಿಗ್ಗೆ ಕನ್ನಡಕ್ಕಾಗಿ ನಡೆ ಎಂಬ ಧ್ಯೇಯವಾಕ್ಯದಲ್ಲಿ ನಗರದ ಕಲಾಭವನದಿಂದ ಜಿಲ್ಲಾ ಸಾಹಿತ್ಯ ಭವನದವರೆಗೆ  ಮೆರವಣಿಗೆ ನಡೆಯಲಿದೆ. ನಂತರ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ನೂತನವಾಗಿ ನಿರ್ಮಿಸಿದ ಕನ್ನಡ ಸಾಹಿತ್ಯ ಸಭಾ ಭವನವನ್ನು ಉದ್ಘಾಟಿಸಲಿದ್ದಾರೆ. 

26ರ ಸಂಜೆ ಸಮಾರೋಪ ಜರುಗಲಿದ್ದು, ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್.ಕೌಜಲಗಿ, ಡಾ.ಜಿನದತ್ತ ಹಡಗಲಿ, ಎಸ್.ಎಸ್.ದೊಡಮನಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT