ADVERTISEMENT

ಸುಳ್ಳುಪತ್ತೆಗೆ ಒಳಪಡಿಸಲು ಪೊಲೀಸರ ಸಿದ್ಧತೆ

ಶಿರಕೋಳ ಮಕ್ಕಳ ಹತ್ಯೆ ಪ್ರಕರಣ ನಡೆದು ಒಂದೂವರೆ ವರ್ಷವಾದರೂ ಸಿಗದ ಆರೋಪಿಗಳು

ಇ.ಎಸ್.ಸುಧೀಂದ್ರ ಪ್ರಸಾದ್
Published 20 ಫೆಬ್ರುವರಿ 2017, 6:09 IST
Last Updated 20 ಫೆಬ್ರುವರಿ 2017, 6:09 IST

ಧಾರವಾಡ: ನವಲಗುಂದ ತಾಲ್ಲೂಕಿನ ಶಿರಕೋಳದಲ್ಲಿ ಎರಡು ವರ್ಷಗಳ ಹಿಂದೆ ಎಳೆಯ ಸೋದರರಿಬ್ಬರನ್ನು ಅಪಹರಿಸಿ ನಂತರ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರ ಪತ್ತೆಗೆ ಜಾಲ ಬೀಸಿರುವ ಪೊಲೀಸ್‌ ಇಲಾಖೆ, ಶಂಕಿತರ ಸುಳ್ಳುಪತ್ತೆ ಪರೀಕ್ಷೆಗೆ (ಪಾಲಿಗ್ರಾಫಿ ಟೆಸ್ಟ್‌) ನಾಲ್ಕು ಜನರನ್ನು ಒಳಪಡಿಸಲು ಸಿದ್ಧತೆ ನಡೆಸಿದೆ.

2015ರ ಸೆ. 25ರಂದು ಶಿರಕೋಳ ಗ್ರಾಮದ ಈರಪ್ಪ ಶಿರಸಂಗಿ ಎಂಬುವವರ ಪುತ್ರರಾದ ನಾಗರಾಜ ಶಿರಸಂಗಿ (13) ಹಾಗೂ ಹಾಗೂ ಆಕಾಶ ಶಿರಸಂಗಿ (8) ಅಪಹರಣವಾಗಿತ್ತು. ಅದೇ ವರ್ಷ ಅಕ್ಟೋಬರ್‌ 20ರಂದು ಇಬ್ಬರು ಮಕ್ಕಳ ಶಿರಚ್ಛೇದ ನಡೆಸಿ, ದುಷ್ಕರ್ಮಿಗಳು ಹಳ್ಳದಲ್ಲಿ ಎಸೆದಿದ್ದರು. ಅಂದಿನಿಂದ ಪ್ರಕರ­ಣದ ಹಿಂದೆ ಬಿದ್ದಿರುವ ಪೊಲೀಸ­ರಿಗೆ ಹಂತಕರ ಸುಳಿವು ಪತ್ತೆಯಾಗಿರಲಿಲ್ಲ.

ತನಿಖೆಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್‌ ಮೀನಾ, ‘ಮತ್ತೊಮ್ಮೆ ತನಿಖೆ  ನಡೆಸಲಾಗುವುದು. ತಪ್ಪಿತಸ್ಥರನ್ನು ಪತ್ತೆ ಮಾಡಲು ಇಲಾಖೆ ಬದ್ಧವಾಗಿದೆ’ ಎಂದಿದ್ದರು. ಈ ಸಂಬಂಧ ತನಿಖೆಯನ್ನು ಇದೀಗ ಡಿವೈಎಸ್‌ಪಿ ಚಂದ್ರಶೇಖರ ಅವರಿಗೆ ವಹಿಸಲಾಗಿದೆ.

ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿರುವ ಚಂದ್ರಶೇಖರ ಅವರ ತಂಡ ಅನುಮಾನಿತ ನಾಲ್ಕು ಜನರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಸಂಬಂಧ ನವಲಗುಂದದ ಸಿವಿಲ್‌ ನ್ಯಾಯಾಲಯದ ಅನುಮತಿ ಪಡೆದಿದೆ. ಜತೆಗೆ ನ್ಯಾಯಾಲಯದ ಅನುಮತಿ ಆಧಾರದ ಮೇಲೆ ಈ ನಾಲ್ಕು ಜನರನ್ನು ಕರೆದುಕೊಂಡು ಬರಲು ಸೂಕ್ತ ದಿನಾಂಕ ತಿಳಿಸುವಂತೆ ಕೋರಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪತ್ರವನ್ನೂ ಬರೆದಿದೆ.

ಮಕ್ಕಳ ಅಪಹರಣ ಹಾಗೂ ಭೀಕರ ಹತ್ಯೆ ನಡೆದ ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳ ಹತ್ಯೆಯಾದ ನಂತರವೂ ಇದೇ ಗ್ರಾಮದಲ್ಲಿದ್ದ ಬಾಲಕರ ತಂದೆ ಈರಪ್ಪ, ನಂತರ ನರಗುಂದ ತಾಲ್ಲೂಕಿನ ಶಿರೋಳಕ್ಕೆ ವರ್ಗಾವಣೆಗೊಂಡಿದ್ದಾರೆ. ಈ ನಡುವೆ ಮಕ್ಕಳು ವಾಮಾಚಾರಕ್ಕಾಗಿ ಬಲಿಯಾದರೆ ಅಥವಾ ಕೊಲೆಯ ಹಿಂದೆ ಬೇರೆ ವಿಷಯವಿದೆಯೇ? ಎಂಬುದರ ಜಾಡು ಬೆನ್ನು ಹತ್ತಿರುವ ತನಿಖಾ ತಂಡ ಈಗ ಶಂಕಿತರ ಹೇಳಿಕೆಗೆ ಸಂಬಂಧಿಸಿದಂತೆ ಸುಳ್ಳು ಪತ್ತೆ ಮಾಡಲು ಮುಂದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಚಂದ್ರಶೇಖರ, ‘ತನಿಖೆ ಪ್ರಗತಿಯಲ್ಲಿದೆ. ಬಾಲಕರ ಶವ ಪತ್ತೆಯಾದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಬಾಲಕರು ಕಾಣೆಯಾದ ದಿನ ಅವರನ್ನು ಕೊನೆಯದಾಗಿ ಕಂಡ ಕೆಲ ಸಾಂದರ್ಭಿಕ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆ ತಾರ್ಕಿಕ ಅಂತ್ಯ ಕಾಣಬಹುದು ಎಂಬ ವಿಶ್ವಾಸ ನಮ್ಮದು. ಹೆಚ್ಚಿನದನ್ನು ಈ ಹಂತದಲ್ಲಿ ವಿವರಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.