ADVERTISEMENT

‘ಸೈನಿಕರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ’

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 5:50 IST
Last Updated 27 ಜುಲೈ 2017, 5:50 IST

ಧಾರವಾಡ: ‘ದೇಶದ ಗಡಿಗಳಲ್ಲಿ ಪ್ರಾಣದ ಹಂಗು ತೊರೆದು ದೇಶದೊಳಗಿನ ಜನರ ಜೀವ ರಕ್ಷಿಸುವ ಸೈನಿಕರ ಋಣ ತೀರಿಸಲು ಸಾಧ್ಯವಿಲ್ಲ. ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ’ ಎಂದು ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿರುವ ಕಾರ್ಗಿಲ್ ಸ್ತೂಪದ ಬಳಿ ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಹಾಗೂ ಜಿಲ್ಲಾಡಳಿತ ಬುಧವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವದ 18ನೇ ವಾರ್ಷಿಕ ದಿನಾಚರಣೆಯಲ್ಲಿ ವೀರಯೋಧರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

‘ಜನ್ಮ ನೀಡಿದ ತಾಯಿ ಮತ್ತು ಜನ್ಮಭೂಮಿ ಎಲ್ಲಕ್ಕಿಂತ ಶ್ರೇಷ್ಠ. ಇವೆರಡರ ಋಣ ತೀರಿಸಲು ಸಾಧ್ಯವೇ ಇಲ್ಲ. ಸೇವೆಯಲ್ಲಿ ದೇಶ ಸೇವೆಯೇ ಅತ್ಯಂತ ಶ್ರೇಷ್ಠ. ದೇಶ ರಕ್ಷಣೆಗಾಗಿ ಹೋರಾಡಿ, ವೀರ ಮರಣ ಹೊಂದಿದ ಹುತಾತ್ಮ ಸೈನಿಕರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು. 

ADVERTISEMENT

‘ಈ ದೇಶಕ್ಕೆ ಸ್ವಾತಂತ್ರ್ಯ ದಕ್ಕಬೇಕಾದರೆ ಅದಕ್ಕೆ ಅನೇಕರ ಬಲಿದಾನವಾಗಿದೆ. ತ್ಯಾಗ, ಬಲಿದಾನದ ಮೂಲಕ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಲು ಸೈನಿಕರು ಗಡಿಗಳಲ್ಲಿ ಪ್ರಾಣದ ಹಂಗು, ತೊರೆದು ಹೋರಾಟ ಮಾಡುತ್ತಿದ್ದಾರೆ. ಇದೆಲ್ಲದರ ಅರಿವು ಯುವಕರು,ಹಾಗೂ ವಿದ್ಯಾರ್ಥಿಗಳಿಗೆ ಇರಬೇಕು. ಯುವಕರು ತಾಯ್ನಾಡ ಸೇವೆಗೆ ಸನ್ನದ್ಧರಾಗಬೇಕು’ ಎಂದು ಸಲಹೆ ನೀಡಿದರು.

ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಮಾತನಾಡಿ, ‘ದೇಶಕ್ಕಾಗಿ ಅನೇಕ ವೀರರು ಹೋರಾಡಿದ್ದಾರೆ. ದೇಶದೊಳಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಹಗಲಿರುಳು ಶ್ರಮಿಸುತ್ತಾರೆ. ಯುವಕರು, ಶಾಲಾ ಮಕ್ಕಳು ದೇಶದ ಬಗ್ಗೆ, ಯೋಧರ ಬಗ್ಗೆ ಪ್ರೀತಿ ಗೌರವ, ಅಭಿಮಾನ ಹೊಂದಿರಬೇಕು’ ಎಂದು ಹೇಳಿದರು. 

ಪಾಲಿಕೆಯ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ‘ಇಂದಿನ ಪೀಳಿಗೆಯ ನೆಮ್ಮದಿಯ ನಾಳೆಗಾಗಿ ಸೈನಿಕರು ಗಡಿಗಳಲ್ಲಿ ಹಸಿವು, ನಿದ್ರೆ ಲೆಕ್ಕಿಸದೆ ದೇಶ ರಕ್ಷಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಗೌರವಿಸುವುದು ವೀರ ಪರಂಪರೆಯನ್ನು ಗೌರವಿಸಿದಂತೆ’ ಎಂದು ಹೇಳಿದರು.

ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರ ತಾಯಿ, ಪತ್ನಿ, ಮಕ್ಕಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ಹೂಗುಚ್ಛ ನೀಡುವ ಮೂಲಕ ಗೌರವಿಸಲಾಯಿತು.
ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮೀನಗಡ,  ಶಿವಯೋಗಿ ಅಮೀನಗಡ, ಬ್ರಿಗೇಡಿಯರ್ ಎಸ್.ಜಿ.ಭಾಗವತ್, ಎಸಿಪಿ ವಾಸುದೇವ ನಾಯಕ, ಡಿಸಿಪಿ ನಾಡಗೌಡ, ಜಯರಾಮ, ಕೃಷ್ಣಾ ಜೋಶಿ, ನಿವೃತ್ತ ಸೇನಾಧಿಕಾರಿಗಳು, ಎನ್‌ಸಿಸಿ, ಸ್ಕೌಟ್ಸ್-ಗೈಡ್ಸ್, ಗೃಹ ರಕ್ಷಕ ದಳ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಹುಬ್ಬಳ್ಳಿಯಲ್ಲಿಯೂ ಆಚರಣೆ
ಹುಬ್ಬಳ್ಳಿ: ಇಲ್ಲಿ ಮಂಜುನಾಥ ನಗರದ ಕೆ.ಎಲ್‌.ಇ. ಇಂಗ್ಲಿಷ್‌ ಶಾಲೆಯಲ್ಲಿ ಕಾರ್ಗಿಲ್‌ ವಿಜಯ ದಿನ ಆಚರಿಸಲಾಯಿತು. ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಮೊದಲು ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯರಾದ ಆಡ್ರಿ ಪ್ರಿನ್ಸ್‌ ‘ದೇಶಸೇವೆಯೇ ಈಶ ಸೇವೆ’ ಎಂದು ಹೇಳಿದರು. ನಂತರ ವಿದ್ಯಾರ್ಥಿಗಳು ದೇಶಭಕ್ತಿಗೀತೆ, ಕಾರ್ಗಿಲ್‌ ವಿಜಯೋತ್ಸವದ ರೂಪಕ, ದೇಶಭಕ್ತಿ ನೃತ್ಯಗಳನ್ನು ಪ್ರಸ್ತುತಪಡಿಸಿದರು.

ದೇಶಪಾಂಡೆ ಪ್ರತಿಷ್ಠಾನ: 
ದೇಶಪಾಂಡೆ ಶಿಕ್ಷಣ ಪ್ರತಿಷ್ಠಾನದ ಫೆಲೋಶಿಪ್‌ನ ತರಬೇತಿ ಕಾರ್ಯಕ್ರಮದ ವಿದ್ಯಾರ್ಥಿಗಳು ಕಾರ್ಗಿಲ್ ವಿಜಯೋತ್ಸವ ಆಚರಿಸಿದರು. ಯುದ್ಧದಲ್ಲಿ ಮಡಿದ ವೀರಯೋಧರ ಭಾವಚಿತ್ರಕ್ಕೆ  ಪುಷ್ಪನಮನ ಸಲ್ಲಿಸಲಾಯಿತು. ಫೌಂಡೇಷನ್‌ನ ಸಿಇಒ ನವೀನ್ ಝಾ  ‘ಯುವಕರು ಸೇವಾ ಮನೋಭಾವನೆ ಹಾಗೂ ಗಟ್ಟಿ ಮನಸ್ಥಿತಿ ರೂಢಿಸಿಕೊಳ್ಳಬೇಕು’ ಎಂದರು.

ಡಿ.ಬಿ ವಣಗೇರಿ ಮತ್ತು ಬಸವರಾಜ.ಕೆ ಅವರು ಮಾತನಾಡಿ, ಕಾರ್ಗಿಲ್‌ ಯುದ್ಧದ ಸನ್ನಿವೇಶದ ಸಂಕ್ಷಿಪ್ತ ಚಿತ್ರಣ ತಿಳಿಸಿಕೊಟ್ಟರು. ಕಾರ್ಯಾಗಾರಕ್ಕೆ ಬಂದಿರುವ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೇಣದ ಬತ್ತಿ ಹಿಡಿದು ಜಾಥಾ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.