ADVERTISEMENT

ಸ್ಥಳೀಯರಿಗೆ ಆದ್ಯತೆ ನೀಡಲು ಕಂಪೆನಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 5:22 IST
Last Updated 21 ಫೆಬ್ರುವರಿ 2017, 5:22 IST
ಧಾರವಾಡ: ‘ಇಲ್ಲಿಯ ಜೆ.ಎಸ್‌.ಎಸ್‌ ಆವರಣದಲ್ಲಿ ಇದೇ 26 ರಂದು ‘ಉದ್ಯೋಗ ಉತ್ಸವ’ ನಡೆಯಲಿದ್ದು, ಈ ಭಾಗದ ಕಂಪೆನಿಗಳು ಸ್ಥಳೀಯ ನಿರುದ್ಯೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಸೂಚಿಸಿದರು.
 
‘ವೈಶುದೀಪ ಫೌಂಡೇಶನ್‌, ಜನತಾ ಶಿಕ್ಷಣ ಸಮಿತಿ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ‘ಉದ್ಯೋಗ ಉತ್ಸವ’ ಏರ್ಪಡಿಸಲಾಗಿದೆ.
ಉದ್ಯೋಗ ಉತ್ಸವದ ಪೂರ್ವ­ಭಾವಿ­ಯಾಗಿ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಬೇಲೂರು ಕೈಗಾರಿಕಾ ಪ್ರದೇಶದ ವಿವಿಧ ಕಂಪೆನಿಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.
 
‘ಬೇಲೂರು ಕೈಗಾರಿಕಾ ಪ್ರದೇಶದಲ್ಲಿ­ರುವ ಅನೇಕ ಕಂಪೆನಿಗಳಿಗೆ ಸರ್ಕಾರ­ದಿಂದ ಜಾಗ, ಮೂಲ ಸೌಕರ್ಯ ಮುಂತಾದ ಸೌಲಭ್ಯ ಕಲ್ಪಿಸಲಾಗಿದ್ದರೂ ಆ ಕಂಪೆನಿಗಳು ಹೊರ ರಾಜ್ಯದ ಯುವಕರನ್ನು ಕೆಲಸಕ್ಕೆ ನೇಮಿಸಿ­ಕೊಳ್ಳುತ್ತಿವೆ. ಇಲ್ಲಿ ಕಂಪೆನಿಗಳ ಸ್ಥಾಪನೆಗೆ ಈ ಭಾಗದ ರೈತರು ಜಮೀನು ಕೊಟ್ಟಿದ್ದಾರೆ. ಜಮೀನು ಕೊಟ್ಟ ರೈತರ ಮಕ್ಕಳು ಶಿಕ್ಷಣ ಪಡೆದೂ ನಿರುದ್ಯೋಗಿಗಳಾಗಿದ್ದಾರೆ. ಅಂಥವರ ಮಕ್ಕಳಿಗೆ ಕಂಪೆನಿಗಳು ಕೆಲಸ ನೀಡಬೇಕು. ಅದನ್ನು ಬಿಟ್ಟು ಬೇರೆ ರಾಜ್ಯದವರನ್ನು ನೇಮಿಸಿಕೊಳ್ಳುವುದು ಸರಿಯಲ್ಲ’ ಎಂದರು.
 
‘ಕಂಪೆನಿಗಳು ಸ್ಥಳೀಯ ನಿರುದ್ಯೋಗಿ ಯುವಕರ ಬಗ್ಗೆ ತಾಳುತ್ತಿರುವ ತಾತ್ಸಾರ ಮನೋಭಾವನೆ ಸಂಬಂಧ ಮುಖ್ಯಮಂತ್ರಿ­ಗಳಿಗೆ ಪತ್ರದ ಮೂಲಕ ತಿಳಿಸುತ್ತೇನೆ. ಒಂದು ವೇಳೆ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಕಂಪೆನಿಗಳು ಆದ್ಯತೆ ನೀಡದೇ ಇದ್ದರೆ ಕಂಪೆನಿಗಳಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ನಿಲ್ಲಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.
 
‘ಐ.ಟಿ.ಐ ಮುಗಿಸಿದವರಿಂದ ವಿವಿಧ ಕೆಲಸಕ್ಕಾಗಿ ಸದ್ಯ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿದೆ. ಐದು ಸಾವಿರ ಜನ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅದಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಇದು ಸ್ಥಳೀಯ ವಿದ್ಯಾರ್ಥಿಗಳಿಗೆ ಗೊತ್ತಿಲ್ಲ. ಆನ್‌ಲೈನ್ ಅರ್ಜಿ ಹಾಕಲೂ ಅವರಿಗೆ ಬರುವುದಿಲ್ಲ. ಹೀಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಹಾಕುವ ಕುರಿತಂತೆ ಕಾರ್ಯಾಗಾರ ಏರ್ಪಡಿಸಿ ಉದ್ಯೋಗಾಕಾಂಕ್ಷಿಗಳಿಗೆ ಆ ಬಗ್ಗೆ ಮಾಹಿತಿ ನೀಡಲು ನಿರ್ಧರಿಸ­ಲಾಗಿದೆ. ಇಂಥ ಕಾರ್ಯಕ್ಕೆ ವಿವಿಧ ಕಂಪೆನಿಗಳೂ ಸಹಕಾರ ನೀಡಬೇಕು’ ಎಂದರು.
 
‘ಕೇಂದ್ರ ಸರ್ಕಾರ ಸೇನಾ ನೇಮ­ಕಾತಿಗೆ ಆದೇಶ ಹೊರಡಿಸಿದ್ದು, ಈ ಭಾಗದ ಯುವಜನರಿಗೆ ದೈಹಿಕ ಸಾಮರ್ಥ್ಯ ಮುಂತಾದ ವಿಷಯಗಳ ಬಗ್ಗೆ ತರಬೇತಿ ಕೂಡ ನೀಡಲಾಗುವುದು. ಸೇನಾ ನಿವೃತ್ತಿ ಹೊಂದಿದ ಅಧಿಕಾರಿಗಳಿಂದ ಅವರಿಗೆ ತರಬೇತಿ ನೀಡಲಾಗುವುದು. ಈ ತರಬೇತಿ ಪಡೆಯ ಬಯಸುವ ಅಭ್ಯರ್ಥಿಗಳು ಟೋಲ್‌ ಫ್ರೀ ಸಂಖ್ಯೆ 18004255540ಕ್ಕೆ ಸಂಪರ್ಕಿಸ­ಬಹುದು’ ಎಂದರು.
 
‘ಈ ಬಾರಿಯ ಉದ್ಯೋಗ ಉತ್ಸವ­ದಲ್ಲಿ ಸ್ಥಳೀಯ ಸುಮಾರು 3–4 ಸಾವಿರ ಯುವಜನರಿಗೆ ಉದ್ಯೋಗ ಸಿಗುವಂ­ತಾಗ­ಬೇಕು. ಕೆಲವರು ಬೇರೆ ಕಂಪೆನಿಗಳಲ್ಲಿ ಕೆಲಸ ಮಾಡುತ್ತಲೇ ಹೆಚ್ಚಿನ ವೇತನ ಸಿಗಬಹುದು ಎಂಬ ಕಾರಣಕ್ಕೆ ಉದ್ಯೋಗ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಅಂಥವರಿಗೆ ಆದ್ಯತೆ ನೀಡಲಾಗುವುದಿಲ್ಲ. ಟಾಟಾ ಮಾರ್ಕೊ­ಪೊಲೊ ಕಂಪೆನಿಗೆ ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ಸಾಕಷ್ಟು ಸೌಲಭ್ಯ ನೀಡಲಾಗಿದೆ. ಆದರೂ ಆ ಕಂಪೆನಿ ಉತ್ತರ ಪ್ರದೇಶ, ಪುಣೆ, ಅಹಮ­ದಾಬಾದ್‌ ಸೇರಿದಂತೆ ಇತರ ಕಡೆಗಳಿಂದ ಉದ್ಯೋಗಿಗಳನ್ನು, ವೆಲ್ಡರ್‌ಗಳನ್ನು ಕರೆದುಕೊಂಡು ಬರುತ್ತಿದೆ. ಅದನ್ನು ಬಿಟ್ಟು ಸ್ಥಳೀಯರನ್ನು ನೇಮಕಾತಿ ಮಾಡಿ­ಕೊಳ್ಳಬೇಕು’ ಎಂದು ಸಚಿವರು ಸೂಚಿಸಿದರು.
 
ಜಿಲ್ಲಾಧಿಕಾರಿ ಡಾ.ಎಸ್.ಬಿ.­ಬೊಮ್ಮನಹಳ್ಳಿ ಮತ್ತು ವಿವಿಧ ಕೈಗಾರಿಕೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.  
 
**
ಶೀಘ್ರವೇ ಬ್ಯಾಂಕರ್ಸ್‌ಗಳ ಸಭೆ 
‘ಈ ಭಾಗದ ನಿರುದ್ಯೋಗಿ ಯುವಕರು ಉದ್ಯೋಗಕ್ಕೆ ಹೊಂದಿಕೊಳ್ಳಲಿ ಎಂಬ ಉದ್ದೇಶ­ದಿಂದ ಈ ಉದ್ಯೋಗ ಉತ್ಸವವನ್ನು ಮಾಡುತ್ತ ಬರಲಾಗುತ್ತಿದೆ. ಪ್ರಥಮ ಬಾರಿಗೆ ಉದ್ಯೋಗ ಮೇಳ ಮಾಡಿ­ದಾಗ 9212 ಜನ ಉದ್ಯೋಗ ಪಡೆದುಕೊಂಡರೆ, ಎರಡನೇ ಬಾರಿಗೆ ನಡೆದ ಉದ್ಯೋಗ ಮೇಳದಲ್ಲಿ 632 ಮಂದಿ ಉದ್ಯೋಗ ಪಡೆದು­ಕೊಂಡಿದ್ದಾರೆ’ ಎಂದು ಸಚಿವ ವಿನಯ್‌ ಕುಲಕರ್ಣಿ ಅವರು ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 
‘ಈ ಹಿಂದೆ ನಡೆದ ಉದ್ಯೋಗ ಮೇಳದಲ್ಲಿ ಕೇವಲ ಐ.ಟಿ.ಐ ಮುಗಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಯಾವುದೇ ಪದವಿ ಪಡೆದ ವಿದ್ಯಾರ್ಥಿಗಳೂ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಈಗಾಗಲೇ 52 ಕಂಪೆನಿಗಳು ಮೇಳದಲ್ಲಿ ಪಾಲ್ಗೊಳ್ಳಲು ತಮ್ಮ ಹೆಸರು ನೋಂದಾಯಿಸಿವೆ’ ಎಂದರು.
 
‘ಸ್ವ ಉದ್ಯೋಗ ಕಂಡುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳಡಿ ನಿರುದ್ಯೋಗಿ ಯುವಕರು ಸಾಲ ಪಡೆದುಕೊಳ್ಳಬಹುದು. ಆದರೆ, ಕೆಲವು ಕಡೆಗಳಲ್ಲಿ ಬ್ಯಾಂಕ್‌ಗಳು ಸಾಲ ನೀಡಲು ಹಿಂಜರಿಯುತ್ತಿವೆ ಎಂಬ ಆರೋಪಗಳು ಕೇಳ ಬರುತ್ತಿದ್ದು, ಶೀಘ್ರವೇ ಬ್ಯಾಂಕರ್ಸ್‌ಗಳ ಸಭೆ ಕರೆಯಲಾಗುವುದು’ ಎಂದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.