ADVERTISEMENT

ಹಂದಿಗಳ ಸ್ಥಳಾಂತರಕ್ಕೆ ಇಂದು ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 6:42 IST
Last Updated 13 ನವೆಂಬರ್ 2017, 6:42 IST

ಧಾರವಾಡ: ಅವಳಿ ನಗರದಲ್ಲಿ ಹಂದಿಗಳ ಹಾವಳಿ ಮಿತಿಮೀರಿದ್ದು, ಇತ್ತೀಚೆಗೆ ಬಾಲಕನೊಬ್ಬನಿಗೆ ಹಂದಿ ಕಚ್ಚಿ ಗಾಯಗೊಳಿಸಿದ್ದರಿಂದ ಹಂದಿಗಳ ಸ್ಥಳಾಂತರ ವಿಷಯ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಈ ನಡುವೆ ಅವಳಿ ನಗರದಿಂದ ಹಂದಿ ಸ್ಥಳಾಂತರಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ನೀಡಿದ್ದ 30 ದಿನಗಳ ಗಡುವು ಇದೇ 13ರಂದು ಕೊನೆಗೊಳ್ಳಲಿದ್ದು, ಮರುದಿನದಿಂದಲೇ ಹಂದಿ ತೆರವಿಗೆ ಪಾಲಿಕೆ ಸಿದ್ಧತೆ ನಡೆಸಿದೆ.

ಹಂದಿಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಸಾರ್ವಜನಿಕರಿಗೆ ಹಂದಿಗಳಿಂದ ಆಗುತ್ತಿರುವ ತೊಂದರೆ ತಪ್ಪಿಸಲು ಈ ಬಾರಿ ಪಾಲಿಕೆ ಕರೆದಿರುವ ಮರು ಟೆಂಡರ್‌ಗೆ ತಮಿಳುನಾಡು ಮೂಲದ ಆರು ತಂಡಗಳು ಅರ್ಜಿ ಸಲ್ಲಿಸಿವೆ. ಹೀಗಾಗಿ ನ. 14ರಿಂದ ಹಂದಿ ಕಾರ್ಯಾಚರಣೆ ಆರಂಭಿಸುವುದಾಗಿ ಪಾಲಿಕೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಡಾ. ರವಿ ಸಾಲಿಗೌಡರ್‌, ‘ಕಳೆದ ಬಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಹಂದಿಗಳನ್ನು ಸ್ವಯಂ ಪ್ರೇರಣೆಯಿಂದ ಹೊರಗೆ ಸಾಗಿಸಲು 30 ದಿನಗಳ ಗಡುವು ನೀಡಲಾಗಿತ್ತು. ನಗರದಿಂದ 10 ಕಿ.ಮೀ. ದೂರಕ್ಕೆ ಹಂದಿಗಳನ್ನು ಸ್ಥಳಾಂತರಿಸುವ ಕುರಿತು ಹಿರಿಯ ಅಧಿಕಾರಿಗಳ ಸಲಹೆಗೆ ಹಂದಿ ಮಾಲೀಕರಿಂದ ಈವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ’ ಎಂದು ತಿಳಿಸಿದರು.

ADVERTISEMENT

‘ಬೀದಿಯಲ್ಲಿ ಹುಟ್ಟಿ, ಬೀದಿಯಲ್ಲಿ ಬೆಳೆದು, ಬೀದಿ ಬದಿ ಸಿಗುವ ಆಹಾರವನ್ನೇ ಸೇವಿಸುವ ಹಂದಿಗಳಿಗೆ ಯಾವುದೇ ಮಾಲೀಕರು ಇರುವುದಿಲ್ಲ. ಅವುಗಳನ್ನು ತೆರವುಗೊಳಿಸುವ ಸಂಪೂರ್ಣ ಅಧಿಕಾರ ಪಾಲಿಕೆಗೆ ಇದೆ. ಜತೆಗೆ ಕೆಎಂಸಿ ಕಾಯ್ದೆ 334, 335 ಹಾಗೂ 336ರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಹಂದಿ ಸಾಕಾಣಿಕೆಗೆ ಅವಕಾಶ ಇಲ್ಲ.
ಕಾಯ್ದೆಯಂತೆ ಪಾಲಿಕೆ ನಡೆದುಕೊಳ್ಳುತ್ತಿದೆ. ಆಯುಕ್ತರಿಂದಲೂ ಹಂದಿ ತೆರವಿಗೆ ಸ್ಪಷ್ಟ ನಿರ್ದೇಶನವಿದೆ’ ಎಂದು ಹೇಳಿದರು.

‘ಹಂದಿಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತಿದ್ದು, ಪ್ರತಿ ಎರಡು ತಿಂಗಳಿಗೆ ಹಂದಿಗಳ ಸಂಖ್ಯೆ 5ರಿಂದ 8ಪಟ್ಟು ಹೆಚ್ಚಾಗುತ್ತಿದೆ. ಅವಳಿ ನಗರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹಂದಿಗಳಿವೆ. ಯಾವುದೇ ಖರ್ಚಿಲ್ಲದೆ ಹಂದಿಯನ್ನು ಸ್ಥಳಾಂತರಿಸುವುದು ಪಾಲಿಕೆಯ ನಿರ್ಧಾರ. ಆದರೆ, ಈ ಕಾರ್ಯದಲ್ಲಿ ಹಂದಿ ಹಿಡಿಯುವ ತಂಡಕ್ಕೆ ಸೂಕ್ತ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಯೂ ಸಮ್ಮತಿ ಸೂಚಿಸಿದೆ.

ಹಂದಿ ಹಿಡಿಯುವವರ ಸಂಬಳ, ಅವುಗಳ ಸಾಗಾಣಿಕೆಯ ವೆಚ್ಚ, ಊಟ ತಿಂಡಿ ಇತ್ಯಾದಿಗಳ ಖರ್ಚು ಈ ತಂಡಗಳದ್ದೇ ಹೊರತು, ಪಾಲಿಕೆಯದ್ದಲ್ಲ’ ಎಂದು ಸ್ಪಷ್ಟಪಡಿಸಿದರು.
’ನಗರದ ಮಂಡಕ್ಕಿ ಭಟ್ಟಿ ಬಳಿ ಹಂದಿಗಳ ಹಾವಳಿ ವಿಪರೀತ ಹೆಚ್ಚಾಗಿದೆ. ಇಲ್ಲಿ ನೂರಕ್ಕೂ ಹೆಚ್ಚು ಮನೆಗಳಿವೆ. ಮಕ್ಕಳು ಇಲ್ಲಿ ಓಡಾಡುತ್ತಿರುತ್ತಾರೆ. ಪಾಲಿಕೆ ಕಸವನ್ನು ತಂದು ಇಲ್ಲೇ ಸುರಿಯುತ್ತಾರೆ.

ಪ್ರಾಣಿಗಳು ಸತ್ತರೂ ಇಲ್ಲಿಗೆ ತಂದು ಹಾಕುತ್ತಾರೆ. ಹೀಗಾಗಿ ಹಂದಿಗಳಿಗೆ ಪುಷ್ಕಳ ಭೋಜನ ಇಲ್ಲಿ ಸಿಗುತ್ತಿದೆ. ಮುಖ್ಯ ರಸ್ತೆಯಲ್ಲಿ ಹಂದಿಗಳನ್ನು ಹಿಡಿಯುವ ಕಸರತ್ತು ನಡೆಸುವ ಪಾಲಿಕೆ ಸಿಬ್ಬಂದಿಗೆ, ಒಳಗೆ ಹಿಂಡು ಹಿಂಡಾಗಿ ಹಂದಿಗಳಿದ್ದರೂ ಕಣ್ಣು ಹಾಯಿಸದಿರುವುದು ಆಶ್ಚರ್ಯದ ಸಂಗತಿ’ ಎಂದು ಮಂಡಕ್ಕಿ ಭಟ್ಟಿ ಕಾರ್ಮಿಕ ಜೈಲಾನಂದ ಹೇಳಿದರು.

‘ನಗರದಲ್ಲಿ ಪಾಳು ಬಿದ್ದ ಪ್ರದೇಶಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲಿ ಗಿಡ ಗಂಟಿಗಳು ಹೆಚ್ಚಾಗಿ ಬೆಳೆದಿವೆ. ಅಂಥ ಜಾಗಗಳನ್ನು ಶುಚಿಗೊಳಿಸದ ಕಾರಣ ಅವುಗಳು ಹಂದಿಗಳ ಆವಾಸಸ್ಥಾನಗಳಾಗಿ ಪರಿವರ್ತನೆಗೊಂಡಿವೆ. ಇದು ಪರೋಕ್ಷವಾಗಿ ಹಂದಿ ಮಾಲೀಕರಿಗೆ ಖರ್ಚಿಲ್ಲದ ದುಡಿಮೆಯಾಗಿದೆ.ಇದನ್ನು ಪಾಲಿಕೆ ಪರಿಹರಿಸಲೇಬೇಕು’ ಎಂದು ನಿಜಾಮುದ್ದೀನ್ ನಗರ ನಿವಾಸಿ ನಾಗರಾಜ ಒತ್ತಾಯಿಸಿದರು.

‘ಎಲ್ಲೆಂದರಲ್ಲಿ ಇರುವ ಹಂದಿಗಳಿಂದಾಗಿ ಅನಾರೋಗ್ಯವೂ ಹೆಚ್ಚಾಗುತ್ತಿದೆ. ಮಕ್ಕಳನ್ನು ಹೊರಗೆ ಬಿಡಲು ಹೆದರಿಕೆಯಾಗುತ್ತದೆ’ ಎಂದು ಚನ್ನಬಸಪ್ಪ ಗೋಕಾಕ ಆತಂಕ ವ್ಯಕ್ತಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.