ADVERTISEMENT

ಹನಿ ನೀರಾವರಿಗೆ ಆದ್ಯತೆ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 6:03 IST
Last Updated 26 ಜುಲೈ 2017, 6:03 IST

ಧಾರವಾಡ: ರೈತರ ಯಾಂತ್ರಿಕ ಜೀವನ ಹಾಗೂ ದುರಾಸೆ ಮನೋಭಾವನೆಯಿಂದ ಗ್ರಾಮೀಣ ಪ್ರದೇಶದಲ್ಲಿನ ಕೃಷಿ ಸಂಸ್ಕೃತಿ ಕೆಡುತ್ತಿದೆ’ ಎಂದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ವಿಷಾದಿಸಿದರು. ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಧಾರವಾಡ ತಾಲ್ಲೂಕಿನ ಸಮಗ್ರ ಕೃಷಿ ಅಭಿಯಾನ ಮತ್ತು ಸಾವಯುವ ಹಾಗೂ ಸಿರಿಧಾನ್ಯ ಮೇಳವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರು ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ನಾನ್ನುಡಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ದುರಾಸೆಯಿಂದ ಸಾಲ ಮಾಡಿ ಆತ್ಮಹತ್ಯೆಗೆ ಮುಂದಾಗಬಾರದು. ಮಳೆ ಅಭಾವ, ಬರಗಾಲ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಕೃಷಿಕರು ಸಾವಯವ ಪದ್ಧತಿಯಡಿ ಸಿರಿಧಾನ್ಯಗಳನ್ನು ಬೆಳೆದು ಲಾಭ ಮಾಡಿಕೊಳ್ಳಬೇಕು. ಜತೆಗೆ ಹನಿ ನೀರಾವರಿಗೆ ಆದ್ಯತೆ ನೀಡಬೇಕು’ ಎಂದರು.

‘ರೈತರು ಬದಲಾಗಬೇಕಿದೆ. ಪ್ರತಿಯೊಬ್ಬರು ತಮ್ಮ ಜಮೀನಿನಲ್ಲಿ ಅಗತ್ಯವಿರುವ ದಿನನಿತ್ಯ ಬಳಕೆಯ ದವಸಧಾನ್ಯ ಹಾಗೂ ತರಕಾರಿಗಳನ್ನು ತಾವೇ ಬೆಳೆದುಕೊಳ್ಳಬೇಕು. ಕೇವಲ ಕಬ್ಬು, ಹತ್ತಿ, ಗೋವಿನ ಜೋಳ ಬೆಳೆಯುವ ಬದಲು ಆಸಕ್ತಿಯಿಂದ ಸಾವಯುವ ಬೆಳೆಗಳನ್ನು ಬೆಳೆಯಬೇಕು’ ಎಂದರು.

ADVERTISEMENT

‘ಹಿಂದೆ ಸಹಜವಾಗಿ ಬಳಸುತ್ತಿದ್ದ ನವಣೆ, ಸಜ್ಜೆ, ಹಾರಕ, ಸಾವೆ ಮೊದಲಾದ ಕಿರುಧಾನ್ಯಗಳು ಇತ್ತೀಚೆಗೆ ವಿರಳವಾಗಿವೆ. ಬದಲಾದ ಸಂದರ್ಭದಲ್ಲಿ ಆರೋಗ್ಯದ ದೃಷ್ಟಿಯಿಂದ ಮತ್ತೆ ಅವುಗಳಿಗೆ ಬೇಡಿಕೆಯಾಗಿದೆ. ಕಡಿಮೆ ಮಳೆ ಮತ್ತು ಬರದ ಸಂದರ್ಭದಲ್ಲಿಯೂ ಇವುಗಳನ್ನು ಬೆಳೆಯಬಹುದು. ರೈತರು ನಮಗೆ ಬೇಕಾದ ಆಹಾರ ಧಾನ್ಯಗಳ ಜತೆಗೆ ಪಶುಗಳಿಗೆ ಅಗತ್ಯವಿರುವ ಮೇವನ್ನು ಸಹ ಬೆಳೆಯಬೇಕು. ಅಂದಾಗ ಮಾತ್ರ ರೈತರು ಸ್ವಾವಲಂಬಿ ಬದುಕು ಸಾಗಿಸಲು ಸಾಧ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಕೃಷಿಯ ಜತೆಗೆ ಹೈನುಗಾರಿಕೆ, ಕೋಳಿ, ಕುರಿ ಸಾಗಾಣಿಕೆ ಮಾಡಿದರೆ ಆದಾಯದ ಮೂಲ ಹೆಚ್ಚಿಸಿಕೊಳ್ಳಬಹುದು. ಸರ್ಕಾರ ಹನಿ ನೀರಾವರಿ ಯೋಜನೆಗೆ ಶೇ 90ರಷ್ಟು ಸಹಾಯಧನ ನೀಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ವಿನಯ ಕುಲಕರ್ಣಿ ಹೇಳಿದರು.

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಮುಳಮುತ್ತಲ ಗ್ರಾಮದ ಹನುಮಂತಪ್ಪ ಕರಾಳೆ ಅವರ ಪತ್ನಿ ಯಮನವ್ವ ಅವರಿಗೆ ₹ 5 ಲಕ್ಷ ಪರಿಹಾರದ ಚೆಕ್ ಹಾಗೂ ಮಾಸಿಕ ₹ 2 ಸಾವಿರ ಮಾಸಾಶನದ ಪ್ರಮಾಣ ಪತ್ರ ನೀಡಿದರು. ಅಲ್ಲದೇ ರೈತರಿಗೆ ಯಂತ್ರೋಪಕರಣಗಳು, ಕೃಷಿಭಾಗ್ಯ ಯೋಜನೆಯ ಪ್ರೋತ್ಸಾಹ ಧನವನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.