ADVERTISEMENT

ಹವಾಮಾನ ಬೆಳೆವಿಮೆ ಗೊಂದಲ ಸರಿಪಡಿಸಲು ಕೋನರಡ್ಡಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಮೇ 2015, 7:08 IST
Last Updated 26 ಮೇ 2015, 7:08 IST

ಧಾರವಾಡ: ‘ಕಳೆದ ಸಾಲಿನಲ್ಲಿ ಮುಂಗಾರು ಹವಾಮಾನ ಬೆಳೆವಿಮೆ ಪರಿಹಾರ ನೀಡುವಲ್ಲಿ ಉಂಟಾದ ಗೊಂದಲವನ್ನು ಸರಿಪಡಿಸಬೇಕು ಹಾಗೂ ಬೆಳೆ ಹಾನಿಗೀಡಾದ ಸಂದರ್ಭದಲ್ಲಿ ಸರ್ಕಾರ ಬೆಳೆವಿಮೆ ನೀಡುತ್ತಿದೆ.

ಸರ್ಕಾರ ಮೊದಲು ರೈತರಿಗೆ ಎಕರೆ ಇಂತಿಷ್ಟರಂತೆ ಹಣವನ್ನು ತುಂಬಿಸಿಕೊಂಡು ನಂತರ ಆ ಆಧಾರದ ಮೇಲೆ ವಿಮೆಯನ್ನು ನೀಡುತ್ತದೆ ಈ ಪ್ರಕ್ರಿಯೆಯನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿ ಶಾಸಕ ಎನ್‌.ಎಚ್‌.ಕೋನರಡ್ಡಿ ಅವರು ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್‌ ಅವರಿಗೆ ಮನವಿ ಸಲ್ಲಿಸಿದರು.

‘ಪ್ರಸಕ್ತ ವರ್ಷದ ಹವಾಮಾನ ಬೆಳವಿಮೆಯಿಂದಾಗಿ ಸಾಕಷ್ಟು ಜನ ರೈತರು ಅನ್ಯಾಯಕ್ಕೊಳಗಾಗಿದ್ದಾರೆ. ಅದರಲ್ಲಿ ಉಂಟಾದ ಗೊಂದಲವನ್ನು ಸರಿಪಡಿಸುವುದು ಸರ್ಕಾರದ ಬಹಳ ಅವಶ್ಯವಾದ ಕೆಲಸವಾಗಿದೆ. ಈ ವರ್ಷ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.

ಆದ್ದರಿಂದ ಸರ್ಕಾರ, ರೈತರು ಸಾಲ ಪಡೆಯುವಾಗ ಬ್ಯಾಂಕಿನವರು ಕಡ್ಡಾಯವಾಗಿ ಬೆಳೆವಿಮೆ ತುಂಬಿಸಿಕೊಳ್ಳುತ್ತಾರೆ. ಕೋಟಿಗಟ್ಟಲೇ ಬೆಳೆವಿಮೆ ಪ್ರೀಮಿಯಂ ಪಾವತಿಸಿದರೂ ಕೂಡ ರೈತರಿಗೆ ಈ ಸಲದ ಹವಾಮಾನ ಬೆಳೆವಿಮೆ ಪರಿಹಾರ ದೊರಕದೇ ಸಮಸ್ಯೆಯಾಗಿದೆ.

ಆದ್ದರಿಂದ ರಾಜ್ಯ ಸರ್ಕಾರ ಹವಾಮಾನ ಬೆಳೆವಿಮೆ ತುಂಬುವುದನ್ನು ಕಡ್ಡಾಯ­ಗೊಳಿಸಿರುವುದನ್ನು ರದ್ದುಪಡಿಸಿ, ರೈತರ ವಿವೇಚನೆಗೆ ಬಿಡಬೇಕು. ಬಹಳಷ್ಟು ರೈತರಿಗೆ ತಾವು ಕಟ್ಟಿದ ಬೆಳೆ ವಿಮೆ ಕಂತು ಸಹಿತ ವಾಪಸ್ಸು ಬಂದಿಲ್ಲ.

ಇದೊಂದು ಲಾಟರಿ ದಂಧೆಯಾದಂತಾಗಿದೆ. ಆದ್ದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಬೆಳೆವಿಮೆ ದೊರಕುವಂತೆ ಮಾಡಬೇಕು’ ಎಂದು ಕೋನರಡ್ಡಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.