ADVERTISEMENT

ಹುಬ್ಬಳ್ಳಿಯಲ್ಲಿ ಬೈಕ್‌, ಕಾರಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 7:12 IST
Last Updated 22 ಮಾರ್ಚ್ 2017, 7:12 IST

ಹುಬ್ಬಳ್ಳಿ: ಮನೆ ಮುಂದೆ ನಿಲ್ಲಿಸಿದ್ದ 6 ಬೈಕ್ ಹಾಗೂ ಕಾರೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಹಳೆ ಹುಬ್ಬಳ್ಳಿ ಕಮಾನಗಾರ ಪಾರ್ಕ್‌ನಲ್ಲಿ ಮಂಗಳವಾರ ನಸುಕಿನಲ್ಲಿ ನಡೆದಿದೆ.

ಮನೆ ಮುಂದೆ ಒಂದೇ ಸಾಲಿನಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ಅವುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸಮೀಪದಲ್ಲೇ ನಿಲ್ಲಿಸಿದ್ದ ಕಾರೊಂದು ಭಾಗಶಃ ಸುಟ್ಟಿದೆ.

ಕಮಾನಗಾರ ಪಾರ್ಕ್‌ ನಿವಾಸಿ ಜಾಕೀರ್ ಹುಸೇನ್ ಅವರಿಗೆ ಕಾರು ಸೇರಿದ್ದು, ಫಿರೋಜ್ ಬಳ್ಳಾರಿ, ನೂರ್ ಅಹ್ಮದ್ ಅವರಿಗೆ ಸೇರಿದ ಬೈಕ್‌ಗಳು ಬೆಂಕಿಗೆ ಆಹುತಿಯಾಗಿವೆ.

ವಾಹನಗಳಿಗೆ ಬೆಂಕಿ ಹಚ್ಚಿದ ಬಳಿಕ ಪಕ್ಕದಲ್ಲಿಯೇ ಇದ್ದ ನಿರ್ಮಾಣ ಹಂತದ ಕಟ್ಟಡದಲ್ಲಿನ ಬೆಲೆಬಾಳುವ ಎಲೆಕ್ಟ್ರಿಕ್ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ (ಅಪರಾಧ–ಸಂಚಾರ) ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು. ಕಸಬಾಪೇಟೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವೈದ್ಯರ ನಿರ್ಲಕ್ಷ್ಯದ ವಿರುದ್ಧ ಪ್ರಕರಣ
ಹೆಗ್ಗೇರಿ ನಿವಾಸಿ ಸಂಜು ಬಸಪ್ಪ ಕಾವಲ್‌ (23) ಎಂಬುವವರಿಗೆ ಕಿಮ್ಸ್‌ ಆಸ್ಪತ್ರೆ ವೈದ್ಯರು ತಪ್ಪು ಚುಚ್ಚುಮದ್ದು ನೀಡಿದ್ದಾರೆ ಎಂದು ಆರೋಪಿಸಿ ಸಂಜು ತಾಯಿ ರತ್ನವ್ವ ವಿದ್ಯಾನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅನಾರೋಗ್ಯದಿಂದಾಗಿ ದಾಖಲಾಗಿದ್ದ ಯುವಕ ಸಂಜುಗೆ ವೈದ್ಯ ಡಾ. ದುರ್ಗಾಪ್ರಸಾದ ಕಬಾಡೆ ಹಾಗೂ ಸ್ಟಾಫ್‌ ನರ್ಸ್‌ ಒಬ್ಬರು ನಿರ್ಲಕ್ಷ್ಯದಿಂದ ಸೋಮವಾರ ಬೆಳಿಗ್ಗೆ ಚುಚ್ಚುಮದ್ದು ನೀಡಿದ ಪರಿಣಾಮ ಸಾವಿಗೀಡಾದ ಎಂದು ರತ್ನವ್ವ ದೂರಿನಲ್ಲಿ ತಿಳಿಸಿದ್ದಾರೆ.

ಜೂಜಾಟ: ಇಬ್ಬರ ಬಂಧನ: ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರನ್ನು ಕೇಶ್ವಾಪುರ ಠಾಣೆಯ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ.
ಕೇಶ್ವಾಪುರದ ನಿವಾಸಿ ಸಿದ್ದಪ್ಪ ಬಡಕಣ್ಣವರ ಹಾಗೂ ಕೇಶ್ವಾಪುರ ಕಾಲೊನಿ ನಿವಾಸಿ ಉತ್ತಮಶೇಖ ಸಾಗರ ಬಂಧಿತರು. ಇವರಿಂದ ₹ 2,200 ನಗದು ವಶಪಡಿಸಿಕೊಳ್ಳಲಾಗಿದೆ.

ಅಪಘಾತಕ್ಕೀಡಾದ ಡಿಡಿಪಿಐ ಕಾರು
ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್‌.ಎಚ್‌.ನಾಗೂರ ಅವರ ಕಾರು ಸೋಮವಾರ ಮಧ್ಯಾಹ್ನ ಇಲ್ಲಿನ ಜೆಎಸ್‌ಎಸ್‌ ಕಾಲೇಜು ಬಳಿ ಅಪಘಾತಕ್ಕೀಡಾಗಿದ್ದು, ನಾಗೂರ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿದೆ.

ನಾಗೂರ ಅವರು ಕಾರಿನಲ್ಲಿ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದರು. ಚಾಲಕ ತನ್ನ ಮುಂದೆ ಹೊರಟಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ನಾಗೂರ ಅವರ ಕುತ್ತಿಗೆ ಭಾಗಕ್ಕೆ ಪೆಟ್ಟಾಗಿದ್ದು, ಅವರನ್ನು ಚಿಕಿತ್ಸೆಗೆ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನ ಚಾಲಕನ ಕಣ್ಣು ಹಾಗೂ ಮೊಣಕಾಲಿಗೆ ಪೆಟ್ಟಾಗಿದೆ. ಕಾರು ಮುಂದೆ ಹೊರಟಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅದರ ಮುಂಭಾಗ ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಪಘಾತ: ಆರು ಜನರಿಗೆ ಗಾಯ
ಧಾರವಾಡ: 
ಟೆಂಪೊ ಮತ್ತು ಲಾರಿ ಚಾಸಿ ನಡುವೆ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಗಳಾದ ಘಟನೆ ಧಾರವಾಡ– ಬೆಳಗಾವಿ ರಸ್ತೆಯ ಮುಮ್ಮಿಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಗಾಯಗೊಂಡವರು ನರೇಂದ್ರ, ಮಂಗಳಗಟ್ಟಿ ಊರಿನವರು ಎಂದು ತಿಳಿದುಬಂದಿದೆ. ಇವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಟೆಂಪೊ ಧಾರವಾಡದ ಕಡೆಯಿಂದ ಬೇಲೂರು ಕಡೆ ಮತ್ತು ಲಾರಿಯು ಡೀಸೆಲ್‌ ತುಂಬಿಸಿಕೊಂಡು ಧಾರವಾಡದ ಶೋರೂಮ್‌ಗೆ ಡೆಲಿವರಿ ನೀಡಲು ಬರುತ್ತಿತ್ತು.
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.