ADVERTISEMENT

‘ಮಹಿಳೆಗೆ ಸ್ಥೈರ್ಯ ತುಂಬಿ’

​ಪ್ರಜಾವಾಣಿ ವಾರ್ತೆ
Published 24 ಮೇ 2016, 5:52 IST
Last Updated 24 ಮೇ 2016, 5:52 IST

ನವಲಗುಂದ: ‘ಮಹಿಳೆಯರಿಗೆ ಮೀಸಲಾತಿ ಸಿಗಬೇಕೆಂದು ಕೇವಲ ಭಾಷಣ ಮಾಡಿದರೆ ಸಾಲದು. ಅವರಿಗೆ ಆತ್ಮಸ್ಥೈರ್ಯ ತುಂಬಿ ಪ್ರತಿಭೆಯನ್ನು ಗುರುತಿಸಿ ಮುಖ್ಯವಾಹಿನಿಗೆ ಕರೆ ತಂದಾಗ ಅದಕ್ಕೊಂದು ಅರ್ಥ ಬರುತ್ತದೆ. ಅಂತಹ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಹೇಳಿದರು. 

ತಾಲ್ಲೂಕಿನ ತಿರ್ಲಾಪೂರ ಗ್ರಾಮದ ಶರಣ ಬಸವೇಶ್ವರ ಕಲ್ಯಾಣ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯವರು ಏರ್ಪಡಿಸಿದ್ದ ಮಹಿಳಾ ಸಂಘಟನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಗ್ರಾಮೀಣ ಭಾಗದ ಮಹಿಳೆಯರಿಗೆ ಅಗ್ರಸ್ಥಾನ ಕೊಟ್ಟು ಉತ್ತಮ ವೇದಿಕೆ ಕಲ್ಪಿಸಿ ಪ್ರತಿಭೆಗಳನ್ನು ಹೊರತರುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯ­ಕ್ರಮಗಳಿಗೆ ಮಹಿಳೆಯರು ಸಹಕರಿ­ಸಬೇಕು ಎಂದು ಕರೆ ನೀಡಿದರು. ಗ್ರಾಮ ಪಂಚಾಯ್ತಿ ಸದಸ್ಯೆ ಪ್ರಭಾವತಿ ಕಮತರ ಕಾರ್ಯಕ್ರಮ ಉದ್ಘಾಟಿಸಿದರು.

ಜ್ಞಾನವಿಕಾಸ ಸಮನ್ವಯಾಧಿಕಾರಿ ವನಜಾಕ್ಷಿ ಮಾತನಾಡಿ, ಜ್ಞಾನ ವಿಕಾಸ ಕೇಂದ್ರಗಳ ಉದ್ದೇಶಗಳ ಕುರಿತು ತಿಳಿಸಿ ಮಹಿಳೆಯರು ತಮ್ಮಲ್ಲಿರುವ ಪ್ರತಿಭೆಗಳನ್ನು ಈ ಕೇಂದ್ರದ ಮೂಲಕ ವ್ಯಕ್ತಪಡಿಸಿ ಗುರುತಿಸಿಕೊಳ್ಳಬೇಕು.

ಈಗಿನ ಸಮಾಜದಲ್ಲಿ ಮಹಿಳೆಯರಿಗೆ ತಿಳುವಳಿಕೆಯ ಜ್ಞಾನ ಅವಶ್ಯವಾ­ಗಿರುವುದರಿಂದ ಮಹಿಳೆ­ಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಏರ್ಪಡಿಸಿ ಅನುಭವ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ತಿಳಿಸಲಾಗುವುದು ಎಂದು ಹೇಳಿದರು.

ಹೆಣ್ಣು ಕುಟುಂಬದ ಕಣ್ಣಾಗಿ ತನ್ನ ಕುಟುಂಬ ನಡೆಸಿಕೊಂಡು ಹೋಗುವ ಉದ್ದೇಶದಿಂದ  ಹೇಮಾವತಿ ಅಮ್ಮನವರು ಸರ್ವಾಂಗೀಣ ಅಭಿವೃದ್ಧಿ ಶ್ರಮಿಸಲು ದಾರಿ ಮಾಡಿಕೊಟ್ಟ ಈ ಕೇಂದ್ರವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವಂತೆ ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಸದಸ್ಯ ಜಗದೀಶ ಕುಂಬಾರ ಪಾಲ್ಗೊಂಡಿದ್ದರು. ಸೇವಾ ಪ್ರತಿನಿಧಿಗಳಾದ ನೀಲಾ ಸ್ವಾಗತಿಸಿದರು, ಶಾಂತಾ ನಿರೂಪಿಸಿದರು. ಜ್ಯೋತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.