ADVERTISEMENT

‘ಸೈಬರ್‌ ಕೆಫೆಯಲ್ಲಿ ನಡೆದ ಪಂಚನಾಮೆ ನಕಲಿ’

ಮುಂದುವರಿದ ಶಂಕಿತ ಸಿಮಿ ಉಗ್ರರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2014, 9:48 IST
Last Updated 27 ಆಗಸ್ಟ್ 2014, 9:48 IST

ಹುಬ್ಬಳ್ಳಿ: ‘ನಗರದ ಸೈಬರ್‌ ಕೆಫೆಗಳಲ್ಲಿ ಹಾರ್ಡ್‌ ಡಿಸ್ಕ್‌ ಸೇರಿದಂತೆ ಕಂಪ್ಯೂಟರ್‌ ಭಾಗಗಳನ್ನು ವಶಪಡಿಸಿಕೊಳ್ಳದೇ ಬೇರೆ ಕಡೆಯಿಂದ ತಂದಿರುವ ಕಂಪ್ಯೂಟರ್‌ ಭಾಗಗಳನ್ನು ಉದ್ದೇಶಪೂರ್ವಕವಾಗಿ ವಶಪಡಿಸಿಕೊಂಡ ವಸ್ತುಗಳು ಎಂದು ತೋರಿಸಿ ನಕಲಿ ಪಂಚನಾಮೆ ಮಾಡಲಾಗಿದೆ’ ಎಂದು ಸಿಮಿ ಸಂಘಟನೆಯ ಶಂಕಿತ ಉಗ್ರರ ಪರ ವಕೀಲ ಕೆ.ಎಂ. ಶೀರಳ್ಳಿ ಪ್ರಶ್ನಿಸಿದರು.

ದಕ್ಷಿಣ ಭಾರತದ ವಿವಿಧೆಡೆ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದಡಿ ಸಿಮಿ ಸಂಘಟನೆಯ ಶಂಕಿತ ಉಗ್ರರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಗೋಪಾಲಕೃಷ್ಣ ಕೊಳ್ಳಿ ಅವರು ನಡೆಸಿದ ವಿಚಾರಣೆ ಅಂಗವಾಗಿ ಸೋಮವಾರ ನಡೆದ ಪಾಟಿ ಸವಾಲಿನಲ್ಲಿ ಬಂಧಿತ ಆರೋಪಿಗಳ ಪರ ವಕೀಲರು ಆಗಿನ ತನಿಖಾಧಿಕಾರಿ ಹಾಗೂ ನಿವೃತ್ತ ಡಿಎಸ್‌ಪಿ ಎಸ್‌.ಎಸ್‌. ಖೋತ್‌ ಅವರನ್ನು ಪ್ರಶ್ನಿಸಿದರು.

ನಗರದ ಸೈಬರ್‌ ಕೆಫೆಯೊಂದರಿಂದ ಆ ವಸ್ತುಗ ಳನ್ನು ವಶಪಡಿಸಿಕೊಂಡಿಲ್ಲವಾದ್ದರಿಂದ ಅಂಗ ಡಿಯ ಮಾಲೀಕರಿಂದ ಕಂಪ್ಯೂಟರ್‌ ಭಾಗಗಳನ್ನು ವಶಪಡಿಸಿಕೊಂಡಿದ್ದಕ್ಕೆ ರಶೀದಿಯನ್ನಾಗಲಿ ಇತರೆ ಯಾವುದೇ ದಾಖಲೆಯನ್ನು ಪಡೆದಿಲ್ಲ. ಅಲ್ಲದೇ ಈ ಭಾಗಗಳು ಅದೇ ಸೈಬರ್‌ ಕೆಫೆಯಲ್ಲಿ ವಶಪಡಿಸಿ ಕೊಂಡಿದ್ದು ಎನ್ನುವುದಕ್ಕೆ ಪಂಚನಾಮೆ ಹೊರತು ಪಡಿಸಿ ಬೇರೆ ದಾಖಲೆಗಳಿಲ್ಲ ಎಂದು ಪಾಟಿ ಸವಾಲು ಹಾಕಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಖೋತ್‌, ತನಿಖೆಯ ವೇಳೆ ಆರೋಪಿಯೇ ಸೈಬರ್‌ಕೆಫೆಗೆ ಕರೆದುಕೊಂಡು ಹೋಗಿದ್ದಾಗಿ, ಹಾಗೂ ಪಂಚನಾಮೆ ನಡೆಸಿದ್ದನ್ನು ಸಮರ್ಥಿಸಿಕೊಂಡರು. 

‘ಹಳ್ಳಿಗೇರಿ ಕ್ರಾಸ್‌ ಬಳಿಯ ಅರಣ್ಯದಲ್ಲಿ ಸಿಕ್ಕ ಕೈಬಾಂಬ್‌, ಜಿಲಾಟಿನ್‌ ಕಡ್ಡಿಗಳು, ಡಿಟೊನೇ ಟರ್ಸ್‌ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಕಲ್ಲು ಗಣಿಗಾರಿಕೆ ನಡೆಸುವವರ ಬಳಿ ಪಡೆದು ತಂದು ಇವುಗಳನ್ನು ಪೊಲೀಸರೇ ಉದ್ದೇಶಪೂರ್ವಕವಾಗಿ ಇಟ್ಟಿದ್ದರು’ ಎಂದು ಶೀರಳ್ಳಿ ಪ್ರಶ್ನಿಸಿದರು. ಜಿಲೆಟಿನ್‌ ಕಡ್ಡಿಗಳನ್ನು ಮಾತ್ರ ಕಲ್ಲುಗಣಿಗಾರಿ ಕೆಗೆ ಬಳಸುತ್ತಾರೆ ಹೊರತು ಕೈಬಾಂಬ್‌ ಹಾಗೂ ಎಲೆಕ್ಟ್ರಾನಿಕ್ ಡಿಟೋನೆಟರ್‌ಗಳನ್ನು ಬಳಸುವುದಿಲ್ಲ ಎಂದು ಪಾಟಿ ಸವಾಲಿಗೆ  ಉತ್ತರಿಸಿದರು.

ನಂತರ ನ್ಯಾಯಾಧೀಶ ಗೋಪಾಲಕೃಷ್ಣ ಕೊಳ್ಳಿ ಅವರು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು. ಸರ್ಕಾರಿ ವಕೀಲ ಡಿ.ಎ. ಭಾಂಡೇಕರ್ ಹಾಗೂ ಆರೋಪಿಗಳ ಪರ ವಕೀಲ ಇಸ್ಮಾಯಿಲ್‌ ಜಾಲಗಾರ ಇದ್ದರು.

ಯಾಸೀನ್‌ ಭಟ್ಕಳ್‌ ವಿಡಿಯೊ ಕಾನ್ಫರೆನ್ಸ್‌
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ತಿಹಾರ್‌ ಜೈಲಿನಲ್ಲಿರುವ ಆರೋಪಿ ಯಾಸೀನ್‌ ಭಟ್ಕಳ್‌ ಅನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಗರದ ಒಂದನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಸೋಮವಾರ ಹಾಜರುಪಡಿಸಲಾಯಿತು.

ಈ ವೇಳೆ ಆರೋಪಿಯ ಮುಂದುವರಿದ ತನಿಖೆಯನ್ನು  ಖುದ್ದಾಗಿ ನಡೆಸಲು ಅನುಮತಿ ನೀಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಲು ತನಿಖಾಧಿಕಾರಿ ಪರವಾಗಿ ಸಿಐಡಿ ಧಾರವಾಡ ವಿಭಾಗದ ಡಿವೈಎಸ್‌ಪಿ ವಿ.ವಿ. ಕುಂಬಾರ ಮುಂದಾದರು. ತನಿಖಾಧಿಕಾರಿಯೇ ಖುದ್ದು ಹಾಜರಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಾಧೀಶೆ ಪದ್ಮಶ್ರೀ ಎ ಮುನೋಳಿ, ವಿಚಾರಣೆಯನ್ನು ಸೆಪ್ಟಂಬರ್‌ 17ಕ್ಕೆ ಮುಂದೂಡಿದರು.

ಬೆಂಗಳೂರಿನ ಸಿಐಡಿ ಡಿವೈಎಸ್‌ಪಿ ಲೋಕೇಶ್‌ ಅವರು ಆರೋಪಿ ಯಾಸಿನ್‌ ಭಟ್ಕಳ್‌ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.
ವಿಡಿಯೊ ಕಾನ್ಫರೆನ್ಸ್‌ ವೇಳೆ ಸಹಾಯಕ ಸರ್ಕಾರಿ ವಕೀಲ ಶ್ರೀಕಾಂತ ದಯನ್ನವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT