ADVERTISEMENT

‘ಗೋವಾ‌ ತಂಡ ಕದ್ದುಮುಚ್ಚಿ ಬರುವುದು ಬೇಡ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 9:57 IST
Last Updated 29 ಜನವರಿ 2018, 9:57 IST

ಧಾರವಾಡ: ‘ರಾಜ್ಯದ ಗಡಿಯೊಳಗೆ ಇರುವ ಕಳಸಾ, ಬಂಡೂರಿ ಹಾಗೂ ಮಹದಾಯಿ ನದಿ ಪಾತ್ರದ ಪ್ರದೇಶಗಳಿಗೆ ಗೋವಾ ವಿಧಾನಸಭಾಧ್ಯಕ್ಷರ ನೇತೃತ್ವದ ತಂಡ ಭೇಟಿ ನೀಡುವ ಮೊದಲು ನಮಗೆ ತಿಳಿಸಿದ್ದರೆ ಸೂಕ್ತ ವ್ಯವಸ್ಥೆ ಮಾಡುತ್ತಿದ್ದೆವು. ಆದರೆ ಕದ್ದುಮುಚ್ಚಿ ಬರುವ ಅಗತ್ಯ ಇರಲಿಲ್ಲ’ ಎಂದು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.

ಧಾರವಾಡದ ಸರ್ಕಿಟ್ ಹೌಸ್‌ನಲ್ಲಿ ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹದಾಯಿ ಪ್ರದೇಶಕ್ಕೆ ಭೇಟಿ ನೀಡಲು ಬರುವವರಿಗೆ ನಮ್ಮ ಸ್ವಾಗತವಿದೆ. ಈ ‍ಪ್ರದೇಶ ನೋಡಲು ಮುಕ್ತ ಅವಕಾಶವಿದೆ. ಈ ಪ್ರದೇಶದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ ಎಂದು ಹೇಳಿದರು.

ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್ ಅವರು ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿರುವ ಹೇಳಿಕೆಗೆ ರಾಜ್ಯದ ಬಿಜೆಪಿ ಮುಖಂಡರೇ ಉತ್ತರ ನೀಡಬೇಕು’ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವುದೇ ಕಾರಣಕ್ಕೂ ನಾನು ಜೆಡಿಎಸ್‌ ಸೇರುವುದಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿಯೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಹಾಗೂ ಯಮಕನಮರಡಿ ಕ್ಷೇತ್ರದಿಂದಲೇ ನಾನು ಸ್ಪರ್ಧೆ ಮಾಡಲಿದ್ದು, ನನ್ನ ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದೆ’ ಎಂದು ಹೇಳಿದರು.

‘ಎಲ್ಲ ರಾಜಕೀಯ ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ನಮ್ಮ ಪಕ್ಷದಲ್ಲಿರುವ ಕೆಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಲಿದ್ದಾರೆ. ಕುಟುಂಬ ರಾಜಕಾರಣ ಕುರಿತಂತೆ ಪಕ್ಷದ ತೀರ್ಮಾನವೇ ಅಂತಿಮ. ನಮ್ಮ ಕುಟುಂಬದಲ್ಲಿ ಒಡಕು ಇಲ್ಲ. ನಾನು ಈ ಬಾರಿ ಯಮಕನಮರಡಿ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುತ್ತೇನೆ’ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.