ADVERTISEMENT

78 ಕೊಳವೆ ಬಾವಿ ಕೊರೆಯಿಸಲು ನಿರ್ಧಾರ

ನೀರಿನ ಅಭಾವ: ಜಲ ಸೆಲೆ ಹುಡುಕುವ ಕಾರ್ಯ ಆರಂಭ, ಹಳೇ ಹುಬ್ಬಳ್ಳಿ, ಉಣಕಲ್‌ನಲ್ಲಿ ಹೆಚ್ಚು ಬೇಡಿಕೆ

ಪ್ರಮೋದ ಜಿ.ಕೆ
Published 24 ಮಾರ್ಚ್ 2018, 10:41 IST
Last Updated 24 ಮಾರ್ಚ್ 2018, 10:41 IST

ಹುಬ್ಬಳ್ಳಿ: ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಮಹಾನಗರ ಪಾಲಿಕೆ, ಅವಳಿ ನಗರಗಳಲ್ಲಿ ಒಟ್ಟು 78 ಕೊಳವೆ ಬಾವಿಗಳನ್ನು ಕೊರೆಯಿಸಲು ಮುಂದಾಗಿದೆ. ಹಳೇ ಹುಬ್ಬಳ್ಳಿ, ಉಣಕಲ್‌ ಭಾಗದಲ್ಲಿ ಹೆಚ್ಚು ಬೇಡಿಕೆ ವ್ಯಕ್ತವಾಗಿದೆ.

ಅಮ್ಮಿನಬಾವಿ-ಹುಬ್ಬಳ್ಳಿ ಮಧ್ಯದ ಕೊಳವೆ ಮಾರ್ಗದಲ್ಲಿ ಕೆಲ ದಿನಗಳ ಹಿಂದೆ ದುರಸ್ತಿ ಕಾರ್ಯ ನಡೆದಿದ್ದರಿಂದ 15 ದಿನ ನೀರು ಬಂದಿರಲಿಲ್ಲ. ಆಗ ಸಾರ್ವಜನಿಕರು ನೀರಿಗಾಗಿ ಪರದಾಡಿದ್ದರು. ಆದ್ದರಿಂದ ಶಾಸಕರು, ಅಧಿಕಾರಿಗಳು, ಪಾಲಿಕೆಯ ಸದಸ್ಯರು, ಮೇಯರ್‌ ಸೇರಿ ಸಭೆ ನಡೆಸಿ ಅಗತ್ಯ ಇರುವ ಕಡೆ ತುರ್ತಾಗಿ ಕೊಳವೆ ಬಾವಿ ಕೊರೆಯಿಸುವ ತೀರ್ಮಾನ ಕೈಗೊಂಡಿದ್ದರು. ಅದರಂತೆ ಎರಡು ದಿನಗಳ ಹಿಂದೆ ಜಲ ಸೆಲೆ ಗುರುತಿಸುವ ಕಾರ್ಯ ಆರಂಭವಾಗಿದೆ.

ರಾಮನಗರ, ತಾರಿಹಾಳ, ವೆಂಕಟೇಶ್ವರ ನಗರ ಸಮೀಪದ ಡಬಲ್‌ ರಸ್ತೆ ಭಾಗ, ಸ್ವಾತಂತ್ರ್ಯ ಯೋಧರ ಕಾಲೊನಿಯಲ್ಲಿ ಜಾಗ ಗುರುತಿಸಲಾಗಿದೆ. ಕೆಲ ದಿನಗಳಲ್ಲಿ ಕೊಳವೆ ಬಾವಿ ಕೊರೆಯಿಸುವ ಕೆಲಸ ಆರಂಭವಾಗಲಿದೆ ಎಂದು ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಕೊಳವೆ ಬಾವಿ ಅಗತ್ಯವಿರುವ ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಜನ, ಪಾಲಿಕೆ ಸದಸ್ಯರನ್ನು ಕರೆಯಿಸಿ ಚರ್ಚಿಸಲಾಗಿದೆ. ಎಲ್ಲರಿಗೂ ಅನುಕೂಲವಾಗುವಂಥ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯಿಸಲಾಗುವುದು. ಜನರ ಅಭಿಪ್ರಾಯ ಸಂಗ್ರಹಿಸಿ ಜಲ ಸೆಲೆ ಪತ್ತೆ ಮಾಡಲಾಗುತ್ತಿದೆ ಎಂದು ಪಾಲಿಕೆಯ ಜೂನಿಯರ್ ಎಂಜಿನಿಯರ್ ಉಮೇಶ ಸೀಗೇಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಸವೇಶ್ವರ ವೃತ್ತ, ಚವ್ಹಾಣ ಪಾರ್ಕ್‌, ನಂದಿನಿ ಲೇಔಟ್‌, ಪ್ರಿಯದರ್ಶಿನಿ ಕಾಲೊನಿ, ಸಹಾಸ್ರರ್ಜುನ ನಗರ, ಆನಂದ ನಗರ, ನೆಹರೂ ನಗರ ಮತ್ತು ರಾಜೀವ ನಗರಗಳಲ್ಲಿ  ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಈಗ ಹಳೇ ಹುಬ್ಬಳ್ಳಿ,ಮಂಟೂರು ರಸ್ತೆ, ಉಣಕಲ್‌, ಗೋಕಾಕ ರಸ್ತೆ ಭಾಗದಲ್ಲಿ ಹೆಚ್ಚು  ಬೇಡಿಕೆ ವ್ಯಕ್ತವಾಗಿದೆ’ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ಹೇಳಿದರು.

ಬೇಗನೆ ಕೊರೆಯಿಸಿ: ‘ಬೇಸಿಗೆ ಈಗಾಗಲೇ ಆರಂಭವಾಗಿದ್ದು ನೀರಿನ ಅಭಾವ ತಲೆದೋರಿದೆ. ಈ ವೇಳೆಗಾಗಲೇ ಕೊಳವೆ ಬಾವಿಗಳನ್ನು ಕೊರೆಯಿಸಿದ್ದರೆ ಜನರಿಗೆ ಅನುಕೂಲವಾಗುತ್ತಿತ್ತು. ಈಗಲಾದರೂ, ಆದಷ್ಟು ಶೀಘ್ರ ಕ್ರಮಕೈಗೊಳ್ಳಬೇಕು. ಇಲ್ಲವಾದರೆ, ನೀರಿಗಾಗಿ ಎದುರುನೋಡುವುದೇ ನಿತ್ಯದ ಕೆಲಸ
ವಾಗುತ್ತದೆ’ ಎಂದು ಉಣಕಲ್‌ ನಿವಾಸಿ ಮೈಲಾರಪ್ಪ ಹೇಳಿದರು.

ಕೊಳವೆ ಬಾವಿ ನೀರೇ ಆಧಾರ: ‘ಹಳೇ ಹುಬ್ಬಳ್ಳಿಯಲ್ಲಿ ನೀರಿನ ಅಗತ್ಯ ಹೆಚ್ಚಿದ್ದು ಕೊಳವೆ ಬಾವಿ ನೀರೇ ಜನರ ಬದುಕಿಗೆ ಆಧಾರವಾಗಿದೆ. ಪಾಲಿಕೆ ವತಿಯಿಂದಕೊರೆಯಿಸಲಾಗುವ ಎರಡು ಕೊಳವೆ ಬಾವಿಗಳಿಂದ ಜನರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎಂದು ಹಳೇಹುಬ್ಬಳ್ಳಿಯ 61ನೇ ವಾರ್ಡ್‌ನ ಪಾಲಿಕೆ ಸದಸ್ಯ ದಶರಥ ವಾಲಿ ಹೇಳಿದರು.
**
‘ಕೇಳಿದ್ದು ನಾಲ್ಕು, ಸಿಕ್ಕಿದ್ದು ಎರಡು’

‘ನನ್ನ ವಾರ್ಡ್‌ ವ್ಯಾಪ್ತಿಯಲ್ಲಿ ನೀರಿನ ಅಗತ್ಯತೆ ಹೆಚ್ಚಿದ್ದು ನಾಲ್ಕು ಕೊಳವೆ ಬಾವಿಗಳನ್ನು ಕೊರೆಯಿಸುವಂತೆ ಕೋರಿದ್ದೆ. ಎರಡು ಕೊಳವೆ ಬಾವಿ ಕೊರೆಯಿಸಲು ಈಗಾಗಲೇ ನಿರ್ಧರಿಸಲಾಗಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಳವೆ ಬಾವಿ ಕೊರೆಯಿಸುವಂತೆ ಮನವಿ ಸಲ್ಲಿಸುತ್ತೇನೆ’ ಎಂದು  ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ ಹೇಳಿದರು.

’ಉಣಕಲ್‌ ವ್ಯಾಪ್ತಿಯಲ್ಲಿ ವಾಸವಿರುವ ಎಲ್ಲ ಜನರಿಗೆ ನೀರು ಸಂಗ್ರಹಿಸಿಟ್ಟುಕೊಳ್ಳಲು ಅಗತ್ಯ ಸಾಮಗ್ರಿಗಳಿಲ್ಲ. ಆದ್ದರಿಂದ, ಪ್ರತಿದಿನ ನೀರಿನ ಅಗತ್ಯತೆ ಇರುತ್ತದೆ. ಉಣಕಲ್‌ನಲ್ಲಿ ಈಗಾಗಲೇ ಎಂಟು ಕೊಳವೆಬಾವಿಗಳಿದ್ದು, ಮತ್ತೆರಡು ಕೊರೆಯಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆ. ಲಿಂಗರಾಜ ನಗರದಲ್ಲಿನ ಎಂಟು ಕೊಳವೆ ಬಾವಿಗಳಲ್ಲಿ ಕೆಲವು ದುರಸ್ತಿ ಮಾಡಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.