ಹುಬ್ಬಳ್ಳಿ: ‘ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಸರ್ಕಾರಿ ಬೊಕ್ಕಸದ ಮೂಲಕ ಮತ ಸೆಳೆಯುವ ಯೋಜನೆಯಾಗಿದೆ’ ಎಂದು ಮಾಜಿ ಸಚಿವ ಸಿ.ಟಿ. ರವಿ ಟೀಕಿಸಿದರು.
ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಮತಬ್ಯಾಂಕ್‌ಗೆ ಸೀಮಿತ. ಮಹಾವಂಚನೆಯ ಹಾಗೂ ರಾಜಕೀಯ ಕುತಂತ್ರದಿಂದ ಕೂಡಿದ ಯೋಜನೆಯಾಗಿದೆ’ ಎಂದು ಹರಿಹಾಯ್ದರು.
‘ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಬಡವರ ಬದುಕನ್ನು ಹಸನುಗೊಳಿಸುವ ಹಾಗೂ ದೇಶವನ್ನು ಆರ್ಥಿಕವಾಗಿ ಸಬಲಗೊಳಿಸುವ ಯೋಜನೆಗಳಾಗಿವೆ’ ಎಂದು ಹೇಳಿದರು.
‘ಕಳೆದ 10 ವರ್ಷಗಳಲ್ಲಿ ಹುಬ್ಬಳ್ಳಿ– ಧಾರವಾಡಕ್ಕೆ ಕೇಂದ್ರ ಸರ್ಕಾರ ನೀಡಿದ ಯೋಜನೆಗಳ ಪಟ್ಟಿ ನೀಡುತ್ತೇವೆ. ಜನರು ಯುಪಿಎ ಆಡಳಿತ ಹಾಗೂ ಮೋದಿ ಆಡಳಿತವನ್ನು ಹೋಲಿಕೆ ಮಾಡಿ, ಯಾರಿಗೆ ಮತ ನೀಡಬೇಕು ಎನ್ನುವ ಬಗ್ಗೆ ನಿರ್ಣಯ ಕೈಗೊಳ್ಳಲಿ’ ಎಂದು ತಿಳಿಸಿದರು.
‘ನೀತಿ, ನೇತೃತ್ವ ಹಾಗೂ ನಿಯತ್ತು ಅಂಶಗಳ ಮೇಲೆ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ದೇಶ ಮೊದಲು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದು ನಮ್ಮ ನೀತಿಯಾಗಿದೆ. ಪ್ರಧಾನಿ ಮೋದಿ ಅವರ ಸದೃಢ ನೇತೃತ್ವ ಪಕ್ಷಕ್ಕಿದೆ. ಒಂದು ಪೈಸೆಯ ಭ್ರಷ್ಟಾಚಾರವಿಲ್ಲದೇ ಅರ್ಹ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆ ಮೂಲಕ ಹಣ ನೀಡುವ ನಿಯತ್ತು ನಮಗಿದೆ’ ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ತೆರಿಗೆ ಪಾಲು ಕೊಟ್ಟಿಲ್ಲ, ಬರ ಪರಿಹಾರ ನೀಡಿಲ್ಲ ಹಾಗೂ ವಿವಿಧ ಯೋಜನೆಗಳ ಸಹಾಯಧನ ನೀಡಿಲ್ಲವೆಂದು ಸುಳ್ಳು ಹೇಳುತ್ತಿದೆ. ಯುಪಿಎ ಸರ್ಕಾರದ ಅವಧಿಗಿಂತ ಹೆಚ್ಚು ಅನುದಾನವನ್ನು ಎನ್‌ಡಿಎ ಸರ್ಕಾರ ನೀಡಿದೆ ಎಂದು ತಿಳಿಸಿದರು.
ಧರ್ಮಾಧರಿತ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೂ, ಕಾಂಗ್ರೆಸ್ ಸರ್ಕಾರ ಒಬಿಸಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಿದ್ದು ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದರು.
ನೇಹಾ ಹಿರೇಮಠ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡ್ಯಾಮೇಜ್ ಕಂಟ್ರೋಲ್ ಗೆ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ಬದ್ಧತೆ ಇದ್ದರೆ, ಯೋಗಿ ಮಾದರಿಯ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸಂಚಾಲಕ ಕಿರಣ, ವಕ್ತಾರ ಗುರುಪಾಟೀಲ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.