ADVERTISEMENT

ಧಾರವಾಡ: ಪಶುವೈದ್ಯರಿಲ್ಲ; ಚಿಕಿತ್ಸೆಯೂ ಇಲ್ಲ

ಧಾರವಾಡ ಜಿಲ್ಲೆಗೆ ಮಂಜೂರಾದ 76 ಪೈಕಿ 29 ಹುದ್ದೆಗಳು ಖಾಲಿ

ಗಣೇಶ ವೈದ್ಯ
Published 14 ಸೆಪ್ಟೆಂಬರ್ 2023, 6:11 IST
Last Updated 14 ಸೆಪ್ಟೆಂಬರ್ 2023, 6:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಂಜೂರಾದ ಎಲ್ಲ ಹುದ್ದೆಗಳಿಗೆ ಪಶು ವೈದ್ಯರ ನೇಮಕಾತಿ ಆಗದ ಕಾರಣ  ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ.

ಜಿಲ್ಲೆಗೆ 76 ಪಶುವೈದ್ಯರ ಹುದ್ದೆಗಳು ಮಂಜೂರಾಗಿವೆ. ಆದರೆ, 47 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಾರೆ. ಇನ್ನೂ 29 ಹುದ್ದೆಗಳು ಖಾಲಿ ಉಳಿದಿವೆ. ಐವರು ಮುಖ್ಯ ಪಶುವೈದ್ಯಾಧಿಕಾರಿಗಳು, ಮೂರು ಹಿರಿಯ ಪಶುವೈದ್ಯಾಧಿಕಾರಿಗಳು ಮತ್ತು 21 ಪಶು ವೈದ್ಯಾಧಿಕಾರಿಗಳ ಹುದ್ದೆಗಳೂ ಭರ್ತಿಯಾಗಿಲ್ಲ.

ADVERTISEMENT

ಇದರ ಪರಿಣಾಮ ಹಲವು ಆಸ್ಪತ್ರೆಗಳಲ್ಲಿ ಪಶುವೈದ್ಯರಿಲ್ಲ. ಕೆಲ ಪಶು ವೈದ್ಯರಿಗೆ ಸಮೀಪದ ಆಸ್ಪತ್ರೆಗಳ ಜವಾಬ್ದಾರಿ ವಹಿಸಲಾಗಿದೆ. ಇದರಿಂದ ಆಸ್ಪತ್ರೆಯಲ್ಲಿ ಸಕಾಲಕ್ಕೆ ಪಶುವೈದ್ಯರು ಸಿಗುವುದಿಲ್ಲ.

ಕುಂದಗೋಳ ತಾಲ್ಲೂಕಿನಲ್ಲಿ ಅತಿಹೆಚ್ಚು ಅಂದರೆ ಮಂಜೂರಾದ 12 ವೈದ್ಯಾಧಿಕಾರಿಗಳ ಪೈಕಿ 9 ಹುದ್ದೆಗಳು ಖಾಲಿ ಇವೆ. ಈ ತಾಲ್ಲೂಕಿನಲ್ಲಿ 50 ಸಾವಿರಕ್ಕೂ ಅಧಿಕ ಜಾನುವಾರುಗಳು ಮತ್ತು 18 ಸಾವಿರಕ್ಕೂ ಹೆಚ್ಚು ಕೋಳಿಗಳು ಇವೆ. ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲ್ಲೂಕಿನಲ್ಲಿ ಮಾತ್ರ ಮಂಜೂರಾದ 19 ಹುದ್ದೆಗಳ ಪೈಕಿ 17 ವೈದ್ಯರು ಇದ್ದಾರೆ’ ಎಂದು ಪಶುವೈದ್ಯಕೀಯ ಇಲಾಖೆ ಸಿಬ್ಬಂದಿ ತಿಳಿಸಿದರು.

ಸಿಗದ ಚಿಕಿತ್ಸೆ: ‘ನಾನು ಎರಡು ದನಗಳನ್ನು ಸಾಕಿದ್ದೆ. ಕಳೆದ ಏಪ್ರಿಲ್‌ನಲ್ಲಿ ಹಸುವಿಗೆ ಅನಾರೋಗ್ಯವಾದಾಗ, ಸಕಾಲಕ್ಕೆ ಪಶುವೈದ್ಯರು ಬರಲಿಲ್ಲ. ಮರುದಿನ ಬೆಳಿಗ್ಗೆ ಬಂದು ಇಂಜೆಕ್ಷನ್ ಕೊಟ್ಟರು. ಸಂಜೆ ಅದು ತೀರಿಕೊಂಡಿತು. ಇದರಿಂದ ನೊಂದು ಮತ್ತೊಂದು ದನ ಮಾರಿದೆ. ಈಗ ಮೂರು ಮೇಕೆ ಸಾಕುತ್ತಿದ್ದೇನೆ’ ಎಂದು ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ರೈತ ಯಲ್ಲಪ್ಪ ಕುರಹಟ್ಟಿ ತಿಳಿಸಿದರು.

‘ವೈದ್ಯರ ಸಮಸ್ಯೆಯಿಂದ ಬಹುತೇಕ ಪಶು ಸಾಕಣೆದಾರರು ಬೇಸರಗೊಂಡಿದ್ದಾರೆ. ಆದಷ್ಟು ಬೇಗನೇ ವೈದ್ಯರ ನೇಮಕವಾಗಿ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗಬೇಕು’ ಎಂದು ಅವರು ತಿಳಿಸಿದರು.

ಔಷಧ ಕೊರತೆ ಇಲ್ಲ: ‘ಜಿಲ್ಲೆಯಲ್ಲಿ ಪರೀಕ್ಷಕರು, ಸಿಬ್ಬಂದಿ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಷ್ಟು ಔಷಧ ಲಭ್ಯವಿದೆ’ ಎಂದು ಧಾರವಾಡ ಜಿಲ್ಲಾ ಪಶು ಸಂಗೋಪನೆ ಇಲಾಖೆ ಆಡಳಿತ ವಿಭಾಗದ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.