ADVERTISEMENT

ಹುಬ್ಬಳ್ಳಿ | ಹೆಸ್ಕಾಂನಲ್ಲಿ ₹51 ಕೋಟಿ ವಂಚನೆ: ಲೆಕ್ಕಾಧಿಕಾರಿ ಸೇರಿ ಐವರು ಅಮಾನತು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 4:49 IST
Last Updated 21 ಡಿಸೆಂಬರ್ 2023, 4:49 IST
ಹೆಸ್ಕಾಂ ಲೊಗೊ
ಹೆಸ್ಕಾಂ ಲೊಗೊ   

ಹುಬ್ಬಳ್ಳಿ: ಹೆಸ್ಕಾಂನ ಹುಬ್ಬಳ್ಳಿಯ ಉಗ್ರಾಣದಲ್ಲಿ ನಡೆದ ₹51 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸ್ಕಾಂ ಲೆಕ್ಕಾಧಿಕಾರಿ ಸೇರಿದಂತೆ ಐವರನ್ನು ಅಮಾನತು ಮಾಡಲಾಗಿದೆ.

ಲೆಕ್ಕಾಧಿಕಾರಿ ಬೆಂಜಮಿನ್‌ ಮಸ್ಕನರ್ಸ್‌, ಸಹಾಯಕ ಲೆಕ್ಕಾಧಿಕಾರಿ ಯು.ಎಸ್.ಉಳ್ಳಾಗಡ್ಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ವಿಶ್ವನಾಥ ಶಿರಹಟ್ಟಿಮಠ, ವಸಂತಕುಮಾರ ರಾಠೋಡ, ಅಂಜಿನಪ್ಪ ಬಿ., ಅಮಾನತುಗೊಂಡವರು.

ಅವ್ಯವಹಾರದ ಕುರಿತು ತನಿಖೆ ನಡೆಸಲು ಐವರು ಅಧಿಕಾರಿಗಳ ತಂಡ ರಚಿಸಲಾಗಿತ್ತು. ತಂಡ ಮೂರು ವರ್ಷ ತನಿಖೆ ನಡೆಸಿ, ಮಧ್ಯಂತರ ವರದಿ ಸಲ್ಲಿಸಿದ್ದು, ಅದರನ್ವಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಐವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ADVERTISEMENT

ಏನಿದು ಪ್ರಕರಣ?

ಬಸವರಾಜ ಸಿ.ಮಳಿಮಠ ಅವರು 2007ರಿಂದ 2023ರ ಜುಲೈ 31ರವರೆಗೆ ಹೆಸ್ಕಾಂನ ಕಾರ್ಯ ಮತ್ತು ಪಾಲನೆ ನಗರದ ವಿಭಾಗ ಮತ್ತು 2014ರಿಂದ 2023ರ ಜುಲೈ 31ರವರಗೆ ಗ್ರಾಮೀಣ ವಿಭಾಗದ ಹುಬ್ಬಳ್ಳಿಯ ಉಗ್ರಾಣದಲ್ಲಿ ಉಗ್ರಾಣ ಪಾಲಕರಾಗಿ ನಿವೃತ್ತರಾಗಿದ್ದಾರೆ‌.  ಈ ಅವಧಿಯಲ್ಲಿ ಅವ್ಯಹಾರ ನಡೆದಿರುವ ಬಗ್ಗೆ ಹೆಸ್ಕಾಂಗೆ ದೂರು ಸಲ್ಲಿಕೆಯಾಗಿತ್ತು.

ಬಸವರಾಜ ಮಳಿಮಠ ಅವರು ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ₹51,69,49,054 ಮೌಲ್ಯದ ಸಾಮಗ್ರಿಗಳನ್ನು ದುರುಪಯೋಗ ಪಡಿಸಿಕೊಂಡು, ಕಂಪನಿಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಮಾನತುಗೊಂಡಿರುವ ಆರೋಪಿಗಳು ತಮ್ಮ ಅವಧಿಯಲ್ಲಿ ಹುಬ್ಬಳ್ಳಿ ನಗರ ವಿಭಾಗದ ಉಗ್ರಾಣದಿಂದ ಗ್ರಾಮೀಣ ವಿಭಾಗದ ಉಗ್ರಾಣಕ್ಕೆ ಭೌತಿಕವಾಗಿ ಸಾಮಗ್ರಿಗಳನ್ನು ವರ್ಗಾಯಿಸದೆ ಸಾಮಗ್ರಿಗಳನ್ನು ಮತ್ತು ಅದರ ಮೊತ್ತದಷ್ಟು ಸರಕು ಪಟ್ಟಿ, ಸುಳ್ಳು ದಾಖಲೆ ಸೃಷ್ಟಿಸಿ ಅದರ ಮೊತ್ತವನ್ನು ದುರುಪಯೋಗಪಡಿಸಿಕೊಂಡು, ಅವ್ಯವಹಾರದಲ್ಲಿ ಭಾಗಿಯಾಗಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.