ADVERTISEMENT

ಹುಬ್ಬಳ್ಳಿ | ಕಿರಿದಾದ ದಾರಿ: ಸಾರ್ವಜನಿಕರಿಗೆ ಕಿರಿಕಿರಿ

ಗಣೇಶ ವೈದ್ಯ
Published 15 ಜನವರಿ 2024, 4:49 IST
Last Updated 15 ಜನವರಿ 2024, 4:49 IST
<div class="paragraphs"><p>ಹಳೇ ಹುಬ್ಬಳ್ಳಿ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಗಳು ರಸ್ತೆಗೆ ಬಂದಿದ್ದರಿಂದ ವಾಹನ ಸಂಚಾರಕ್ಕೆ ಸ್ಥಳಾವಕಾಶವೇ ಇಲ್ಲದಂತಾಗಿದೆ – ಪ್ರಜಾವಾಣಿ ಚಿತ್ರ: ಗುರು ಹಬೀಬ</p></div>

ಹಳೇ ಹುಬ್ಬಳ್ಳಿ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಗಳು ರಸ್ತೆಗೆ ಬಂದಿದ್ದರಿಂದ ವಾಹನ ಸಂಚಾರಕ್ಕೆ ಸ್ಥಳಾವಕಾಶವೇ ಇಲ್ಲದಂತಾಗಿದೆ – ಪ್ರಜಾವಾಣಿ ಚಿತ್ರ: ಗುರು ಹಬೀಬ

   

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ವಾಣಿಜ್ಯ ಕಾರ್ಯಚಟುವಟಿಕೆಗಳು ದಿನೇದಿನೇ ವಿಸ್ತರಿಸುತ್ತಲೇ ಇವೆ. ಇಲ್ಲಿಗೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಆದರೆ ಅದಕ್ಕೆ ತಕ್ಕಂತೆ ತೀರಾ ಅಗತ್ಯವಾದ ರಸ್ತೆ ಸೌಲಭ್ಯಗಳು ಮಾತ್ರ ಉತ್ತಮಗೊಳ್ಳದೇ ಇರುವುದು ಸಾರ್ವಜನಿಕರಿಗೆ ತಲೆನೋವಾಗಿದೆ.

ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳ ಜನರು ತಮ್ಮ ವಾಣಿಜ್ಯ ಚಟುವಟಿಕೆ, ಖರೀದಿಗಾಗಿ ಹುಬ್ಬಳ್ಳಿಯನ್ನು ಅವಲಂಬಿಸಿದ್ದಾರೆ. ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ ಹೀಗೆ ಸುತ್ತಮುತ್ತಲಿನ ಜಿಲ್ಲೆಗಳ ಅಪಾರ ಸಂಖ್ಯೆ ಜನರು ನಿತ್ಯ ಇಲ್ಲಿಗೆ ಬರುತ್ತಾರೆ. ಅಷ್ಟೇ ಅಲ್ಲದೇ, ಇದೇ ನಗರದ ನಿವಾಸಿಗಳು ತಮ್ಮ ಕಚೇರಿ ಕಾರ್ಯಗಳಿಗಾಗಿ ಓಡಾಡುವುದು ಸಾಮಾನ್ಯ. ಹೀಗಾಗಿ ನಗರದ ಪ್ರಮುಖ ರಸ್ತೆಗಳು ಇಡೀ ದಿನ ಜನದಟ್ಟಣೆ, ವಾಹನ ಸಂಚಾರದಿಂದ ಗಿಜಿಗುಡುತ್ತಿರುತ್ತದೆ. ಅದೇ ಕಾರಣಕ್ಕೆ ಇಲ್ಲಿ ಓಡಾಟವು ಸುಲಭವಲ್ಲ.

ADVERTISEMENT

ಒಂದೆಡೆ ಕೆಲವು ರಸ್ತೆಗಳು ಕಿರಿದಾಗಿದ್ದು, ಎರಡು ವಾಹನ ಏಕ ಕಾಲದಲ್ಲಿ ಸರಾಗವಾಗಿ ಓಡಾಡುವುದು ಕಷ್ಟವೆನ್ನುವಂತಿದೆ. ಅದೇ ಸಂದರ್ಭದಲ್ಲಿ ಕಿರಿದಾದ ರಸ್ತೆಯ ಮೇಲೆಯೇ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಮಾಡುವುದು, ರಸ್ತೆ ಬದಿಯಲ್ಲೇ ತಳ್ಳುಗಾಡಿ, ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುವುದು ಕೂಡ ಸುಗಮ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿವೆ.

ಮತ್ತೆ ಕೆಲ ಕಡೆಗಳಲ್ಲಿ ಸಂಚಾರ ಸುಲಭವಾಗಲಿ, ಅಪಘಾತಗಳು ನಡೆಯದಿರಲಿ ಎಂಬ ಉದ್ದೇಶದಿಂದ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದ್ದರೂ ಬೈಕ್ ಸವಾರರಿಗೆ ಅವು ಲೆಕ್ಕಕ್ಕೇ ಇರುವುದಿಲ್ಲ. ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಬೈಕ್ ನುಗ್ಗಿಸಿ ವಾಹನ ದಟ್ಟಣೆಗೆ ಕಾರಣರಾಗುತ್ತಾರೆ. ಇಂಥ ಸಂಚಾರ ನಿಯಮ ಉಲ್ಲಂಘನೆಯ ವಿರುದ್ಧ ಸಂಚಾರ ಪೊಲೀಸರು ಕ್ರಮ ಕೈಗೊಳ್ಳುತ್ತಲೇ ಇದ್ದರೂ ಅವು ಸಾಲುತ್ತಿಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಜನರು ಅದರಿಂದ ಎಚ್ಚೆತ್ತುಕೊಳ್ಳುತ್ತಿಲ್ಲ. ಇನ್ನೂ ಹೆಚ್ಚು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದುದು ಅಪೇಕ್ಷಣೀಯ.

ಸಿಬಿಟಿ ಪಕ್ಕದ ಶಾ ಬಜಾರ್ ರಸ್ತೆ ಬದಿಯಲ್ಲಿ ಸಮ–ಬೆಸ ದಿನಾಂಕದ ಅನ್ವಯ (1, 3, 5ರಂತೆ ಬೆಸ ಸಂಖ್ಯೆ ದಿನಾಂಕದಂದು ರಸ್ತೆಯ ಒಂದು ಬದಿಯಲ್ಲಿ ಬೈಕ್ ಪಾರ್ಕಿಂಗ್ ಮಾಡಿದರೆ, 2, 4, 6ರಂದು ಇನ್ನೊಂದು ಬದಿಯಲ್ಲಿ ಬೈಕ್ ನಿಲ್ಲಿಸುವುದು) ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರೂ ಅವು ಪಾಲನೆ ಆಗುತ್ತಿಲ್ಲ. ಅನಿವಾರ್ಯವಾಗಿ ನಿತ್ಯವೂ ಎರಡೂ ಕಡೆಗಳಲ್ಲಿ ಬೈಕ್‌ಗಳನ್ನು ನಿಲುಗಡೆ ಮಾಡಲೇಬೇಕಾದಷ್ಟು ವಾಹನದಟ್ಟಣೆ ಮಾರುಕಟ್ಟೆಗಳಲ್ಲಿದೆ.

ಇವೆಲ್ಲವನ್ನೂ ಮೀರಿಸುವಂತೆ ನಗರದಲ್ಲಿ ನಿರಂತರವಾಗಿ ಒಂದಿಲ್ಲೊಂದು ಕಡೆ ರಸ್ತೆ ಕಾಮಗಾರಿ ನಡೆಯುತ್ತಲೇ ಇರುತ್ತವೆ. ಇವು ಎಂದೂ ಮುಗಿಯದ ಅಭಿವೃದ್ಧಿ ಕಾಮಗಾರಿಗಳಾಗಿ ಜನರಿಗೆ ಕಿರಿಕಿರಿ ಉಂಟಾಗಿದೆ.

ಕೋರ್ಟ್ ಸರ್ಕಲ್ ಬಳಿಯ ಸಾಯಿ ಮಂದಿರದ ಎದುರಿನ ರಸ್ತೆಯು ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಮಾರುಕಟ್ಟೆ, ಕೇಶ್ವಾಪುರ ರಸ್ತೆಗಳ ಸಂಗಮವಾಗಿದೆ. ಆದರೆ ಇದು ತೀರಾ ಚಿಕ್ಕದಾಗಿದ್ದು, ವಾಹನ ದಟ್ಟಣೆ ನಿತ್ಯ ನಿರಂತರ. ಇಲ್ಲಿ ಸದಾ ಕಾಲ ವಾಹನಗಳು ಶಬ್ದ ಮಾಡುತ್ತ ಆಮೆ ವೇಗದಲ್ಲಿ ಸಂಚರಿಸುವುದು ಸಾಮಾನ್ಯ.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ದಾಜಿಬಾನಪೇಟೆ ಮಾರ್ಗದ ಒಂದು ಬದಿಯಲ್ಲಿ ಸಲಾಗಿ ಬೈಕ್‌ಗಳನ್ನು ನಿಲ್ಲಿಸಲಾಗಿರುತ್ತದೆ. ಇನ್ನೊಂದು ಪಕ್ಕದಲ್ಲಿ ಉದ್ದಕ್ಕೂ ಹಣ್ಣು, ಹೂವು ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳು. ದುರ್ಗದಬೈಲ್ ಮಾರುಕಟ್ಟೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಇದೂ ಒಂದು. ಇಲ್ಲಿಯೇ ಆಗಾಗ ಎಮ್ಮೆಗಳು ಹಿಂಡುಹಿಂಡಾಗಿ ಗಾಂಭೀರ್ಯದಿಂದ ಸಾಗುವುದೂ ಉಂಟು.

‘ಪಕ್ಕದಲ್ಲೇ ಹೊಸದಾಗಿ ಜನತಾ ಬಜಾರ್ ನಿರ್ಮಾಣ ಮಾಡಲಾಗಿದೆ. ಅಲ್ಲಿ ನಮಗೆ ಮಳಿಗೆ ಕೊಟ್ಟರೆ ನಾವು ಅಲ್ಲಿಯೇ ವ್ಯಾಪಾರ ಮಾಡುತ್ತೇವೆ. ಮಳೆ, ಬಿಸಿಲಿಗೆ ಮೈ ಒಡ್ಡಿ ರಸ್ತೆ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿಯೇ ಇಲ್ಲ. ಕಟ್ಟಿ ವರ್ಷವಾದರೂ ಈವರೆಗೂ ಜನತಾ ಬಜಾರ್ ಜನರ ಸೇವೆಗೆ ಮುಕ್ತಗೊಂಡಿಲ್ಲ’ ಎನ್ನುತ್ತಾರೆ ಈ ರಸ್ತೆ ಅಂಚಿನಲ್ಲಿ ವ್ಯಾಪಾರ ಮಾಡುತ್ತಿರುವ ಸಿದ್ದಣ್ಣ ಎಂಬುವವರು.

ಮಹಾನಗರ ಪಾಲಿಕೆ ಕಚೇರಿ ಎದುರು, ಕೊಪ್ಪಿಕರ್ ರಸ್ತೆ, ಕೋಯಿನ್ ರಸ್ತೆ, ಚನ್ನಮ್ಮ ವೃತ್ತದಿಂದ ಮೂರುಸಾವಿರ ಮಠ ಸಂಪರ್ಕಿಸುವ ಅಂಚಟಗೇರಿ ಓಣಿ ಮುಖ್ಯ ರಸ್ತೆ, ಬಟರ್ ಮಾರ್ಕೆಟ್ ಬಳಿಯ ಬೆಳಗಾವಿ ಗಲ್ಲಿ ಇವೆಲ್ಲವೂ ಸದಾ ದಟ್ಟಣೆಯಿಂದ ಕೂಡಿರುತ್ತವೆ. ಇಲ್ಲಿನ ಸಂಚಾರ ಸುಗಮವಾದರೆ ವ್ಯಾಪಾರವೂ ಸರಾಗವಾಗುತ್ತದೆ ಎಂಬುದು ಇಲ್ಲಿನ ವ್ಯಾಪಾರಿಗಳ ನಿರೀಕ್ಷೆ.

‘ಗದಗ ರಸ್ತೆಯಿಂದ ರೈಲ್ವೆ ಅಂಡರ್ ಪಾಸ್ ದಾಟಿ ಸ್ಟೇಷನ್ ರಸ್ತೆಗೆ, ಅಂಬೇಡ್ಕರ್ ವೃತ್ತದ ಕಡೆಗೆ ಸೇರುವುದೆಂದರೆ ವಿಚಿತ್ರ ಭಯವೆನಿಸುತ್ತದೆ. ಇಲ್ಲಿ ನಾಲ್ಕು ರಸ್ತೆಗಳು ಸೇರುತ್ತವೆ. ಆದರೆ ಯಾವುದೇ ಸಿಗ್ನಲ್ ಇಲ್ಲ. ವಾಹನ ಸವಾರರು ಎಚ್ಚರ ವಹಿದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ’ ಎನ್ನುತ್ತಾರೆ ನಿತ್ಯ ಇದೇ ರಸ್ತೆಯಲ್ಲಿ ಓಡಾಡುವ ಬ್ಯಾಂಕ್ ಉದ್ಯೋಗಿ ಅಕ್ಷಯಕುಮಾರ.

ಹಬ್ಬಗಳಲ್ಲಿ ದಟ್ಟಣೆ ಹೆಚ್ಚು: ಪ್ರಮುಖ ಹಬ್ಬಗಳು ಬಂದರೆ ಸಾಕು, ಮಾರುಕಟ್ಟೆ ಕಡೆ ಕಾಲು ಹಾಕುವ ಪರಿಸ್ಥಿತಿಯೇ ಇರುವುದಿಲ್ಲ. ಎಲ್ಲ ಬೀದಿಗಳೂ ಜನರಿಂದ ತುಂಬಿತುಳುಕುತ್ತಿರುತ್ತವೆ. ಈ ಸಂದರ್ಭಗಳಲ್ಲಿ ಕಾರು ತೆಗೆದುಕೊಂಡು ಮಾರುಕಟ್ಟೆ ಹೊಕ್ಕರೆ ಹೊರಬರುವುದು ಸಾಹಸವೇ ಸರಿ.

ಹಳೇ ಹುಬ್ಬಳ್ಳಿ ಒಳಹೊಕ್ಕರೆ ರಸ್ತೆಗಳು ಹೇಗಿರಬಾರದು ಎಂಬುದಕ್ಕೆ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈ ಭಾಗದಲ್ಲಿ ಹಳೆಯ ಕಾಲದ ಮನೆಗಳು ರಸ್ತೆಗೆ ಒತ್ತಿಕೊಂಡೇ ಇವೆ. ಹೀಗಾಗಿ ರಸ್ತೆಗಳು ಸಹಜವಾಗಿಯೇ ಕಿರಿದಾಗಿವೆ. ಅಲ್ಲಿ ಬೇಕೆಂದರೂ ರಸ್ತೆ ವಿಸ್ತರಣೆ ಮಾಡುವುದು ಕಷ್ಟ.

‘ಪ್ರಮುಖವಾಗಿ ಆಗಬೇಕಾದ ರಸ್ತೆ ವಿಸ್ತರಣೆ ಕಾರ್ಯ ಈಗಾಗಲೇ ನಡೆದಿದೆ. ಮತ್ತೆ ಸದ್ಯಕ್ಕೆ ಅಂತಹ ಕಾರ್ಯಾಚರಣೆ ಮಾಡುವ ಯೋಜನೆ ಇಲ್ಲ. ಅತಿಕ್ರಮಣವನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ’ ಎಂದು ಹು–ಧಾ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕಾರಿಗಳಿಗೆ ತರಾಟೆ

ಸಂಚಾರ ಸಮಸ್ಯೆ ಕುರಿತು ಪಾಲಿಕೆ ಅಧಿಕಾರಿಗಳು ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೂ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಈಚೆಗೆ ನಡೆದ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ಅಧಿಕಾರಿಗಳನ್ನು ಈ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಹುಬ್ಬಳ್ಳಿ ಮಾರುಕಟ್ಟೆ ಸಂಪೂರ್ಣ ಹದಗೆಟ್ಟಿದೆ. 15 ದಿನಗಳಲ್ಲಿ ಮಾರುಕಟ್ಟೆ ಸುಧಾರಣೆಗೆ ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು’ ಎಂದೂ ಶಾಸಕರು ಸಭೆಯಲ್ಲಿ ಎಚ್ಚರಿಸಿದ್ದರು.

ಪೊಲೀಸರ ನೆರವಿನೊಂದಿಗೆ ಅತಿ ಶೀಘ್ರದಲ್ಲೇ ರಸ್ತೆ ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಿದ್ದೇವೆ. ಡಬ್ಬಾ ಅಂಗಡಿಗಳನ್ನು ವಶಪಡಿಸಿಕೊಳ್ಳುತ್ತೇವೆ.
ಈಶ್ವರ ಉಳ್ಳಾಗಡ್ಡಿ, ಆಯುಕ್ತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಹುಬ್ಬಳ್ಳಿಯ ಜನತಾ ಬಜಾರ್ ಪಕ್ಕದ ದಾಜಿಬಾನಪೇಟೆ ರಸ್ತೆಯ ಒಂದು ಬದಿಯಲ್ಲಿ ಬೈಕ್‌ಗಳನ್ನು ಸಾಲಾಗಿ ನಿಲ್ಲಿಸಲಾಗಿದ್ದರೆ ಇನ್ನೊಂದು ಬದಿಯಲ್ಲಿ ಬೀದಿಬದಿ ವ್ಯಾಪಾರಿಗಳು ವ್ಯಾಪಾರಕ್ಕೆ ಕುಳಿತಿರುತ್ತಾರೆ – ಪ್ರಜಾವಾಣಿ ಚಿತ್ರ: ಗುರು ಹಬೀಬ
ಯಾವಾಗಲೂ ಜನದಟ್ಟಣೆಯಿಂದ ಕೂಡಿರುವ ಹುಬ್ಬಳ್ಳಿಯ ಸಿಬಿಟಿ ಬಳಿಯ ಶಾ ಬಜಾರ್ – ಪ್ರಜಾವಾಣಿ ಚಿತ್ರ: ಗುರು ಹಬೀಬ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.